ADVERTISEMENT

ನಾಗವಾರ– ಥಣಿಸಂದ್ರ ಮೆಟ್ರೊ ಮಾರ್ಗ ಅಂತಿಮ?

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 20:23 IST
Last Updated 25 ಏಪ್ರಿಲ್ 2017, 20:23 IST
ನಾಗವಾರ– ಥಣಿಸಂದ್ರ ಮೆಟ್ರೊ ಮಾರ್ಗ ಅಂತಿಮ?
ನಾಗವಾರ– ಥಣಿಸಂದ್ರ ಮೆಟ್ರೊ ಮಾರ್ಗ ಅಂತಿಮ?   

ಬೆಂಗಳೂರು: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಗವಾರ–ಥಣಿಸಂದ್ರ ಮೂಲಕ ಮೆಟ್ರೊ ಸಂಪರ್ಕ ಕಲ್ಪಿಸುವ ಸಾಧ್ಯತೆ ನಿಚ್ಚಳವಾಗಿದೆ.

ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸುವ ಬಗ್ಗೆ ಅಧ್ಯಯನ ನಡೆಸಿರುವ ರೈಲ್‌ ಇಂಡಿಯಾ ಟೆಕ್ನಿಕಲ್‌ ಅಂಡ್‌ ಎಕನಾಮಿಕ್‌ ಸರ್ವೀಸಸ್‌ (ರೈಟ್ಸ್‌) ಸಂಸ್ಥೆ 9 ಮಾರ್ಗಗಳನ್ನು ಸೂಚಿಸಿತ್ತು. ಈ ಕುರಿತ ವಿವರಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು  (ಬಿಎಂಆರ್‌ಸಿಎಲ್‌) 2016ರ ಸೆಪ್ಟೆಂಬರ್‌ನಲ್ಲಿ  ವೆಬ್‌ಸೈಟ್‌ನಲ್ಲಿ  ಪ್ರಕಟಿಸಿ  ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿತ್ತು. 1,300 ಮಂದಿ ಪ್ರತಿಕ್ರಿಯಿಸಿದ್ದರು.

‘ಎರಡನೇ ಹಂತದಲ್ಲಿ ನಿರ್ಮಾಣಗೊಳ್ಳುತ್ತಿರುವ ಗೊಟ್ಟಿಗೆರೆ– ನಾಗವಾರ ಮಾರ್ಗವನ್ನು ವಿಮಾನ ನಿಲ್ದಾಣಕ್ಕೆ ವಿಸ್ತರಿಸಬೇಕು ಎಂಬ ಬಗ್ಗೆ ಹೆಚ್ಚಿನವರು ಒಲವು ತೋರಿಸಿದ್ದಾರೆ. ಈ ಬಗ್ಗೆ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣ ಬೈರೇಗೌಡ ಅವರ ಅಭಿಪ್ರಾಯ ಪಡೆದು ಮಾರ್ಗವನ್ನು ಅಂತಿಮಗೊಳಿಸುತ್ತೇವೆ’ ಎಂದು   ಬೆಂಗಳೂರು ಅಭಿವೃದ್ಧಿ ಸಚಿವ ಜಾರ್ಜ್‌  ಈ ಹಿಂದೆ ತಿಳಿಸಿದ್ದರು.

ADVERTISEMENT

ಜಾರ್ಜ್‌ ಹಾಗೂ ಕೃಷ್ಣ ಬೈರೇಗೌಡ ಅವರು ಬುಧವಾರ ಸಭೆ ನಡೆಸಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಗುರುತಿಸಿರುವ ಮಾರ್ಗಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. 

‘ನಾಗವಾರ, ಥಣಿಸಂದ್ರ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಹಾಗೂ  ಬಳ್ಳಾರಿ ರಸ್ತೆ ಮೂಲಕ ವಿಮಾನ ನಿಲ್ದಾಣ ತಲುಪುವ  ಮಾರ್ಗವನ್ನು ಅಂತಿಮ
ಗೊಳಿಸುವ ಬಗ್ಗೆ ಸಚಿವರಿಬ್ಬರು ಒಲವು ತೋರಿಸಿದ್ದಾರೆ. ಹಾಗಾಗಿ ಮೇಖ್ರಿವೃತ್ತ – ಯಲಹಂಕ  ಮಾರ್ಗ,  ಯಶವಂತಪುರ– ಯಲಹಂಕ    ಮಾರ್ಗ ಹಾಗೂ ಕೆ.ಆರ್.ಪುರ– ಬೂದಿಗೆರೆ ಕ್ರಾಸ್‌ ಮೂಲಕ ಸಾಗುವ ಮಾರ್ಗ  ಆಯ್ಕೆ ಮಾಡುವ ಸಾಧ್ಯತೆ ಕಡಿಮೆ’ ಎಂದು ಸಭೆಯಲ್ಲಿದ್ದ ಅಧಿಕಾರಿಯೊಬ್ಬರು ತಿಳಿಸಿದರು.

‘ಮೆಟ್ರೊ ಎರಡನೇ ಹಂತದಲ್ಲಿ ಗೊಟ್ಟಿಗೆರೆ–ನಾಗವಾರ ಮಾರ್ಗ ನಿರ್ಮಾಣವಾಗಲಿದೆ.  ಜಯದೇವ ಆಸ್ಪತ್ರೆ, ಡೇರಿ ವೃತ್ತ, ಎಂ.ಜಿ. ರಸ್ತೆ, ಶಿವಾಜಿ ನಗರ, ಕಂಟೋನ್ಮೆಂಟ್‌ ರೈಲು ನಿಲ್ದಾಣಗಳ ಮೂಲಕ ಹಾದುಹೋಗುವ ಈ ಮಾರ್ಗವನ್ನೇ ವಿಸ್ತರಿಸಿ  ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸುವು
ದರಿಂದ ಅನೇಕ ಅನುಕೂಲಗಳಿವೆ. ನಗರದ ದಕ್ಷಿಣದ ಪ್ರದೇಶಗಳಿಂದ ವಿಮಾನ ನಿಲ್ದಾಣಕ್ಕೆ  ನೇರ ಮೆಟ್ರೊ ಸಂಪರ್ಕ ಸಿಕ್ಕಂತಾಗುತ್ತದೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.