ADVERTISEMENT

ನಾಲ್ಕು ಖಾಸಗಿ ಬಸ್‌ ಜಪ್ತಿ

​ಪ್ರಜಾವಾಣಿ ವಾರ್ತೆ
Published 27 ಮೇ 2016, 19:50 IST
Last Updated 27 ಮೇ 2016, 19:50 IST
ಜಪ್ತಿ ಮಾಡಲಾದ ಬಸ್‌ಗಳನ್ನು ಹೊಸೂರು ರಸ್ತೆಯ ಡಿಪೊದಲ್ಲಿ ನಿಲ್ಲಿಸಲಾಗಿದೆ
ಜಪ್ತಿ ಮಾಡಲಾದ ಬಸ್‌ಗಳನ್ನು ಹೊಸೂರು ರಸ್ತೆಯ ಡಿಪೊದಲ್ಲಿ ನಿಲ್ಲಿಸಲಾಗಿದೆ   

ಬೆಂಗಳೂರು: ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ  ನಾಲ್ಕು ಖಾಸಗಿ ಬಸ್‌ಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ಜಪ್ತಿ ಮಾಡಿದ್ದಾರೆ.

ಇಲಾಖೆ ಜಂಟಿ ಆಯುಕ್ತ ನರೇಂದ್ರ ಹೋಳ್ಕರ್ ಹಾಗೂ ಇನ್‌ಸ್ಪೆಕ್ಟರ್‌ ಕರಿಯಪ್ಪ ಅವರ ನೇತೃತ್ವದಲ್ಲಿ ಹೊಸೂರು ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ  ತಂಡವು 50ಕ್ಕೂ ಹೆಚ್ಚು ವಾಹನಗಳ ತಪಾಸಣೆ ಮಾಡಿತು.

ಈ ವೇಳೆ ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದ ನಾಲ್ಕು ಬಸ್‌ಗಳಲ್ಲಿ ವಾಣಿಜ್ಯ ಸರಕು ಸಾಗಾಟ ಮಾಡುತ್ತಿರುವುದು ಕಂಡುಬಂತು. ಚಾಲಕರನ್ನು ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು, ಬಸ್‌ಗಳನ್ನು ಜಪ್ತಿ ಮಾಡಿದರು.

‘ನ್ಯಾಷನಲ್‌, ರಾಯಲ್ಸ್‌, ಸದಾತ್‌, ಎಸ್‌ಆರ್‌ಎಸ್‌ ಟ್ರಾವೆಲ್ಸ್‌ ಹೆಸರಿನ ಬಸ್‌ಗಳನ್ನು ಜಪ್ತಿ ಮಾಡಲಾಗಿದೆ. ಅವುಗಳನ್ನು ಹೊಸೂರು ರಸ್ತೆಯ ಡಿಪೊದಲ್ಲಿ ಇರಿಸಲಾಗಿದೆ’ ಎಂದು  ಹೋಳ್ಕರ್ ತಿಳಿಸಿದರು. 

‘ಪ್ರಯಾಣಿಕರನ್ನು ಕರೆದೊಯ್ಯಲು ಪರವಾನಗಿ ಪಡೆದಿರುವ ಬಸ್‌ಗಳಲ್ಲಿ ವಾಣಿಜ್ಯ ಸರಕು ಸಾಗಿಸಬಾರದು. ಆದರೂ ಹಲವು ಸಂಸ್ಥೆಗಳು ಈ ನಿಯಮ ಉಲ್ಲಂಘಿಸಿ ಬಸ್‌ಗಳಲ್ಲಿ ಸರಕು ಸಾಗಿಸುತ್ತಿವೆ. ಅದೇ ಕಾರಣಕ್ಕೆ ಕಾರ್ಯಾಚರಣೆ ನಡೆಸಿ ಬಸ್‌ಗಳನ್ನು ಜಪ್ತಿ ಮಾಡುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.