ADVERTISEMENT

ದಟ್ಟಣೆಯಲ್ಲಿ ಸಿಲುಕಿದರೆ ಸಂದೇಶ ಕಳುಹಿಸಿ

ಸಂಚಾರ ಪೊಲೀಸರ ನೂತನ ಸಹಾಯವಾಣಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 20:08 IST
Last Updated 26 ನವೆಂಬರ್ 2015, 20:08 IST

ಬೆಂಗಳೂರು: ವಾಹನ ಸವಾರರು ಇನ್ನು ಮುಂದೆ ಸಂಚಾರ ದಟ್ಟಣೆಯಲ್ಲಿ ಸಿಲುಕಿದರೆ, 7259-100-100 ಮೊಬೈಲ್ ಸಂಖ್ಯೆಗೆ ವಾಟ್ಸ್‌ ಆ್ಯಪ್ ಸಂದೇಶ ಕಳುಹಿಸಿದರೆ ಸಾಕು. ಹತ್ತಿರದ ಜಂಕ್ಷನ್‌ನಲ್ಲಿರುವ ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು ಸಂಚಾರ ವ್ಯವಸ್ಥೆ ಸುಗಮಗೊಳಿಸಲಿದ್ದಾರೆ.

ರಾಜಧಾನಿ ಪೊಲೀಸರು ಈ ನೂತನ ಸಹಾಯವಾಣಿಗೆ ಚಾಲನೆ ನೀಡಿದ್ದಾರೆ.2 ದಿನಗಳಲ್ಲೇ ಈ ಸಂಖ್ಯೆಗೆ  ಸಂಚಾರ ದಟ್ಟಣೆ ಸಂಬಂಧ 750 ಸಂದೇಶಗಳು ಹಾಗೂ 250  ಫೋಟೊಗಳು ವಾಟ್ಸ್‌ ಆ್ಯಪ್‌ ಮೂಲಕ ಬಂದಿವೆ.

‘ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಸವಾರರು ಸಹಾಯವಾಣಿ ಸಂಖ್ಯೆಗೆ ದಟ್ಟಣೆಯ ಫೋಟೊ ಅಥವಾ ಸಂದೇಶ ಕಳುಹಿಸಿದರೆ, ಅದು ಸಂಚಾರ ನಿರ್ವಹಣಾ ಕೇಂದ್ರದಲ್ಲಿರುವ (ಟಿಎಂಸಿ) ಸಿಬ್ಬಂದಿಯ ಮೊಬೈಲ್‌ಗೆ ಹೋಗುತ್ತದೆ.

ಕೂಡಲೇ ಸಿಬ್ಬಂದಿ ಆ ಸ್ಥಳಕ್ಕೆ ಸಮೀಪದ ಜಂಕ್ಷನ್‌ನಲ್ಲಿರುವ ಪೊಲೀಸರಿಗೆ ಮಾಹಿತಿ ರವಾನಿಸುತ್ತಾರೆ. ನಂತರ ಅವರು ಸ್ಥಳಕ್ಕೆ ಹೋಗಿ ಸಂಚಾರ ಸುಗಮಗೊಳಿಸುತ್ತಾರೆ’ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಎಂ.ಎ.ಸಲೀಂ ತಿಳಿಸಿದರು.

‘ಎಲ್ಲೆಲ್ಲಿ ದಟ್ಟಣೆ ಉಂಟಾಗಿದೆ ಎಂಬುದು ತತ್‌ಕ್ಷಣವೇ ಪೊಲೀಸರಿಗೆ ಗೊತ್ತಾಗುವುದಿಲ್ಲ. ಆದರೆ, ಸವಾರರು ದಟ್ಟಣೆಯ ಬಿಸಿ ಎದುರಿಸುತ್ತಿರುತ್ತಾರೆ. ಅವರು ನೀಡುವ ಮಾಹಿತಿಯಿಂದ ಸಂಚಾರ ವ್ಯವಸ್ಥೆ ಸುಧಾರಣೆ ಆಗುತ್ತದೆ. ಹೀಗಾಗಿ ಇದೊಂದು ಜನಸ್ನೇಹಿ ವ್ಯವಸ್ಥೆ ಆಗಲಿದೆ’ ಎಂದು ಹೇಳಿದರು.

‘ಕುಂದಲಹಳ್ಳಿ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಮಹದೇವಪುರ, ವೈಟ್‌ಫೀಲ್ಡ್‌, ಹೆಬ್ಬಾಳ, ಪದ್ಮನಾಭನಗರ, ಬಳ್ಳಾರಿ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾದ ಬಗ್ಗೆ ಅಧಿಕ ದೂರುಗಳು ಬರುತ್ತಿವೆ. ಕೂಡಲೇ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಸಂಚಾರ ಸುಗಮಗೊಳಿಸಿದ್ದೇವೆ’ ಎಂದು ಟಿಎಂಸಿ ಸಿಬ್ಬಂದಿ ಹೇಳಿದ್ದಾರೆ.
ಸಹಾಯವಾಣಿ ಸಂಖ್ಯೆ: 7259-100- 100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT