ADVERTISEMENT

ನಿವೃತ್ತ ಎಸಿಪಿ ವಿರುದ್ಧ ದೂರು

ಮದುವೆಯಾಗಿ ಹಣ ಪಡೆದು ವಂಚಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 19:59 IST
Last Updated 22 ಸೆಪ್ಟೆಂಬರ್ 2014, 19:59 IST

ಬೆಂಗಳೂರು: ‘ನಿವೃತ್ತ ಎಸಿಪಿ ಕೆ.ಶೇಷಾದ್ರಿ ಅವರು ನನ್ನನ್ನು ಎರಡನೇ ಮದುವೆ­ಯಾಗಿ ಹಣ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ವೆಂಕಟಲಕ್ಷ್ಮಮ್ಮ ಎಂಬುವರು ವೈಯಾಲಿಕಾವಲ್‌ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ. ‘ಶೇಷಾದ್ರಿ ಅವರು ಮೊದಲ ಪತ್ನಿ ಮೃತಪಟ್ಟಿರುವುದಾಗಿ ಸುಳ್ಳು ಹೇಳಿ, ನನ್ನನ್ನು ಮದುವೆಯಾಗಿ 12 ವರ್ಷ ಒಟ್ಟಿಗೆ ಸಂಸಾರ ನಡೆಸಿದ್ದರು. ಆದರೆ, ಕೆಲ ವರ್ಷಗಳ ಹಿಂದೆ ಅವರ ಮೊದಲ ಪತ್ನಿ ಬದುಕಿರುವುದು ಗೊತ್ತಾಯಿತು’ ಎಂದು ವೆಂಕಟಲಕ್ಷ್ಮಮ್ಮ ದೂರಿನಲ್ಲಿ ತಿಳಿಸಿದ್ದಾರೆ.

‘ನನ್ನ ಹೆಸರಿನಲ್ಲಿದ್ದ ನಿವೇಶನಗಳು ಮತ್ತು ಮನೆಗಳನ್ನು ಶೇಷಾದ್ರಿ ಅವರು ಮಾರಾಟ ಮಾಡಿಸಿ ಹಣ ಪಡೆದು­ಕೊಂಡಿದ್ದರು. ಎರಡು ವರ್ಷಗಳಿಂದ ನನ್ನಿಂದ ದೂರವಾಗಿರುವ ಅವರು ಹಣ ವಾಪಸ್‌ ಕೊಡಲು ನಿರಾಕರಿಸಿ, ಕೊಲೆ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಅವರು ದೂರಿದ್ದಾರೆ.

‘ಮಗಳು ಮತ್ತು ತಮ್ಮನ ಜತೆ ವೈಯಾಲಿಕಾವಲ್‌ನಲ್ಲಿನ ಶೇಷಾದ್ರಿ ಅವರ ಮನೆಯ ಬಳಿ ಹೋಗಿ ಹಣ ವಾಪಸ್‌ ಕೇಳಿದೆ. ಆಗ ಅವರು ಮೊದಲ ಪತ್ನಿ ಮತ್ತು ಮಗನ ಜತೆ ಸೇರಿ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದರು’ ಎಂದು ವೆಂಕಟಲಕ್ಷ್ಮಮ್ಮ ದೂರಿನಲ್ಲಿ ಹೇಳಿದ್ದಾರೆ.

ಪ್ರತಿದೂರು: ‘ವೆಂಕಟಲಕ್ಷ್ಮಮ್ಮ ಬೆಳಿಗ್ಗೆ ನನ್ನ ಮನೆಯ ಬಳಿ ಬಂದು ಜಗಳ ವಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಶೇಷಾದ್ರಿ ಅವರು ಪ್ರತಿದೂರು ಕೊಟ್ಟಿದ್ದಾರೆ. ಅವರಿಬ್ಬರ ದೂರುಗಳನ್ನು ಸ್ವೀಕರಿಸಲಾ­ಗಿದೆ. ಆದರೆ, ಎಫ್‌ಐಆರ್‌ ದಾಖಲಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ವೆಂಕಟಲಕ್ಷ್ಮಮ್ಮ ಅವರನ್ನು ನಾನು ಮದುವೆಯಾಗಿಲ್ಲ. ಅವರು ಹಣ­ದಾ­ಸೆ­ಗಾಗಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರಿಂದ ಹಣ ಪಡೆದಿರುವುದಕ್ಕೆ ದಾಖಲೆಪತ್ರಗಳಿದ್ದರೆ ಬಹಿರಂಗಪಡಿಸಲಿ’ ಎಂದು ಶೇಷಾದ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.
ರಾಜಗೋಪಾಲನಗರ ನಿವಾಸಿ­ಯಾದ ವೆಂಕಟಲಕ್ಷ್ಮಮ್ಮ ಅವರು ಮೇ ತಿಂಗಳಿನಲ್ಲೂ ಇದೇ ರೀತಿ ಮಹಾಲಕ್ಷ್ಮಿ­ಲೇಔಟ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಗರದ ಯಶವಂತಪುರ ಉಪ ವಿಭಾಗದಲ್ಲಿ ಎಸಿಪಿಯಾಗಿದ್ದ ಶೇಷಾದ್ರಿ ಇತ್ತೀಚೆಗಷ್ಟೇ ನಿವೃತ್ತಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.