ADVERTISEMENT

ಧ್ಯಾನ ಫೌಂಡೇಷನ್‌ನಿಂದ ಜಾನುವಾರುಗಳಿಗೆ ಮೇವು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:56 IST
Last Updated 23 ಮಾರ್ಚ್ 2017, 19:56 IST
ಬೆಂಗಳೂರು:  ‘ಧ್ಯಾನ ಫೌಂಡೇಷನ್ ವತಿಯಿಂದ ಜಾನುವಾರುಗಳಿಗೆ ಮೇವು ಪೂರೈಕೆ ಮಾಡಲಾಗುತ್ತಿದೆ’ ಎಂದು ಫೌಂಡೇಷನ್‌ನ  ಸದಸ್ಯೆ ಪೂರ್ಣಾ ಕಪೂರ್ ಹೇಳಿದರು.
 
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ತೀವ್ರ ಬರಗಾಲದಿಂದಾಗಿ ಮೇವು ಹಾಗೂ ನೀರಿಲ್ಲದೆ ದನಕರುಗಳು ಸಾಯುತ್ತಿವೆ. ಅಲ್ಲದೆ, ಮೇವಿನ ಬೆಲೆ ದುಬಾರಿಯಾಗಿದ್ದು, ರೈತರು ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ’ ಎಂದರು.
 
‘ಫೌಂಡೇಷನ್ ವತಿಯಿಂದ ರಾಜ್ಯದಲ್ಲಿ 30 ಗೋಶಾಲೆಗಳನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗೋಶಾಲೆಗಳನ್ನು ತೆರೆಯಲಾಗುತ್ತದೆ. ಅನಾರೋಗ್ಯಕ್ಕೆ ತುತ್ತಾದ ಜಾನುವಾರುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಹೇಳಿದರು.
 
‘ಪ್ರತಿ ತಾಲ್ಲೂಕಿನ ಜಾನುವಾರುಗಳಿಗೆ ಮೇವು ಪೂರೈಕೆ ಮಾಡಲಾಗುತ್ತದೆ. ಆದರೆ, ರಾಜ್ಯದಲ್ಲಿ ಮೇವಿನ ಕೊರತೆ ಉಂಟಾಗಿದ್ದು, ಹೊರ ರಾಜ್ಯಗಳಿಂದ ತರಿಸಿಕೊಳ್ಳಲಾಗುತ್ತಿದೆ’ ಎಂದರು.
 
‘ಮುಳಬಾಗಿಲಿನ ರಾಮಪುರ ಮತ್ತು ಬಂಡಹಳ್ಳಿಯಲ್ಲಿ  6 ಸಾವಿರ ಜಾನುವಾರುಗಳು ಇವೆ. ಇಲ್ಲಿ ಮೇವಿನ ಸಮಸ್ಯೆ ಎದುರಾಗಿದ್ದು, ನಿತ್ಯ 10ಕ್ಕೂ ಹೆಚ್ಚು ಜಾನುವಾರುಗಳ ಸಾಯುತ್ತಿವೆ. ಕೊಳ್ಳೇಗಾಲದ 27 ಗ್ರಾಮ ಪಂಚಾಯ್ತಿಗಳಲ್ಲಿ ಜಾನುವಾರುಗಳು ಮೇವಿಲ್ಲದೆ ಸೊರಗಿವೆ. ಸರ್ಕಾರ ಈ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.