ADVERTISEMENT

ನವೀಕರಿಸಬಹುದಾದ ಸಂಪನ್ಮೂಲ ಜನಪ್ರಿಯಗೊಳಿಸಿ

ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಅಹುಜಾ ಸಲಹೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 20:17 IST
Last Updated 31 ಮಾರ್ಚ್ 2015, 20:17 IST

ಬೆಂಗಳೂರು: ‘ಜಾಗತಿಕ ತಾಪಮಾನವನ್ನು ಹೆಚ್ಚಿಸುತ್ತಿರುವ ಇಂಗಾಲವನ್ನು ಕಡಿಮೆಗೊಳಿಸಲು ಗ್ರಾಮೀಣ ಪ್ರದೇಶದಲ್ಲಿ ನವೀಕರಿಸಬಹುದಾದ ಸಂಪನ್ಮೂಲಗಳನ್ನು ಜನಪ್ರಿಯಗೊಳಿಸುವ ಅಗತ್ಯವಿದೆ’ ಎಂದು ಪರಿಸರ ರಕ್ಷಣಾ ನಿಧಿಯ ಏಷ್ಯಾದ ಪ್ರಾದೇಶಿಕ ನಿರ್ದೇಶಕ ರಿಚೀ ಅಹುಜಾ  ಹೇಳಿದರು.

ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ (ನಿಯಾಸ್‌) ಮಂಗಳವಾರ ‘ಕಡಿಮೆ ಇಂಗಾಲದೊಂದಿಗೆ ಗ್ರಾಮೀಣಾಭಿವೃದ್ಧಿ’ ಕುರಿತು ಅವರು  ಉಪನ್ಯಾಸ ನೀಡಿದರು. ‘ಒಂದೊಮ್ಮೆ ಜಾಗತಿಕ ತಾಪಮಾನವನ್ನು ನಿಯಂತ್ರಿಸದೇ ಹೋದರೆ ಅದರ ನೇರ ಪರಿಣಾಮ ಕೃಷಿ, ಆರ್ಥಿಕತೆ, ಆರೋಗ್ಯ ಸೇರಿದಂತೆ ಹಲವಾರು ಕ್ಷೇತ್ರಗಳ ಮೇಲಾಗಲಿದೆ. ಆಹಾರ ಭದ್ರತೆ, ಅಭಿವೃದ್ಧಿ ಮತ್ತು ಶಕ್ತಿ ಸಂಪನ್ಮೂಲಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ’ ಎಂದು ಹೇಳಿದರು.

‘ದೇಶದಲ್ಲಿ ಇಂದಿಗೂ  82 ಕೋಟಿ ಜನರು ಕಟ್ಟಿಗೆ ಒಲೆಯ ಮೇಲೆ ಆಹಾರ ಸಿದ್ಧಪಡಿಸುತ್ತಿದ್ದಾರೆ. ಇದರಿಂದಾಗಿ ಮನೆಯೊಳಗಿನ ಕಲುಷಿತ ಗಾಳಿಯಿಂದಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.   ಜತೆಗೆ ಅರಣ್ಯ ನಾಶ ಕೂಡ ಆಗುತ್ತಿದೆ.  ಹೀಗಾಗಿ ಗ್ರಾಮೀಣ ಜನರಲ್ಲಿ ಜೈವಿಕ ಅನಿಲ, ಸೌರ ಶಕ್ತಿ ವಿದ್ಯುತ್‌ ಬಳಕೆ ಸೇರಿದಂತೆ ನವೀಕರಿಸಬಹುದಾದ ಸಂಪನ್ಮೂಲಗಳ ಮಹತ್ವ ಮತ್ತು ಅವುಗಳ ಉಪಯೋಗ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಮಾಡಬೇಕು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

‘ಪರಿಸರದ ಆರೋಗ್ಯವನ್ನು ಸ್ವಸ್ಥವಾಗಿಡುವ ಕಾರ್ಯದಲ್ಲಿ ಎನ್‌ಜಿಒಗಳು ವಿವಿಧ ಕ್ಷೇತ್ರಗಳ ಪರಿಣಿತರನ್ನು  ಪಾಲುದಾರರನ್ನಾಗಿ ಮಾಡಿಕೊಳ್ಳಬೇಕು. ಸಮಸ್ಯೆಗಳ ಪರಿಹರಿಸಲು ಪ್ರಾಮಾಣಿಕ ಮತ್ತು ಪಾರದರ್ಶಕ ಪ್ರಯತ್ನ ಮಾಡಬೇಕು’ ಎಂದು ತಿಳಿಸಿದರು.

ಪರಿಸರದ ಆರೋಗ್ಯವನ್ನು ಸ್ವಸ್ಥವಾಗಿಡುವ ಕಾರ್ಯದಲ್ಲಿ ಎನ್‌ಜಿಒಗಳು ವಿವಿಧ ಕ್ಷೇತ್ರಗಳ ಪರಿಣಿತರನ್ನು  ಪಾಲುದಾರರನ್ನಾಗಿ ಮಾಡಿಕೊಳ್ಳಬೇಕು.
ರಿಚೀ ಅಹುಜಾ, ಪ್ರಾದೇಶಿಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.