ADVERTISEMENT

ತೇಜಸ್ವಿ ನೆಪದಲ್ಲಿ ಕೀಟ ಪ್ರಪಂಚ ಪರಿಚಯ

‘ನಮ್ಮಮಕ್ಕಳಿಗೆ ಜಿರಲೆ, ಸೊಳ್ಳೆ, ಇರುವೆ ಬಿಟ್ಟರೆ ಮತ್ತೊಂದು ಕೀಟ ಗೊತ್ತಿಲ್ಲ ಕಣ್ರಿ...!’

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2014, 19:51 IST
Last Updated 14 ಸೆಪ್ಟೆಂಬರ್ 2014, 19:51 IST

ಬೆಂಗಳೂರು: ‘ಕೀಟಗಳ ಬಗ್ಗೆ ಸಾಹಿತಿ ತೇಜಸ್ವಿ ಏಕೆ ಅಷ್ಟೊಂದು ಆಸಕ್ತಿ ಹೊಂದಿದ್ದರು? ಅವರಿಗೂ ಕೀಟಗಳಿಗೂ ಹೇಗೆ ಸಂಬಂಧ? ಕೀಟ ಲೋಕವೆಂದರೆ ಹೀಗೆಲ್ಲಾ ಇದೆಯಾ? ಪ್ರಪಂಚದಲ್ಲಿ ನೆಲೆಸಿರುವ ವಿವಿಧ ಬಗೆಯ ಜೀವಿಗಳಲ್ಲಿ ಕೀಟ ಪ್ರಬೇಧಗಳ ಸಂಖ್ಯೆಯೇ ಅಧಿಕವಂತೆ, ಹೌದಾ? ಅಯ್ಯೊಯ್ಯೊ ನಮ್ಮ ಮಕ್ಕಳಿಗೆ ಜಿರಲೆ, ಸೊಳ್ಳೆ, ಇರುವೆ ಬಿಟ್ಟರೆ ಮತ್ತೊಂದು ಕೀಟ ಗೊತ್ತಿಲ್ಲ ಕಣ್ರಿ..!’

–ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನ ನೆಪದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಮೂಡಿಗೆರೆಯ ವಿಸ್ಮಯ ಪ್ರತಿಷ್ಠಾನ ಹಾಗೂ ವಿವಿಧ ಸಂಸ್ಥೆಗಳು ಆಯೋಜಿಸಿದ್ದ ‘ತೇಜಸ್ವಿ 75’ ಕೀಟಗಳು ಹಾಗೂ ಆರ್ಕಿಡ್ಸ್‌ ಛಾಯಾಚಿತ್ರ ಪ್ರದರ್ಶನದ ಸಮಾರೋಪ ಸಂದರ್ಭದಲ್ಲಿ ಕೀಟಗಳ ಛಾಯಾಚಿತ್ರ ವೀಕ್ಷಿಸುತ್ತಿದ್ದ ವ್ಯಕ್ತಿಯೊ­ಬ್ಬರು ತಮ್ಮ ಸ್ನೇಹಿತರಿಗೆ ಹೇಳುತ್ತಿದ್ದ ಪರಿ ಇದು.

ಅದಕ್ಕೆಲ್ಲಾ ಕೆಲವೇ ನಿಮಿಷಗಳಲ್ಲಿ ಉತ್ತರ ಸಿದ್ಧವಿತ್ತು. ತೇಜಸ್ವಿ ಅವರ ಒಡನಾಡಿ ಹಾಗೂ ಕೀಟ ತಜ್ಞ ಡಾ.ವಿ.ವಿ.ಬೆಳವಾಡಿ ಅವರು ನೀಡಿದ ಉಪನ್ಯಾಸವು ಪರಿಷತ್‌ ಸಭಾಂಗಣದಲ್ಲಿ ನೆರೆದಿದ್ದ ಜನರನ್ನು ಕೆಲಹೊತ್ತು ಹಿಡಿದಿಟ್ಟಿತು. ಪವರ್‌ ಪಾಯಿಂಟ್‌ ನೆರವಿನಿಂದ ಉದಾಹರಣೆಗಳ ಸಹಿತ ಮನಮುಟ್ಟುವಂತೆ ವಿವರಿಸಿದರು.

‘ಪ್ರಪಂಚದಲ್ಲಿ ನೆಲೆಸಿರುವ 17.5 ಲಕ್ಷ ಬಗೆಯ ಜೀವಿ­ಗಳಲ್ಲಿ ಕೀಟ ಪ್ರಬೇಧಗಳ ಪ್ರಮಾಣವೇ 10 ಲಕ್ಷ. 450 ಕೋಟಿ ವರ್ಷಗಳ ಹಿಂದೆಯೇ ಭೂಮಿ ಮೇಲೆ ಕೀಟಗಳಿದ್ದವು. ಮನುಷ್ಯನ ಉಗಮವಾ­ಗಿದ್ದು 40 ಲಕ್ಷ ವರ್ಷಗಳ ಹಿಂದೆ. 1200 ಬಗೆಯ ಕೀಟ­ಗಳು ಮಾತ್ರ ಅಪಾಯಕಾರಿ. ಇನ್ನುಳಿದವು ಪರಿ­ಸರ ಸ್ನೇಹಿ’ ಎಂದು ಅವರು ಮಾಹಿತಿ ನೀಡಿದರು.

‘ಮೂಡಿಗೆರೆಯಲ್ಲಿರುವ ಪ್ರಾದೇಶಿಕ ಸಂಶೋ­ಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ­ದಲ್ಲಿ ದಿನನಿತ್ಯ ಮಧ್ಯಾಹ್ನ ತೇಜಸ್ವಿ ಜೊತೆ ಕೀಟಗಳ ಲೋಕದ ಬಗ್ಗೆ ಚರ್ಚೆಯಲ್ಲಿ ತೊಡಗುತ್ತಿದ್ದೆವು. ತೋಟದಲ್ಲಿ ತಿರುಗಾಡುತ್ತಿದ್ದೆವು. ಅವರು ಆಸಕ್ತಿದಾಯಕ ಪ್ರಶ್ನೆಗಳನ್ನು ಕೇಳುತ್ತಿದ್ದರು. ವಿಶೇಷವೆಂದರೆ ಕೀಟಗಳ ಬಗ್ಗೆ ಒಬ್ಬ ವಿಜ್ಞಾನಿಗೂ ಗೊತ್ತಿಲ್ಲದ ವಿಷಯಗಳು ಅವರಿಗೆ ತಿಳಿದಿದ್ದವು’ ಎಂದು ಆ ಕ್ಷಣವನ್ನು ನೆನಪಿಸಿಕೊಂಡರು.

‘ಪ್ರತಿ ವರ್ಷ 1500ರಿಂದ 2000ರಷ್ಟು ವಿವಿಧ ಬಗೆಯ ಕೀಟಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಗೆದ್ದಲ ಹುಳು ದಿನಕ್ಕೆ 1500 ಮೊಟ್ಟೆ ಇಡುತ್ತದೆ. ಸೂಜಿಯ ತೂತಿನೊಳಗೆ ನುಗ್ಗಿ ಹೋಗುವಂಥ ಸಣ್ಣ ಕೀಟಗಳಿವೆ. 25 ಕೋಟಿ ವರ್ಷಗಳ ಹಿಂದೆಯೇ ಜಿರಲೆಗಳು ಇದ್ದವು. ಇಂಥ ವಿಷಯಗಳಿಂದಾಗಿ ತೇಜಸ್ವಿ ಅವರಲ್ಲಿ ಕೀಟಗಳ ಬಗ್ಗೆ ಆಸಕ್ತಿ ಹುಟ್ಟಿತು’ ಎಂದು ಅವರು ತಿಳಿಸಿದರು.

ಸೀತಾಳೆ ಹೂವು (ಆರ್ಕಿಡ್ಸ್‌್್) ಕುರಿತು ಡಾ.ಎಸ್.ಸಿ.­ಚಂದ್ರಶೇಖರ್ ಅವರು ಉಪನ್ಯಾಸ ನೀಡಿದರು. ಮಲೆನಾಡಿನ ಪರಿಸರದಲ್ಲಿರುವ ವಿವಿಧ ರೀತಿಯ ಸೀತಾಳೆ ಹೂವುಗಳನ್ನು ಪರಿಚಯಿಸಿಕೊಟ್ಟರು.

‘ಪ್ಯಾಪಿಯೋನ್‌–3’ ಕೃತಿ ಲೋಕಾರ್ಪಣೆ: ತೇಜಸ್ವಿ ಜೊತೆಗೂಡಿ ವಿಸ್ಮಯ 1, 2, 3 ಪುಸ್ತಕ ಬರೆದ ಲೇಖಕ ಪ್ರದೀಪ್‌ ಕೆಂಜಿಗೆ ಅವರ ‘ಪ್ಯಾಪಿಯೋನ್‌–3 ಬಾಜಿ’ ಅನುವಾದ ಕೃತಿಯನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಪುಸ್ತಕ ಬಿಡುಗಡೆಗೊಳಿಸಿದ ರಂಗಶಂಕರ ಸಂಸ್ಥೆಯ ಕಲಾ ನಿರ್ದೇಶಕ ಎಸ್.ಸುರೇಂದ್ರನಾಥ್, ‘ಸಾಹಿತ್ಯದ ಯಾವುದೇ ವರ್ಗಕ್ಕೆ ಸೇರದ ಪುಸ್ತಕ ಪ್ಯಾಪಿಯೋನ್‌. ಇದರಲ್ಲಿ ಮನರಂಜನೆ, ರೋಚ­ಕತೆ ಹಾಗೂ ಸಾಹಸಗಾಥೆ ಇದೆ. ತಾನು ಮಾಡಿ­ರದ ತಪ್ಪಿಗಾಗಿ ಜೀವಾವಧಿ ಶಿಕ್ಷೆಗೆ ಒಳಗಾದ ಪ್ಯಾಪಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಕಥೆ ಇದು’ ಎಂದು ತಿಳಿಸಿದರು.

ಲೇಖಕ ಎಸ್‌.ಆರ್‌.ವಿಜಯ ಶಂಕರ್‌ ಮಾತ­ನಾಡಿ, ‘ಭಾಷೆಯ ಅಭಿವೃದ್ಧಿಗೆ ತಂತ್ರಜ್ಞಾನದ ಬಳಕೆ ಅವಶ್ಯ ಎಂಬುದನ್ನು ತಿಳಿಸಿದ್ದ ತೇಜಸ್ವಿ, ಕನ್ನಡ ತಂತ್ರಾಂಶ  ಅಭಿವೃದ್ಧಿಪಡಿಸಬೇಕು ಎಂದು 15–20 ವರ್ಷಗಳ  ಹಿಂದೆಯೇ ಸಲಹೆ ನೀಡಿದ್ದರು. ಆದರೆ, ಅದನ್ನು ಯಾರೂ ಗಂಭೀರವಾಗಿ ಪರಿಗಣಿ­ಸಲಿಲ್ಲ. ಈಗ ಕನ್ನಡಕ್ಕೆ ಬಂದೊದಗಿರುವ ಪರಿಸ್ಥಿತಿ ಗಮ­ನಿಸಿದರೆ ಅವರ ಸಲಹೆ ಎಷ್ಟು ಮಹತ್ವದ್ದಾ­ಗಿತ್ತು ಎಂಬುದು ಗೊತ್ತಾಗುತ್ತದೆ’ ಎಂದು ಹೇಳಿದರು.

ಪುಸ್ತಕದ ಲೇಖಕ ಪ್ರದೀಪ್‌ ಕೆಂಜಿಗೆ ಅವರು, ಕೊಟ್ಟಿಗೆಹಾರದಲ್ಲಿ ತೇಜಸ್ವಿ ಸ್ಮರಣಾರ್ಥ ನಿರ್ಮಿಸ­ಲಾಗುತ್ತಿರುವ ಜೀವ ವೈವಿಧ್ಯ ಸಂಶೋಧನಾ ಕೇಂದ್ರದ ಬಗ್ಗೆ  ಮಾಹಿತಿ ನೀಡಿದರು. 

‘6ರಿಂದ 9 ತಿಂಗಳಲ್ಲಿ ಈ ಕೇಂದ್ರ ಕಾರ್ಯಾ­ರಂಭ ಮಾಡಲಿದೆ. ಈ ಕೇಂದ್ರದಲ್ಲಿ ಕೀಟಗಳ ವಸ್ತು­ಸಂಗ್ರಹಾಲಯ ನಿರ್ಮಿಸಲಾಗುತ್ತಿದ್ದು, ಸುಮಾರು 10 ಸಾವಿರ ಕೀಟಗಳ ಸಂಗ್ರಹದ ಗುರಿ ಇಟ್ಟು­ಕೊಳ್ಳಲಾಗಿದೆ. ಸಂಶೋಧನಾ ವಿದ್ಯಾರ್ಥಿಗಳು ಉಳಿದುಕೊಂಡು ಅಧ್ಯಯನ ಮಾಡಲು ಸಂಕೀರ್ಣ ಕಟ್ಟಲಾಗುವುದು’ ಎಂದು ವಿವರಿಸಿದರು.

‘ಸಂಶೋಧನಾ ಕೇಂದ್ರಕ್ಕೆ ಜಮೀನು ಹಾಗೂ ಅನುದಾನಕ್ಕಾಗಿ ತುಂಬಾ ಕಷ್ಟಪಡಬೇಕಾಯಿತು. ತೇಜಸ್ವಿ ಇದ್ದಿದ್ದರೆ ‘ಯಾಕ್ರಯ್ಯ, ಇದನ್ನೆಲ್ಲಾ ಮಾಡಿ ಜೀವನ ಹಾಳು ಮಾಡಿಕೊಳ್ಳುತ್ತೀರಿ’ ಎನ್ನುತ್ತಿದ್ದರೇನೊ? ಪರವಾಗಿಲ್ಲ. ಯುವ ಪೀಳಿಗೆಗೆ ಉಪಯೋಗವಾಗಲಿ, ತೇಜಸ್ವಿ ಅವರ ನೆನಪು ಉಳಿಯಲಿ ಎಂಬುದು ಇದರ ಉದ್ದೇಶ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.