ADVERTISEMENT

ಧಾರ್ಮಿಕ ಆಚರಣೆಗಳು ಮೂಢನಂಬಿಕೆಗಳಲ್ಲ: ಕಿರಣ್‌ ಕುಮಾರ್‌

150ನೇ ‘ತಿಂಗಳ ತಿಳಿವು’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2015, 19:30 IST
Last Updated 4 ಅಕ್ಟೋಬರ್ 2015, 19:30 IST

ಬೆಂಗಳೂರು: ‘ಧಾರ್ಮಿಕ ಆಚರಣೆಗಳನ್ನು ಅಂಧಶ್ರದ್ಧೆ ಎಂದು ಕೆಲವರು ಹೇಳುತ್ತಾರೆ. ಆದರೆ, ಅವುಗಳು ವೈಜ್ಞಾನಿಕ ತಳಹದಿಯ ಮೇಲೆ ರೂಪುಗೊಂಡಿವೆ’ ಎಂದು ಇಸ್ರೊ ಅಧ್ಯಕ್ಷ ಡಾ.ಎ.ಎಸ್‌.ಕಿರಣ್‌ಕುಮಾರ್‌ ಅವರು ಅಭಿಪ್ರಾಯಪಟ್ಟರು.

ಸಹಕಾರನಗರದ ಬಸವ ಬಳಗದ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ 150ನೇ ‘ತಿಂಗಳ ತಿಳಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಧಾರ್ಮಿಕ ಆಚರಣೆಗಳು ಮೂಢನಂಬಿಕೆಗಳಲ್ಲ. ಎಷ್ಟೋ ಸಮಸ್ಯೆಗಳಿಗೆ ಧಾರ್ಮಿಕ ಆಚರಣೆಗಳಲ್ಲಿ ಪರಿಹಾರ ಇದೆ ಎಂದರು.

ವಿಜ್ಞಾನ ಕ್ಷೇತ್ರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಸಮಾಜದಲ್ಲಿ ಸಾಮರಸ್ಯ ಸಾಧಿಸಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ‘ಬಸವಣ್ಣ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಅವರು ಮನುಕುಲದ ಸ್ವತ್ತು. ಬಸವಣ್ಣನವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಹುನ್ನಾರ ನಡೆಯುತ್ತಿದೆ’ ಎಂದರು.

ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಸವಣ್ಣನವರು 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಸ್ಥಾಪಿಸಿದ್ದರು.  ಬಸವಾದಿ ಶರಣರು ಸಮಾಜದಲ್ಲಿ ಸಮಾನತೆ ತರಲು, ವರ್ಗ ರಹಿತ, ಜಾತಿ ರಹಿತ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದರು ಎಂದು ಹೇಳಿದರು.

ಪ್ರಸ್ತುತ ರಾಜಕಾರಣ ಮತ್ತು ಆಡಳಿತ ಸೂತ್ರಗಳು ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗಿ ನಡೆಯುತ್ತಿಲ್ಲ. ರಾಜಕಾರಣಿಗಳು ಸಮಾಜವನ್ನು ಒಗ್ಗೂಡಿಸುವ ಬದಲಿಗೆ ಜಾತಿಯ ಹೆಸರಿನಲ್ಲಿ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು. ಸಹಕಾರನಗರದ 14ನೇ ಮುಖ್ಯರಸ್ತೆಗೆ ಬಸವಣ್ಣ ಅವರ ಹೆಸರಿಡಬೇಕು ಎಂದು ಬಸವ ಬಳಗದ ಅಧ್ಯಕ್ಷ ಡಾ.ಕೆ.ಪಿ.ಗುರುಸ್ವಾಮಿ ಅವರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಕೃಷ್ಣಬೈರೇಗೌಡ, ‘ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಮಾತನಾಡಲಾಗುವುದು’ ಎಂದರು.

ಪ್ರೀತಿ, ವಿಶ್ವಾಸಕ್ಕಿಂತ ದೊಡ್ಡ ಕಾನೂನಿಲ್ಲ
‘ನಾನು ಕಾನೂನು ಸಚಿವನಾಗಿರುವುದರಿಂದ ಹೊಸ ಕಾನೂನುಗಳನ್ನು ಜಾರಿಗೆ ತರುವಂತೆ ಜನರು ಹೇಳುತ್ತಾರೆ. ಈಗ ಇರುವ ಕಾನೂನುಗಳೇ ಹೆಚ್ಚಾಗಿವೆ. ಈಗಾಗಲೇ 1,211 ಕಾನೂನುಗಳನ್ನು ತೆಗೆದು ಹಾಕಲಾಗಿದ್ದು, ಇನ್ನೂ 600–700 ಕಾನೂನುಗಳನ್ನು ತೆಗೆಯಬೇಕಿದೆ. ಪ್ರೀತಿ, ವಿಶ್ವಾಸಕ್ಕಿಂತ ದೊಡ್ಡ ಕಾನೂನು ಇಲ್ಲ’ ಎಂದು ಡಿ.ವಿ.ಸದಾನಂದ ಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.