ADVERTISEMENT

ದೊಡ್ಡಕಲ್ಲಸಂದ್ರ ಕೆರೆಯಲ್ಲಿ ಮೀನುಗಳ ಸಾವು

​ಪ್ರಜಾವಾಣಿ ವಾರ್ತೆ
Published 2 ಮೇ 2017, 19:32 IST
Last Updated 2 ಮೇ 2017, 19:32 IST
ಬೆಂಗಳೂರು: ಕನಕಪುರ ರಸ್ತೆಯಲ್ಲಿರುವ ದೊಡ್ಡಕಲ್ಲಸಂದ್ರ ಕೆರೆಯಲ್ಲಿ ಸಾವಿರಾರು ಮೀನುಗಳು ಮಂಗಳವಾರ ಮೃತಪಟ್ಟಿವೆ.
 
ಶನಿವಾರ ಭಾರಿ ಪ್ರಮಾಣದಲ್ಲಿ ಹರಿದ ಕೊಳಚೆ ನೀರಿನಿಂದಾಗಿ ಮೀನುಗಳು ಮೃತಪಟ್ಟಿವೆ. ನೀರಿನ ಮೇಲೆ ತೇಲುತ್ತಿದ್ದ ಮೀನುಗಳನ್ನು ಕಂಡ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
 
ಬಿಬಿಎಂಪಿ ಅಧಿಕಾರಿಗಳು ಮೃತಪಟ್ಟ ಮೀನುಗಳನ್ನು ತೆರವುಗೊಳಿಸಲು ಮುಂದಾದರು. ಕೆಲ ಮೀನುಗಳನ್ನು ತೆರವುಗೊಳಿಸಿದರು. ಆದರೆ, ಸಂಜೆಯ ವೇಳೆಗೆ ಮೀನುಗಳು ಭಾರಿ ಪ್ರಮಾಣದಲ್ಲಿ ತೇಲಲಾರಂಭಿಸಿದವು. 
 
‘ಮೊದಲ ಬಾರಿಗೆ ಕೆರೆಯಲ್ಲಿ ಮೀನುಗಳು ಸತ್ತಿರುವುದನ್ನು ನೋಡುತ್ತಿದ್ದೇನೆ. ಕೆರೆ ಕಲುಷಿತಗೊಂಡಿದ್ದರೂ ಈ ಹಿಂದೆ ಇಂತಹ ಘಟನೆ ನಡೆದಿರಲಿಲ್ಲ’ ಎಂದು ಜೆಡಿಎಸ್‌ ಮುಖಂಡ ದೇವರಾಜ್‌ ಹೇಳಿದರು.
 
‘10 ವರ್ಷಗಳ ಹಿಂದೆ ಈ ಕೆರೆ ಸಮೃದ್ಧವಾಗಿತ್ತು. ಆದರೆ, ಬಡಾವಣೆ ನಿರ್ಮಾಣ ಹಾಗೂ ವಸತಿ ಸಂಕೀರ್ಣಗಳು ತಲೆಎತ್ತಿದ್ದರಿಂದ ಕೆರೆ ಕಲುಷಿತಗೊಂಡಿತು.  ಕೊಳಚೆ ನೀರನ್ನು ಶುದ್ಧೀಕರಿಸದೆ ಕೆರೆಗೆ ಬಿಡಲಾಗುತ್ತಿದೆ. ಕೋಣನಕುಂಟೆಯ ಕೊಳಚೆ ನೀರು ಕೆರೆಯ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ’ ಎಂದು ದೂರಿದರು.
 
ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ವಿದ್ಯಾಸಾಗರ್‌ ಮಾತನಾಡಿ, ‘ಕೆರೆಯನ್ನು ಪರಿಶೀಲಿಸಿ ವರದಿ ನೀಡುವಂತೆ ತಂಡವನ್ನು ಕಳುಹಿಸಿದ್ದೇನೆ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.