ADVERTISEMENT

ದಿಢೀರ್‌ ಭೇಟಿ ನೀಡಿ ಆಡಳಿತಕ್ಕೆ ಚುರುಕು ನೀಡಿ

ಜಿ. ಪಂ. ಅಧ್ಯಕ್ಷ, ಉಪಾಧ್ಯಕ್ಷರ ಸಭೆಯಲ್ಲಿ ಸಿದ್ದರಾಮಯ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST

ಬೆಂಗಳೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಜಿಲ್ಲೆಯಲ್ಲಿನ ಆಸ್ಪತ್ರೆ, ವಸತಿ ನಿಲಯಗಳು ಮತ್ತು ಶಾಲೆಗಳಿಗೆ ದಿಢೀರ್‌ ಭೇಟಿ ನೀಡುವ ಮೂಲಕ ಆಡಳಿತಕ್ಕೆ ಚುರುಕು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ರಾಜ್ಯ ಸಚಿವ ದರ್ಜೆ ಸ್ಥಾನಮಾನ ನೀಡಲಾಗಿದೆ. ಅಲ್ಲದೆ, ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಅವಧಿಯನ್ನು 5 ವರ್ಷಗಳಿಗೆ ನಿಗದಿ ಮಾಡಲಾಗಿದೆ. ಇದನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಬದಲಾವಣೆ ತರಬೇಕು ಎಂದು ಹೇಳಿದರು.

ಆಸ್ಪತ್ರೆಗಳಿಗೆ ದಿಢೀರ್‌ ಭೇಟಿ ನೀಡುವ ಮೂಲಕ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುತ್ತಿದೆಯೇ? ಔಷಧಗಳ ಲಭ್ಯತೆ ಇದೆಯೇ? ನೈರ್ಮಲ್ಯ ಹೇಗಿದೆ? ವೈದ್ಯರು ಕರ್ತವ್ಯಕ್ಕೆ ಹಾಜರಾಗುತ್ತಾರಾ? ಎಂಬುದನ್ನು ಖುದ್ದಾಗಿ ನೋಡಬೇಕು. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಊಟಕ್ಕಾಗಿ ತಿಂಗಳಿಗೆ  ₹1,400 ನೀಡಲಾಗುತ್ತದೆ. ಆದರೂ ಸೌಲಭ್ಯ ಸರಿಯಾಗಿಲ್ಲ ಎಂಬ ಅರೋಪ ಇದೆ. ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುವ ಮೂಲಕ ಇಂತಹ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ಚುನಾವಣೆಯಲ್ಲಿ ಗೆಲ್ಲುವವರೆಗೆ ಮಾತ್ರ ರಾಜಕಾರಣ. ಅಧಿಕಾರ ಸ್ಥಾನದಲ್ಲಿ ಕುಳಿತ ಮೇಲೆ ಜನಸಾಮಾನ್ಯರ ದೃಷ್ಟಿಯಿಂದಷ್ಟೇ ಕಾರ್ಯನಿರ್ವಹಿಸಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಅವುಗಳನ್ನು ಅಗತ್ಯ ಇರುವವರಿಗೆ ತಲುಪಿಸಲು ಪ್ರಯತ್ನಿಸಬೇಕು ಎಂದರು.

ವಸತಿ ಯೋಜನೆಯಡಿ ಮನೆಗಳ ಹಂಚಿಕೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂಬ ದೂರು ಎಲ್ಲ ಕಡೆಗಳಿಂದ ಬರುತ್ತಿದೆ. ಸರ್ಕಾರದ ಸೌಲಭ್ಯಗಳು ಮಧ್ಯವರ್ತಿಗಳ ಹಾವಳಿ ಇಲ್ಲದೆ ಜನರಿಗೆ ನೇರವಾಗಿ ತಲುಪಬೇಕು. 2018–19ರ ವೇಳೆಗೆ ಬಯಲು ಶೌಚಾಲಯ ಮುಕ್ತ ರಾಜ್ಯ ಮಾಡುವ ಗುರಿ ಇದೆ. ಅದಕ್ಕೂ ನಿಮ್ಮ ಸಹಕಾರ ಅಗತ್ಯವಿದೆ. ಸರ್ಕಾರದ ಉದ್ದೇಶಗಳನ್ನು ಜಿಲ್ಲಾ ಪಂಚಾಯತ್‌ಗಳು ಪ್ರಾಮಾಣಿಕವಾಗಿ ಈಡೇರಿಸಬೇಕು ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ. ಪಾಟೀಲ್‌, ‘ರಾಜ್ಯದ ಜಿಲ್ಲಾ ಪಂಚಾಯಿತಿ  ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಸಾಮಾಜಿಕ ನ್ಯಾಯದ ಪ್ರಕಾರ ಎಲ್ಲ ವರ್ಗಗಳಿಗೂ ಅಧಿಕಾರ ದೊರೆತಿದೆ. ಆದರೆ, ಆ ಸಂಸ್ಥೆಗಳಿಂದ ಆಗಬೇಕಾಗಿದ್ದ ಕೆಲಸದ ಬಗ್ಗೆ ಸಮಾಧಾನ ಇಲ್ಲ. ಆದ್ದರಿಂದ ಆತ್ಮಾವಲೋಕನ ಮಾಡಿಮುಂದೆ ಸಾಗಬೇಕು’ ಎಂದರು.

‘ಹಿಂದೆ ಕೇಂದ್ರ ಸರ್ಕಾರ ಗ್ರಾಮಗಳಿಗೆ ಒಂದು ರೂಪಾಯಿ ಬಿಡುಗಡೆ ಮಾಡಿದರೆ ಅದು ರಾಜ್ಯ ಸರ್ಕಾರ, ಅಧಿಕಾರಿಗಳು, ಗುತ್ತಿಗೆದಾರರು, ಮಧ್ಯವರ್ತಿಗಳನ್ನು ದಾಟಿಕೊಂಡು ಗ್ರಾಮ ಸೇರುವುದರೊಳಗೆ ಕೇವಲ 16 ಪೈಸೆ ಆಗುತ್ತಿತ್ತು. ಇದನ್ನು ತಪ್ಪಿಸುವುದಕ್ಕಾಗಿಯೇ ಅಧಿಕಾರ ಮತ್ತು ಆರ್ಥಿಕ ವಿಕೇಂದ್ರಿಕರಣ ಮಾಡಲಾಯಿತು. ಈಗ ಸರ್ಕಾರದ ಅನುದಾನ ಪಂಚಾಯತಿಗಳ ಖಾತೆಗೆ ನೇರವಾಗಿ ಜಮಾ ಆಗುತ್ತಿದೆ’ ಎಂದರು.

ಫೇಸ್‌ಬುಕ್‌ನಲ್ಲಿ ವಿಡಿಯೊ:   ಇತ್ತೀಚೆಗೆ ಮುಖ್ಯಮಂತ್ರಿ ಇದ್ದ ಕಾರು ಮತ್ತು ಬೆಂಗಾವಲು ವಾಹನಗಳು ಹೊಸಕೋಟೆ ಬಳಿ ಬರುತ್ತಿರುವಾಗ ಅಲ್ಲಿನ ಪೊಲೀಸರು ಸುಮಾರು 25 ನಿಮಿಷ ಎಲ್ಲ ರಸ್ತೆಗಳಲ್ಲಿ ಸಂಚಾರ ಬಂದ್‌ ಮಾಡಿದ್ದರು.

ಇದರಲ್ಲಿ ಅಂಬುಲೆನ್ಸ್‌ ಸಹ ಇತ್ತು. ಪೊಲೀಸರನ್ನು ಎಷ್ಟೇ ಕೇಳಿಕೊಂಡರೂ ಅಂಬುಲೆನ್ಸ್‌ಗೆ ಅವಕಾಶ ನೀಡಲಿಲ್ಲ. ಇದರಿಂದಾಗಿ ಮಹಿಳೆ ಮೃತಪಟ್ಟರು ಎಂದು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿರುವ ದೃಶ್ಯದ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.