ADVERTISEMENT

ದಾಖಲೆಪತ್ರಗಳಿಲ್ಲದ ಬೆಳ್ಳಿ ವಶ

ಸುದ್ದಿ 2 ನಿಮಿಷ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2015, 20:32 IST
Last Updated 26 ಏಪ್ರಿಲ್ 2015, 20:32 IST

ಬೆಂಗಳೂರು:  ಸೂಕ್ತ ದಾಖಲೆಪತ್ರಗಳಿಲ್ಲದ ಬೆಳ್ಳಿ ವಸ್ತುಗಳನ್ನು ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು, ₹ 45 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರ್ತಪೇಟೆಯ ದಿಲೀಪ್‌ಸಿಂಗ್‌ (48) ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದಿಲೀಪ್ ಸಿಂಗ್‌, ದೆಹಲಿಯಿಂದ ವಿಮಾನದಲ್ಲಿ ಕಾರ್ಗೊ ಕೊರಿಯರ್‌ ಮೂಲಕ 118 ಕೆ.ಜಿ.ಬೆಳ್ಳಿ ವಸ್ತುಗಳನ್ನು ತರಿಸಿಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಲಾಯಿತು ಎಂದು ಸಿಸಿಬಿ ಡಿಸಿಪಿ ರಮೇಶ್‌ ತಿಳಿಸಿದ್ದಾರೆ.

ಆರೋಪಿಯಿಂದ ಜಪ್ತಿ ಮಾಡಲಾಗಿರುವ ಬೆಳ್ಳಿಯ ವಸ್ತುಗಳಿಗೆ ಸೂಕ್ತ ದಾಖಲೆ ಪತ್ರಗಳಿರಲಿಲ್ಲ. ಅಲ್ಲದೇ, ಖರೀದಿಸಿರುವ ಬಗ್ಗೆ ರಶೀದಿ ಇರಲಿಲ್ಲ. ದೆಹಲಿ ಮತ್ತು ಆಗ್ರಾದ ಆಭರಣ ವರ್ತಕರಾದ ಆರ್‌.ಪಿ.ಗುಪ್ತಾ ಮತ್ತು ಅಮಿತ್‌ ಎಂಬುವರಿಂದ ಬೆಳ್ಳಿ ವಸ್ತುಗಳನ್ನು ತರಿಸಿಕೊಂಡಿದ್ದಾಗಿ ದಿಲೀಪ್‌ಸಿಂಗ್‌ ಹೇಳಿಕೆ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ನಗರದಲ್ಲಿ ಯಾವುದೇ ಆಭರಣ ಮಳಿಗೆ ಹೊಂದಿಲ್ಲ. ಬೆಳ್ಳಿ ವಸ್ತುಗಳನ್ನು ಚಿಕ್ಕಪೇಟೆ, ಅವೆನ್ಯೂ ರಸ್ತೆಯ ಆಭರಣ ವ್ಯಾಪಾರಿಗಳಿಗೆ ಕೊಡಲು ತೆರಳುತ್ತಿದ್ದೆ ಎಂದು ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಿಕ್ಕಜಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.