ADVERTISEMENT

ನೈಸ್‌ ಕಂಪೆನಿಯಿಂದ 756 ಎಕರೆ ಭೂಮಿ ಪರಭಾರೆ

ಲೋಕೋಪಯೋಗಿ ಇಲಾಖೆ ತನಿಖೆಯಿಂದ ಬಹಿರಂಗ * ಮಾರಾಟವಾದ ಪ್ರದೇಶದ ಮೌಲ್ಯ ₹7,077 ಕೋಟಿ

ಪಿ.ಎಂ.ರಘುನಂದನ್
Published 26 ಮೇ 2016, 19:41 IST
Last Updated 26 ಮೇ 2016, 19:41 IST
ನೈಸ್‌ ಕಂಪೆನಿಯಿಂದ 756 ಎಕರೆ ಭೂಮಿ ಪರಭಾರೆ
ನೈಸ್‌ ಕಂಪೆನಿಯಿಂದ 756 ಎಕರೆ ಭೂಮಿ ಪರಭಾರೆ   

ಬೆಂಗಳೂರು: ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ‘ಬೆಂಗಳೂರು - ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್' (ಬಿಎಂಐಸಿ) ಯೋಜನೆಗೆಂದು ಮಂಜೂರಾದ 756 ಎಕರೆ ಜಾಗವನ್ನು ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್‌ನ (ನೈಸ್) ಮಾಲೀಕರು ಪರಭಾರೆ ಮಾಡಿರುವ ಅಂಶ ಲೋಕೋಪಯೋಗಿ ಇಲಾಖೆ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಮಾರಾಟ ಮಾಡಿರುವ ಜಾಗ ಮೌಲ್ಯ ₹7,077 ಕೋಟಿ.

‘ಟೋಲ್‌ ರಸ್ತೆ ನಿರ್ಮಿಸುವ ಉದ್ದೇಶದಿಂದ ನೈಸ್‌ಗೆ ಜಮೀನು ಮಂಜೂರು ಮಾಡಲಾಗಿತ್ತು. ಒಪ್ಪಂದದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಲಾಗಿತ್ತು. ಆದರೆ, ಜಮೀನು ಮಾರಾಟ ಮಾಡುವ ಮೂಲಕ  ನೈಸ್‌ ಒಪ್ಪಂದವನ್ನು ಉಲ್ಲಂಘಿಸಿದೆ’ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ.

‘ನೈಸ್‌ ಸಂಸ್ಥೆಯ ಮಾಲೀಕರು ವಿವಿಧ  ರಿಯಲ್ ಎಸ್ಟೇಟ್‌ ಉದ್ಯಮಿಗಳೊಂದಿಗೆ ವ್ಯವಹಾರ ನಡೆಸಿದ್ದಾರೆ. ಗೃಹ ಯೋಜನೆಗಳಿಗಾಗಿ ಈ ಜಾಗವನ್ನು ಅಡವು ಇಟ್ಟಿದ್ದಾರೆ ಹಾಗೂ ಜಂಟಿ ಅಭಿವೃದ್ಧಿ ಒಪ್ಪಂದ (ಜೆಡಿಎ) ಮಾಡಿಕೊಂಡಿದ್ದಾರೆ.

ADVERTISEMENT

61 ಎಕರೆ ಜಾಗಕ್ಕೆ ಜಂಟಿ ಅಭಿವೃದ್ಧಿ ಒಪ್ಪಂದ ಮಾಡಿಕೊಳ್ಳಲಾಗಿದೆ. 29 ಎಕರೆಯನ್ನು ವಿವಿಧ ಕಂಪೆನಿಗಳಿಗೆ ಹಾಗೂ ವ್ಯಕ್ತಿಗಳಿಗೆ ಮಾರಲಾಗಿದೆ. ಉಳಿದ 667 ಎಕರೆ ಜಾಗವನ್ನು ಟಿಡಬ್ಲ್ಯೂಐಟಿ ಆ್ಯಂಡ್‌ ಇಸಿಎಲ್‌ ಕಂಪೆನಿಗೆ ಅಡವು ಇಡಲಾಗಿದೆ’ ಎಂದು ವರದಿ ತಿಳಿಸಿದೆ.

ಲೋಕೋಪಯೋಗಿ ಇಲಾಖೆಯು ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ಸಂಸ್ಥೆಯ (ಐಸೆಕ್‌) ಮೂಲಕ ಈ ವರದಿ ಸಿದ್ಧಪಡಿಸಿದೆ. ನೈಸ್‌ ಯೋಜನೆಯ ಅಕ್ರಮಗಳ ತನಿಖೆ ನಡೆಸುತ್ತಿರುವ ಸದನ ಸಮಿತಿಗೆ ಇತ್ತೀಚೆಗೆ ವರದಿಯನ್ನು ಸಲ್ಲಿಸಲಾಗಿದೆ. ನೈಸ್‌ ಯೋಜನೆ ಕುರಿತು ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರ 2014ರ ಸೆಪ್ಟೆಂಬರ್‌ನಲ್ಲಿ ಸದನ ಸಮಿತಿ ರಚಿಸಿತ್ತು.

ಕಾನೂನು ಸಚಿವ ಟಿ.ಬಿ.ಜಯಚಂದ್ರ ಸಮಿತಿಯ ಅಧ್ಯಕ್ಷರಾಗಿದ್ದು, 11 ಸದಸ್ಯರು ಇದ್ದಾರೆ. 756 ಎಕರೆ ಜಾಗದ ಮಾರುಕಟ್ಟೆ ಮೌಲ್ಯ ₹7,077 ಕೋಟಿ ಎಂದು ಐಸೆಕ್‌ ಅಂದಾಜಿಸಿದೆ.

ಮಾರ್ಗಸೂಚಿ ದರದ ಪ್ರಕಾರ ಇದರ ಮೌಲ್ಯ ₹4,951 ಕೋಟಿ. ಅಡವು ಒಪ್ಪಂದ, ಜಂಟಿ ಅಭಿವೃದ್ಧಿ ಯೋಜನೆ ಮೂಲಕ ಪ್ರತಿ ಚದರ ಅಡಿಯ ಬೆಲೆ ಹಾಗೂ ಕ್ರಯ ಪತ್ರದಲ್ಲಿನ ಬೆಲೆಯನ್ನು ಗಣನೆಗೆ ತೆಗೆದುಕೊಂಡು ಸಂಸ್ಥೆ ವರದಿ ಸಿದ್ಧಪಡಿಸಿದೆ.

ಲೋಕೋಪಯೋಗಿ ಇಲಾಖೆ ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಅವರ ಗಮನಕ್ಕೂ ತಂದಿದೆ. ನೈಸ್‌ ಯೋಜನೆಯ ಬಗ್ಗೆ ಪವರ್‌ ಪಾಯಿಂಟ್‌ ಪ್ರೆಸೆಂಟೇಷನ್‌ ಮೂಲಕ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಲಾಗಿದೆ.

‘ಯೋಜನೆ ಅನುಷ್ಠಾನದ ಬಗ್ಗೆ ರಾಜ್ಯ ಸರ್ಕಾರ ಹಾಗೂ ನೈಸ್‌ ಸಂಸ್ಥೆ 1997ರಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ಒಪ್ಪಂದದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು ಎಂದೂ ನಿರ್ದೇಶನ ನೀಡಲಾಗಿತ್ತು.

ಆದರೆ, ಭೂಮಿ ಮಾರಾಟದ ಮೂಲಕ ಒಪ್ಪಂದದ ಕಲಂ 4.1.2 ಅನ್ನು ಉಲ್ಲಂಘಿಸಲಾಗಿದೆ’ ಎಂದು ಇಲಾಖೆ ಬೆಳಕು ಚೆಲ್ಲಿದೆ. ನೈಸ್‌ ರಸ್ತೆಗೆ ನೀಡಿರುವ ಎಲ್ಲ ಜಾಗವನ್ನು 30 ವರ್ಷಗಳ ಬಳಿಕ ಸರ್ಕಾರಕ್ಕೆ ಮರಳಿಸಬೇಕು ಎಂದೂ ಒಪ್ಪಂದದ ವೇಳೆ ಷರತ್ತು ವಿಧಿಸಲಾಗಿತ್ತು.

ಹಲವು ವರ್ಷಗಳ ಕಾಮಗಾರಿ ಬಳಿಕವೂ ಯೋಜನೆ ಪೂರ್ಣಗೊಂಡಿಲ್ಲ. ಯೋಜನೆಯ ವಿರುದ್ಧ ಕಾನೂನು ಸಮರವೂ ನಡೆದಿತ್ತು. ಕಂಪೆನಿ ಪೆರಿಫೆರಲ್‌ ರಸ್ತೆಯ (41 ಕಿ.ಮೀ) ಹಾಗೂ ಲಿಂಕ್ ರಸ್ತೆಯ (9.8 ಕಿ.ಮೀ) ಬಹುತೇಕ ಭಾಗ ಪೂರ್ಣಗೊಳಿಸಿದೆ.

ಎಕ್ಸ್‌ಪ್ರೆಸ್‌ ಹೆದ್ದಾರಿಯ ಒಂದು ಭಾಗ ಮಾತ್ರ ಪೂರ್ಣಗೊಂಡಿದೆ. ಅಗತ್ಯ ಭೂಮಿ ಮಂಜೂರು ಮಾಡಿದರೆ ಯೋಜನೆ ಪೂರ್ಣಗೊಳಿಸಲು ಸಿದ್ಧ ಎಂದು ಕಂಪೆನಿ ಸಮಜಾಯಿಷಿ ನೀಡುತ್ತಿದೆ.

ಈಗಾಗಲೇ ಅಗತ್ಯಕ್ಕಿಂತ ಹೆಚ್ಚಿನ ಭೂಮಿಯನ್ನು ಸರ್ಕಾರ ನೀಡಿದೆ ಎಂದು ಲೋಕೋಪಯೋಗಿ ಇಲಾಖೆ ಸ್ಪಷ್ಟಪಡಿಸಿದೆ. ‘ವರದಿಯ ಬಗ್ಗೆ ನನಗೇನೂ ಗೊತ್ತಿಲ್ಲ. ಹೀಗಾಗಿ ಪ್ರತಿಕ್ರಿಯಿಸಲಾರೆ’ ಎಂದು ನೈಸ್‌ ವ್ಯವಸ್ಥಾಪಕ ನಿರ್ದೇಶಕ ಅಶೋಕ್‌ ಖೇಣಿ ತಿಳಿಸಿದರು.

ನೈಸ್‌ಗೆ ನೋಟಿಸ್‌ ಜಾರಿ ಮಾಡಿದ ಸರ್ಕಾರ
ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಿಸದೇ ಯೋಜನಾ  ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಲೋಕೋಪಯೋಗಿ ಇಲಾಖೆ ಇತ್ತೀಚೆಗೆ ನೈಸ್‌ ಕಂಪೆನಿಗೆ ನೋಟಿಸ್‌ ಜಾರಿ ಮಾಡಿದೆ. ಒಪ್ಪಂದದ ಪ್ರಕಾರ, ಎಕ್ಸ್‌ಪ್ರೆಸ್‌ ಹೆದ್ದಾರಿ, ಲಿಂಕ್‌ ರಸ್ತೆ ಮತ್ತು ಪೆರಿಫೆರಲ್‌ ರಸ್ತೆಗಳನ್ನು ಕಾಂಕ್ರೀಟ್‌ ಹಾಸಿನ ರಸ್ತೆಗಳನ್ನಾಗಿ ನಿರ್ಮಿಸಬೇಕಿತ್ತು.

ಆಗಿರುವ ಲೋಪವನ್ನು ಸರಿಪಡಿಸಿಕೊಳ್ಳಲು ಲೋಕೋಪಯೋಗಿ ಇಲಾಖೆ ನೈಸ್‌ಗೆ 180 ದಿನಗಳ ಕಾಲಾವಧಿಯನ್ನೂ ನೀಡಿತ್ತು.  ಆದರೆ, ಆದೇಶದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಿಂದ ತಡೆಯಾಜ್ಞೆಯನ್ನು ತಂದಿತ್ತು. ಇವೆಲ್ಲದರ ಕುರಿತು ಲೋಕೋಪಯೋಗಿ ಇಲಾಖೆ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿದೆ. 1 ಮತ್ತು 2ನೇ ಹಂತದ ಟೋಲ್‌ ರಸ್ತೆಗಳನ್ನು  2003ರ ಮಾರ್ಚ್‌ 29ರೊಳಗೆ ಪೂರ್ಣಗೊಳಿಸಬೇಕಿತ್ತು.

ಚತುಷ್ಪಥ ಕಾಂಕ್ರೀಟ್‌ ರಸ್ತೆಗಳ ನಿರ್ಮಾಣವೂ ಒಪ್ಪಂದದ ಭಾಗವಾಗಿತ್ತು.  2002ರಲ್ಲಿ ಅಂದಿನ ಸರ್ಕಾರ ಆರಂಭಿಕ ಹಂತದಲ್ಲಿ ಎರಡು ಪಥಗಳ ಡಾಂಬರ್‌ ರಸ್ತೆಯನ್ನು ನಿರ್ಮಿಸಲು ಮತ್ತು ಟೋಲ್‌ ರಸ್ತೆಯಾಗಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಕಂಪೆನಿಯ ಕೋರಿಕೆಗೆ ಒಪ್ಪಿಗೆ ನೀಡಿತ್ತು.

ಆದರೆ, ನಾಲ್ಕು ಪಥಗಳ ಕಾಂಕ್ರೀಟ್‌ ಹೊದಿಕೆಯ ರಸ್ತೆಯನ್ನು ನಿರ್ಮಿಸುವ ಮೂಲ ನಿಯಮಕ್ಕೆ ಬದ್ಧವಾಗಿರಬೇಕು ಎಂದೂ ಸೂಚಿಸಲಾಗಿತ್ತು ಎಂಬ ಅಂಶ ವರದಿಯಲ್ಲಿದೆ.

ಯೋಜನೆಯಲ್ಲಿ ಬೆಂಗಳೂರು– ಮೈಸೂರು ನಡುವೆ 111 ಕಿ.ಮೀ.ಗಳ ಎಕ್ಸ್‌ಪ್ರೆಸ್‌ ಹೆದ್ದಾರಿ, 41 ಕಿ.ಮೀಗಳ ಪೆರಿಫೆರಲ್‌ ರಸ್ತೆ, 9.8 ಕಿ.ಮೀ.ಗಳ  ಲಿಂಕ್‌ (ಎರಡೂ ಬೆಂಗಳೂರು ಸುತ್ತ) ಮತ್ತು ಐದು ಟೌನ್‌ಷಿಪ್‌ಗಳು. ಇದನ್ನು  ಬಿಲ್ಡ್‌, ಓನ್‌, ಆಪರೇಟ್‌ ಮತ್ತು ಟ್ರಾನ್ಸ್‌ಫರ್‌ (ಬೂಟ್‌) ಆಧಾರದಲ್ಲಿ ಕೈಗೊಳ್ಳಬೇಕಿತ್ತು. 

ಪೆರಿಫೆರಲ್‌ ರಸ್ತೆ ಮತ್ತು ಲಿಂಕ್‌ ರಸ್ತೆ, ಎಕ್ಸ್‌ಪ್ರೆಸ್‌ ಹೆದ್ದಾರಿಯ ಸ್ವಲ್ಪ ಭಾಗ ಪೂರ್ಣಗೊಂಡಿದೆ. ಆ ಬಳಿಕ ಯೋಜನೆ ಸ್ಥಗಿತಗೊಂಡಿದೆ. ಇದಕ್ಕೆ ಮುಖ್ಯ ಕಾರಣ ಕಂಪೆನಿಯು ಯೋಜನೆಯನ್ನು ಪೂರ್ಣಗೊಳಿಸಲು ಭೂಮಿಗೆ ಬೇಡಿಕೆ ಸಲ್ಲಿಸಿದ್ದು.

ಎಕ್ಸ್‌ಪ್ರೆಸ್‌ ಹೆದ್ದಾರಿ, ಲಿಂಕ್‌ ರಸ್ತೆ ಮತ್ತು ಪೆರಿಫೆರಲ್‌ ರಸ್ತೆಗಳ ಮೇಲ್ಭಾಗವನ್ನು ಸಿಮೆಂಟ್‌ ಕಾಂಕ್ರೀಟ್‌ನಿಂದಲೆ ವಿನ್ಯಾಸಗೊಳಿಸಬೇಕು. ಅದು 60 ವರ್ಷಗಳವರೆಗೆ ಬಾಳಿಕೆ ಬರುವ ಹಾಗೆ ಅಂತರರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರಬೇಕು ಎಂದು ಲೋಕೋಪಯೋಗಿ ಇಲಾಖೆ ಕಂಪೆನಿಗೆ ತಿಳಿಸಿತ್ತು.

‘ತಾಂತ್ರಿಕ ಅಗತ್ಯಕ್ಕೆ ಅನುಗುಣವಾಗಿ ಟೋಲ್‌ ರಸ್ತೆಯನ್ನು ವಿನ್ಯಾಸ ಮಾಡಬೇಕು ಎಂದು ಯೋಜನಾ ತಾಂತ್ರಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾಂಕ್ರೀಟ್‌ನ ದಪ್ಪವು ಏಕಪ್ರಕಾರವಾಗಿ 300 ಎಂ.ಎಂ. ಇರಲೇಬೇಕು’ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ.

‘ಹೆಚ್ಚುವರಿ ಭೂಮಿ ನೀಡುವ ಅಗತ್ಯವಿಲ್ಲ’
ಬಾಕಿ ಇರುವ ಸಂಪರ್ಕ ರಸ್ತೆಗಳನ್ನು ಪೂರ್ಣಗೊಳಿಸಲು 754 ಎಕರೆಗಳಷ್ಟು ಹೆಚ್ಚುವರಿ  ಭೂಮಿ ನೀಡುವ ಅಗತ್ಯವಿಲ್ಲ ಎಂಬುದು ಲೋಕೋಪಯೋಗಿ ಇಲಾಖೆಯ ವಾದವಾಗಿದೆ.

ನೈಸ್‌ ಕಂಪೆನಿಯು ಯೋಜನೆಯ ಸೆಕ್ಷನ್‌ 1ರ ಪ್ರಕಾರ ಕಳೆದ ಮಾರ್ಚ್‌ನಲ್ಲಿ ಜಾಗವನ್ನು ಕೇಳಿದೆ.   ಬಾಕಿ ಸಂಪರ್ಕ ರಸ್ತೆಗಳನ್ನು ಪೂರ್ಣಗೊಳಿಸಲು ಪೆರಿಫೆರಲ್‌ ರಸ್ತೆಗೆ 678 ಎಕರೆ, ಸಂಪರ್ಕ ರಸ್ತೆಗೆ 19 ಎಕರೆ, ಹಾಗೂ ಎಕ್ಸ್‌ಪ್ರೆಸ್‌ ಹೆದ್ದಾರಿಗೆ 56 ಎಕರೆ ಜಾಗ ಬೇಕು ಎಂದು ಕಂಪೆನಿ ಪ್ರತಿಪಾದಿಸಿದೆ.

ಈ ರಸ್ತೆಗಳ ಪೈಕಿ ಬಹುತೇಕ ರಸ್ತೆಗಳು ಈಗಾಗಲೇ ಪೂರ್ಣಗೊಂಡಿವೆ. 111 ಕಿ.ಮೀ ಎಕ್ಸ್‌ಪ್ರೆಸ್‌ ರಸ್ತೆಯ ಪೈಕಿ 4.5 ಕಿ.ಮೀ ಈಗಾಗಲೇ ಪೂರ್ಣಗೊಂಡಿದೆ. 13.5 ಕಿ.ಮೀ ಎಕ್ಸ್‌ಪ್ರೆಸ್‌ ರಸ್ತೆಯನ್ನು ಸೆಕ್ಷನ್‌ ಎ ಪ್ರಕಾರ ಪೂರ್ಣಗೊಳಿಸಬೇಕಾಗಿದೆ.  ಕಂಪೆನಿಯು ಬೇಡಿಕೆ ಇಟ್ಟಿರುವಷ್ಟು ಭೂಮಿಗೆ ಈಗಾಗಲೇ ಪರಿಹಾರವನ್ನೂ ಪಾವತಿಸಲಾಗಿದೆ.

ಲೋಕೋಪಯೋಗಿ ಇಲಾಖೆಯು ಕಂಪೆನಿಯ ಪ್ರಸ್ತಾವವನ್ನು ತಿರಸ್ಕರಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದೆ. ‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಈಗಾಗಲೇ ಅಗತ್ಯಕ್ಕಿಂತ 554 ಎಕರೆಯಷ್ಟು ಹೆಚ್ಚುವರಿ ಜಾಗವನ್ನು ಹಸ್ತಾಂತರಿಸಿದೆ’ ಎಂದು ಇಲಾಖೆ ತಿಳಿಸಿದೆ.

‘ಕೆಐಎಡಿಬಿ ಈಗಾಗಲೇ 2,747 ಎಕರೆಗಳಷ್ಟು ಜಾಗವನ್ನು ಹಸ್ತಾಂತರಿಸಿದೆ. ಅಗತ್ಯ ಇದ್ದುದು 2,193 ಎಕರೆ ಮಾತ್ರ. ಅಂದರೆ, 554 ಎಕರೆಯಷ್ಟು ಜಾಗವನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಪೆರಿಫೆರಲ್‌ ರಸ್ತೆ ಪ್ರದೇಶದಲ್ಲಿ ಇನ್ನಷ್ಟು ಜಾಗವನ್ನು ಒದಗಿಸುವ ಅಗತ್ಯ ಇಲ್ಲ’ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಇಲಾಖೆ ಪ್ರಕಾರ, ‘ನೈಸ್‌ ಬನ್ನೇರುಘಟ್ಟ ಜಂಕ್ಷನ್‌ ಬಳಿಯ ರ್‌್ಯಾಂಪ್‌ನ ಸ್ವಲ್ಪ ಭಾಗ ಹಾಗೂ ಕೆಂಗೇರಿ ಜಂಕ್ಷನ್‌ ಬಳಿಯ ರ್‌್ಯಾಂಪ್‌ನ ಸ್ವಲ್ಪ ಭಾಗವನ್ನು ಹೊರತುಪಡಿಸಿ  41 ಕಿ.ಮೀಯಷ್ಟು ಪೆರಿಫೆರಲ್‌ ರಸ್ತೆಯನ್ನು (ಡಾಂಬರು ರಸ್ತೆ)  ಪೂರ್ಣಗೊಳಿಸಿದೆ.

ಇದರ  ಬಾಕಿ ಸಂಪರ್ಕ ರಸ್ತೆಗಳಿಗೆ ಅಗತ್ಯ ಇರುವ ಭೂಮಿ 5.8 ಎಕರೆ ಮಾತ್ರ.  ವ್ಯಾಜ್ಯಗಳು ಪರಿಹಾರವಾಗುತ್ತಿದ್ದಂತೆಯೇ ಅದನ್ನೂ ಹಸ್ತಾಂತರಿಸುತ್ತೇವೆ.  ಈ ಜಾಗಗಳು ಹೊಸಹಳ್ಳಿ, ಗೊಲ್ಲರಪಾಳ್ಯ, ಹೆಮ್ಮಿಗೆಪುರ ಹಾಗೂ ಗೊಟ್ಟಿಗೆರೆ ಬಳಿ ಇವೆ’.

‘ಬಾಕಿ ಸಂಪರ್ಕ ರಸ್ತೆಯಲ್ಲಿ 400 ಮೀ  ಹೊರತುಪಡಿಸಿ, 9.1 ಕಿ.ಮೀ ಸಂಪರ್ಕ ರಸ್ತೆಯ ಉಳಿದ ಭಾಗವನ್ನು ನೈಸ್‌ ಪೂರ್ಣಗೊಳಿಸಿದೆ.  ಬ್ಯಾಟರಾಯನಪುರ, ಪಂತರಪಾಳ್ಯ ಹಾಗೂ ಹೊಸಕೆರೆಹಳ್ಳಿ ಭಾಗದಲ್ಲಿ ಕಾಮಗಾರಿ ಬಾಕಿ ಇದೆ.

13.5 ಕಿ.ಮೀ ಎಕ್ಸ್‌ಪ್ರೆಸ್‌ ಹೆದ್ದಾರಿ ಪೈಕಿ  4.5 ಕಿ.ಮೀ ಮಾತ್ರ ಪೂರ್ಣಗೊಂಡಿದೆ. ಎಕ್ಸ್‌ಪ್ರೆಸ್‌ ಹೆದ್ದಾರಿ ಹಾಗೂ ಟೌನ್‌ಶಿಪ್‌–1 (ಸೆಕ್ಷನ್‌ ಎ ಪ್ರಕಾರ) ಖಾಸಗಿ ಜಾಗಕ್ಕೆ ಬೆಲೆ ನಿಗದಿಗೆ ನೈಸ್‌ ಒಪ್ಪಿಗೆ  ಪಡೆಯಬೇಕಿದೆ. ಬೆಲೆ ನಿಗದಿ ಇತ್ಯರ್ಥಗೊಂಡ ಬಳಿಕ ಜಾಗವನ್ನು ಹಸ್ತಾಂತರಿಸುತ್ತೇವೆ’ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.