ADVERTISEMENT

ಧರ್ಮ ರಾಜಕಾರಣದಿಂದ ಉತ್ತಮ ಆಡಳಿತ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2015, 19:40 IST
Last Updated 2 ಆಗಸ್ಟ್ 2015, 19:40 IST

ಬೆಂಗಳೂರು: ‘ರಾಜಕಾರಣ ಧರ್ಮವನ್ನು ಮುನ್ನಡೆಸಬಾರದು. ಬದಲು, ಧರ್ಮ ರಾಜಕಾರಣ ನಡೆಸುವಂತಾಗಬೇಕು. ಆಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ’ ಎಂದು ಕೇಂದ್ರ ಸಚಿವ ಅನಂತಕುಮಾರ್ ಅಭಿಪ್ರಾಯಪಟ್ಟರು.

ಬೊಮ್ಮನಹಳ್ಳಿಯ ಅರಕೆರೆಯಲ್ಲಿ ಅಖಿಲ ಭಾರತ ಮಹಾಸಭಾ ಹಾಗೂ ಅರಕೆರೆಯ ವೀರಶೈವ ಸಮಾಜದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ, ಜಗಜ್ಯೋತಿ ಬಸವೇಶ್ವರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಜಗತ್ತಿನಲ್ಲಿ ಸಾಮಾಜಿಕ ಕ್ರಾಂತಿಯ ಕಹಳೆಯು ಮೊಳಗುವ ಮುನ್ನವೇ 12ನೇ ಶತಮಾನದಲ್ಲಿ ಬಸವಣ್ಣನವರು ಕರ್ನಾಟಕದಲ್ಲಿ ಕಲ್ಯಾಣ ಕ್ರಾಂತಿ ಹುಟ್ಟುಹಾಕಿದ್ದರು. ಜತೆಗೆ, ಅನುಭವ ಮಂಟಪದ ಮೂಲಕ ಇಡೀ ಜಗತ್ತಿಗೆ ಸಂಸತ್ತಿನ ಪರಿಕಲ್ಪನೆ ತೋರಿದರು’ ಎಂದು ಬಣ್ಣಿಸಿದರು.

ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ ಮಾತನಾಡಿ, ‘ವೀರಶೈವ ಒಂದು ಜಾತಿಯಲ್ಲ ಅದೊಂದು ಧರ್ಮ. ಧರ್ಮಕ್ಕೆ ಎಂದಿಗೂ ಸಾವಿಲ್ಲ. ನಮ್ಮ ಧರ್ಮದ ಆಶಯಗಳು ಸಾಮಾಜಿಕ ಸಮಾನತೆ ಮತ್ತು ಸಮನ್ವಯತೆ ಎತ್ತಿ ಹಿಡಿಯುವುದಾಗಿದೆ’ ಎಂದು ಹೇಳಿದರು. ಕಾರ್ಯಕ್ರಮಕ್ಕೂ ಮುನ್ನ ಅರಕೆರೆಯ ಪ್ರಮುಖ ಬೀದಿಗಳಲ್ಲಿ ರೇಣುಕಾ ಚಾರ್ಯರ ಮತ್ತು ಬಸವಣ್ಣ ಚಿತ್ರಪಟ ಗಳನ್ನು ಬೆಳ್ಳಿ ರಥದಲ್ಲಿಟ್ಟು ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ವೀರಗಾಸೆ, ಕಂಸಾಳೆ ಜಾನಪದ ಕಲಾ ತಂಡಗಳು ಮೆರುಗು ನೀಡಿದವು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.