ADVERTISEMENT

ನಾಗನ ಪತ್ತೆಗೆ ತಮಿಳುನಾಡಿಗೆ ತಂಡ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:35 IST
Last Updated 24 ಏಪ್ರಿಲ್ 2017, 19:35 IST
ವಿ.ನಾಗರಾಜ್‌ ಅಲಿಯಾಸ್‌ ನಾಗ
ವಿ.ನಾಗರಾಜ್‌ ಅಲಿಯಾಸ್‌ ನಾಗ   

ಬೆಂಗಳೂರು: ಪಾಲಿಕೆ ಮಾಜಿ ಸದಸ್ಯ ವಿ.ನಾಗರಾಜ್‌ ಅಲಿಯಾಸ್‌ ನಾಗ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

ನಾಗ ತನ್ನ ವಕೀಲರ ಮೂಲಕ ಮಾಧ್ಯಮಗಳಿಗೆ ನೀಡಿದ್ದ ವಿಡಿಯೊ ಪಡೆದುಕೊಂಡಿರುವ ಪೊಲೀಸರು, ತಜ್ಞರ ಸಹಾಯದಿಂದ ಪರಿಶೀಲನೆ ನಡೆಸುತ್ತಿದ್ದಾರೆ. ವಿಡಿಯೊವನ್ನು ಬೋಟ್‌ನಲ್ಲಿ ಚಿತ್ರೀಕರಿಸಿರಬಹುದು ಎಂದು ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲಿ ಮಾತನಾಡಿರುವ ಆತ, ‘ಅಂದು ರಾತ್ರಿಯೇ ನಾನು ಈ ಕಡೆ ಬಂದಿದ್ದೇನೆ. ಮರುದಿನ ಬೆಳಿಗ್ಗೆ ಪೊಲೀಸರು ಮನೆ ಮೇಲೆ ದಾಳಿ ಮಾಡಿದರು. ಪತ್ನಿ ವಿಷಯ ತಿಳಿಸಿದಾಗ ಮಾಧ್ಯಮದವರಿಗೆ  ಹೇಳುವಂತೆ ಹೇಳಿದ್ದೆ’ ಎಂದಿದ್ದ. ‘ಈ ಕಡೆ’ ಎಂಬುದು ತಮಿಳುನಾಡು ಆಗಿರಬಹುದು ಎಂದು ಶಂಕಿಸಿರುವ ಪೊಲೀಸರು, ಅಲ್ಲಿಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ಸೋಮವಾರ ಸಂಜೆ ನಗರದ ಉನ್ನತ ಪೊಲೀಸ್‌ ಅಧಿಕಾರಿಗೆ ಕರೆ ಮಾಡಿ ತನಿಖಾ ಪ್ರಗತಿ ವಿವರಿಸಿದ  ವಿಶೇಷ ತಂಡದ ಅಧಿಕಾರಿ, ‘ಆದಷ್ಟು ಬೇಗ ಆತ  ಇರುವ ಜಾಗಕ್ಕೆ ಹೋಗುತ್ತೇವೆ’ ಎಂದು ಹೇಳಿರುವುದಾಗಿ ಗೊತ್ತಾಗಿದೆ.

ಬೋಟ್‌ ನಡೆಸುತ್ತಿರುವ ಸ್ನೇಹಿತರು: ‘ಆತನ ಹಲವು ಸ್ನೇಹಿತರು ತಮಿಳುನಾಡಿನಲ್ಲಿ ಬೋಟ್‌ ನಡೆಸುತ್ತಿದ್ದಾರೆ. ಅವರ ಬೋಟ್‌ಗಳು  ಸಮುದ್ರದಲ್ಲೇ ಸುತ್ತಾಡುತ್ತಿರುತ್ತವೆ. ಅಂಥ ಬೋಟ್‌ನಲ್ಲೇ ನಾಗ ಹಾಗೂ ಆತನ ಮಕ್ಕಳು ಇರಬಹುದು ಎಂಬ ಅನುಮಾನವಿದೆ. ಆತ ಮೊಬೈಲ್‌ ಬಳಕೆ ಮಾಡುತ್ತಿಲ್ಲ.
ಹೀಗಾಗಿ ಆತನನ್ನು ಬೇಗನೆ ಪತ್ತೆ ಹಚ್ಚಲು ಆಗುತ್ತಿಲ್ಲ. ತಮಿಳುನಾಡಿನ ಬಂದರು ಅಧಿಕಾರಿಗಳ ಮೂಲಕ ಪತ್ತೆಗೆ ಪ್ರಯತ್ನಿಸುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಬೆಡ್‌ಶೀಟ್‌ ಸುಳಿವು: ‘ವಿಡಿಯೊದಲ್ಲಿ ನಾಗ ಕುಳಿತ ಜಾಗದ ಹಿಂಭಾಗದಲ್ಲಿ ಬೆಡ್‌ಶೀಟ್‌ ಹಾಕಲಾಗಿದೆ. ಇಂಥ ಬೆಡ್‌ಶೀಟ್‌ಗಳನ್ನು ಹೆಚ್ಚಾಗಿ ಬೋಟ್‌ನಲ್ಲಿ ಬಳಕೆ ಮಾಡುತ್ತಾರೆ’ ಎಂದು ತಿಳಿಸಿದರು. 

ಮುಂದೂಡಿಕೆ: ನಾಗ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು 21ನೇ ಸೆಷನ್ಸ್‌ ನ್ಯಾಯಾಲಯ ಏ. 27ಕ್ಕೆ ಮುಂದೂಡಿದೆ. ಸೋಮವಾರ ವಿಚಾರಣೆ ಕೈಗೆತ್ತಿಕೊಂಡಿದ್ದ  ನ್ಯಾಯಾಧೀಶರ ಎದುರು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆಂಭಾವಿ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದರು.

‘ತಲೆಮರೆಸಿಕೊಂಡಿರುವ ನಾಗರಾಜ್‌, ಮಾಧ್ಯಮಗಳಿಗೆ ವಿಡಿಯೊ ಕಳುಹಿಸಿದ್ದಾನೆ. ನ್ಯಾಯಾಧೀಶರಿಗೆ ಲಂಚ ಕೊಟ್ಟಿರುವುದಾಗಿ ಹೇಳಿದ್ದಾನೆ. ಇದು ನ್ಯಾಯಾಂಗ ನಿಂದನೆ. ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತನ್ನ ಮನೆಯಲ್ಲಿ 35 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿದ್ದ. ಆತನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು’ ಎಂದು ಅವರು ಕೋರಿದರು. ನಾಗನ ಪರ ವಕೀಲರು ಸಹ ಕೆಲ ದಾಖಲೆಗಳನ್ನು ಹಾಜರುಪಡಿಸಿ, ಜಾಮೀನು ನೀಡುವಂತೆ ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT