ADVERTISEMENT

ನಾಳೆಯಿಂದ ಮಾವು, ಹಲಸು ಮೇಳ

​ಪ್ರಜಾವಾಣಿ ವಾರ್ತೆ
Published 23 ಮೇ 2018, 19:30 IST
Last Updated 23 ಮೇ 2018, 19:30 IST
ಮಾವಿನ ಹಣ್ಣುಗಳ ಗುಣಮಟ್ಟ ಪರೀಕ್ಷಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳು
ಮಾವಿನ ಹಣ್ಣುಗಳ ಗುಣಮಟ್ಟ ಪರೀಕ್ಷಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳು   

ಬೆಂಗಳೂರು:  ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಮೇ 25ರಿಂದ ಜೂನ್‌ 15ರವರೆಗೆ ಲಾಲ್‌ಬಾಗ್‌ನಲ್ಲಿ ಮಾವು ಹಾಗೂ ಹಲಸಿನ ಮೇಳ ನಡೆಯಲಿದೆ.

‘ರೈತರಿಂದ ನೇರವಾಗಿ ಹಣ್ಣುಗಳನ್ನು ಖರೀದಿ ಮಾಡಿದ್ದೇವೆ. ಮಾವು ಹಾಗೂ ಹಲಸಿನ ಮೇಳವನ್ನು ಏಳು ವರ್ಷದ ಹಿಂದೆ ಪ್ರಾರಂಭಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಮಾರಾಟ ಹೆಚ್ಚಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಕೆ.ಎಂ. ಪರಮಶಿವಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಹೂವು ಬಿಡುವ ವೇಳೆಗೆ ಮಳೆಯಾಗಿದ್ದರಿಂದ ಮಾವಿನ ಫಲ ಬರುವುದು ತಡವಾಯಿತು. ಈ ಕಾರಣಕ್ಕೆ, ಮೇ ಮೊದಲ ವಾರ ಆರಂಭವಾಗಬೇಕಿದ್ದ ಮೇಳವನ್ನು ಮುಂದೂಡಲಾಗಿತ್ತು’ ಎಂದು ಅವರು ಹೇಳಿದರು.

ADVERTISEMENT

‘ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಮಾವಿನ ಬೆಳೆ ಕಡಿಮೆಯಿದೆ. ಜೂನ್‌ 15 ರವರೆಗೆ ಎಲ್ಲಾ ರೀತಿಯ ಹಣ್ಣುಗಳು ಸಿಗುವ ಸಾಧ್ಯತೆ ಇದೆ. ಆನಂತರವೂ ಫಲ ಇದ್ದರೆ ಮೇಳ ಮುಂದುವರಿಯಲಿದೆ. ಲಾಲ್‌ಬಾಗ್‌ನಲ್ಲಿ ಜನರ ಓಡಾಟ ಹೆಚ್ಚಿದ್ದು, ಹಣ್ಣುಗಳಿಗೆ ಬೇಡಿಕೆ ಇದೆ’ ಎಂದು ಅವರು ತಿಳಿಸಿದರು.

‘ನಾವು ಕೃತಕ ವಿಧಾನದಿಂದ ಹಣ್ಣು ಮಾಡುವುದಿಲ್ಲ. ಸಹಜವಾಗಿ ಆಗುವ ಹಣ್ಣುಗಳನ್ನು ತಂದು ಮಾರಾಟ ಮಾಡುವ ಮೂಲಕ ಗುಣಮಟ್ಟ ಹಾಗೂ ರುಚಿ ಕಾಯ್ದುಕೊಳ್ಳಲಾಗುತ್ತಿದೆ. ಇದರಲ್ಲಿ ಬರುವ ಶೇ 75ರಷ್ಟು ಲಾಭ ರೈತರಿಗೇ ತಲುಪುತ್ತಿದೆ’ ಎಂದರು.

‘ಎಲ್ಲಾ ರೀತಿಯ ಹಣ್ಣುಗಳನ್ನು ಒಂದೇ ಕಡೆ ಕೊಂಡುಕೊಳ್ಳಲು ಇಂತಹ ಮೇಳಗಳು ಅನುಕೂಲವಾಗಿವೆ. ಪ್ರತಿ ದಿನ ಹಣ್ಣುಗಳ ಗುಣಮಟ್ಟ ಪರೀಕ್ಷೆ ನಡೆಯುತ್ತದೆ’ ಎಂದೂ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.