ADVERTISEMENT

ನೈಸ್‌ ಅಕ್ರಮ ತನಿಖೆಗೆ ಸದನ ಸಮಿತಿ ರಚನೆ

ಪರಿಶೀಲನೆಯ ಭರವಸೆ ನೀಡಿದ ಸಚಿವ ಜಯಚಂದ್ರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:37 IST
Last Updated 23 ಜುಲೈ 2014, 19:37 IST

ಬೆಂಗಳೂರು: ಬೆಂಗಳೂರು-–ಮೈಸೂರು ಇನ್‌­ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ರಸ್ತೆ ನಿರ್ಮಾಣ ಯೋಜನೆಯಲ್ಲಿ ನಂದಿ ಇನ್‌­ಫ್ರಾಸ್ಟ್ರ­ಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ಕಂಪೆನಿ ಅಕ್ರಮ ನಡೆಸಿದೆ ಎಂಬ ಆರೋಪಗಳ ಕುರಿತ ತನಿಖೆಗೆ ಸದನ ಸಮಿತಿ ರಚಿಸುವ ಕುರಿತು ಪರಿಶೀಲಿಸಿ ನಿರ್ಧಾರ ಪ್ರಕಟಿಸುವುದಾಗಿ ಸರ್ಕಾರ ಭರವಸೆ ನೀಡಿದೆ.

ಬುಧವಾರ ವಿಧಾನಸಭೆಯಲ್ಲಿ ಲೋಕೋಪ­ಯೋಗಿ ಮತ್ತು ಜಲ ಸಂಪನ್ಮೂಲ ಇಲಾಖೆಗಳ ಬೇಡಿಕೆಗಳ ಮೇಲಿನ ಚರ್ಚೆಯ ಸಂದರ್ಭದಲ್ಲಿ ಈ ಕುರಿತು ಕಾವೇರಿದ ಚರ್ಚೆ ನಡೆಯಿತು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂಬ ಆಗ್ರಹವನ್ನು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಮುಂದಿಟ್ಟರು. ಸದನ ಸಮಿತಿ ಮೂಲಕ ತನಿಖೆ ನಡೆಸಿ, ನಂತರ ಮುಂದಿನ ತನಿಖೆಗೆ ನಿರ್ಧಾರ ಕೈಗೊಳ್ಳಬೇಕೆಂಬ ಸಲಹೆಯೂ ವ್ಯಕ್ತವಾಯಿತು.

ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಮಾತಿನ ಮಧ್ಯ ಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ‘ಈ ವಿಷಯದಲ್ಲಿ ಒಂದಷ್ಟು ಸಂಶಯಗಳು ಮೂಡಿವೆ. ಅವುಗಳು ಹಾಗೆಯೇ ಉಳಿದುಕೊಂಡು ಬಂದಿವೆ. ಈಗ ಸರ್ಕಾರ ಸರಿಯಾದ ನಿಲುವು ಪ್ರಕಟಿಸಬೇಕು. ಸುಮ್ಮನೆ ಇರಲು ಬರುವುದಿಲ್ಲ’ ಎಂದರು. ಅದನ್ನು  ಕಾನೂನು ಸಚಿವರು ಒಪ್ಪಿಕೊಂಡರು.

‘ಇದು ಸರ್ಕಾರ-–ಖಾಸಗಿ ಸಹಭಾಗಿತ್ವದ ಯೋಜನೆ. ಯೋಜನೆ ಕುರಿತು ಸಿಎಜಿ ಲೆಕ್ಕಪರಿ­ಶೋಧನೆ ನಡೆಸುವ ಪ್ರಯತ್ನ ನಡೆದಿತ್ತು. ಆದರೆ, ಅದು ಸಾಧ್ಯ ಆಗಿಲ್ಲ. ಈ ಯೋಜನೆಗೆ ಸಂಬಂಧಿ­ಸಿದಂತೆ ಅಧೀನ ನ್ಯಾಯಾಲಯದಿಂದ ಸುಪ್ರೀಂ­ಕೋರ್ಟ್‌ವರೆಗೆ ಹಲವು ಆದೇಶಗಳು ಬಂದಿವೆ. ಸದನ ಸಮಿತಿ ರಚಿಸಬೇಕೆಂಬ ಬೇಡಿಕೆ ಬಗ್ಗೆ ಪರಿಶೀಲಿಸಿ ನಿರ್ಧಾರ ಪ್ರಕಟಿಸುತ್ತೇವೆ’ ಎಂದರು.

ಜಮೀನು ಲೂಟಿ ಆರೋಪ
ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಎಸ್.ಆರ್.ವಿಶ್ವನಾಥ್, ‘ನೈಸ್ ಕಂಪೆನಿ ರಾಜ್ಯ ಸರ್ಕಾರದ ಜೊತೆಗಿನ ಮೂಲ ಒಪ್ಪಂದವನ್ನು ನಿರಂತರವಾಗಿ ಉಲ್ಲಂಘಿಸುತ್ತಿದೆ. ತನ್ನ ಅನು­ಕೂಲಕ್ಕೆ ತಕ್ಕಂತೆ ಕಂಪೆನಿ ಒಪ್ಪಂದವನ್ನು ತಿರು­ಚುತ್ತಾ ಬಂದಿದೆ. ರಸ್ತೆ ನಿರ್ಮಾಣದ ಹೆಸರಿನಲ್ಲಿ ೧,೨೯೧ ಎಕರೆ ಜಮೀನನ್ನು ಬೆಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿ ಅಕ್ರಮವಾಗಿ ಪಡೆದುಕೊಂಡಿದೆ’ ಎಂದು ಆರೋಪಿಸಿದರು.

ಜಮೀನನ್ನು ರಸ್ತೆ ನಿರ್ಮಾಣಕ್ಕಾಗಿ ಮಾತ್ರ ಬಳಸಲು ಮೂಲ ಒಪ್ಪಂದದಲ್ಲಿ ಅವಕಾಶವಿದೆ. ಆದರೆ, ನೈಸ್ ಕಂಪೆನಿ ಇದೇ ಜಮೀನುಗಳನ್ನು ಪ್ರತಿ ಎಕರೆಗೆ ₨ ೬ ಕೋಟಿಯಿಂದ ₨ ೧೦ ಕೋಟಿ ದರದಲ್ಲಿ ಖಾಸಗಿ ಡೆವಲಪರ್ಸ್‌ಗಳಿಗೆ ಮಾರಾಟ ಮಾಡುತ್ತಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾ­ಭಿವೃದ್ಧಿ ಮಂಡಳಿ (ಕೆಐಎಡಿಬಿ), ಲೋಕೋಪ­ಯೋಗಿ ಇಲಾಖೆ ಅಧಿಕಾರಿಗಳು ನೈಸ್ ಕಂಪೆನಿ ಜೊತೆ ಶಾಮೀಲಾಗಿದ್ದಾರೆ ಎಂದರು.

ಮೂಲ ಒಪ್ಪಂದದ ಪ್ರಕಾರ ನೈಸ್ ಕಂಪೆನಿ ನಾಲ್ಕು ಪಥದ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕಿತ್ತು. ಆದರೆ, ಎರಡು ಪಥದ ಡಾಂಬರು ರಸ್ತೆ ನಿರ್ಮಿಸಿದ ಕಂಪೆನಿ ಅಲ್ಲಿಯೇ ಶುಲ್ಕ ವಸೂಲಿ ಆರಂಭಿಸಿತ್ತು. ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಬಳಿಕ ೮ ಕಿ.ಮೀ. ಮಾತ್ರ ಕಾಂಕ್ರೀಟ್ ರಸ್ತೆ ನಿರ್ಮಿಸಿದೆ. ಮಾರ್ಗದುದ್ದಕ್ಕೂ ೮೧ ಕೆಳ ಮತ್ತು ಮೇಲು ಸೇತುವೆ ನಿರ್ಮಿಸಬೇಕಿತ್ತು. ಆದರೆ, ಕೇವಲ ೧೫ ಕೆಳ ಮತ್ತು ಮೇಲು ಸೇತುವೆಗಳನ್ನು ನಿರ್ಮಿಸಲಾಗಿದೆ ಎಂದು ದೂರಿದರು.

೨೦೧೦ರ ಬಳಿಕ ಸರ್ಕಾರದ ಅನುಮತಿ ಇಲ್ಲದೇ ಟೋಲ್ ದರ ಹೆಚ್ಚಿಸಲಾಗಿದೆ. ಶೇಕಡ ೩೦೦ರಿಂದ ಶೇ ೪೦೦ರವರೆಗೂ ಏಕಾಏಕಿ ಹೆಚ್ಚಳ ಮಾಡ­ಲಾಗಿದೆ. ಹೆಚ್ಚುವರಿ ಜಮೀನನ್ನು ರೈತರಿಗೆ ತಕ್ಷಣ ಮರಳಿಸಲು ಕ್ರಮ ಕೈಗೊಳ್ಳಬೇಕು. ತಕ್ಷಣದಿಂದಲೇ ನೈಸ್ ರಸ್ತೆಗಳಲ್ಲಿ ಟೋಲ್ ವಸೂಲಿ ಸ್ಥಗಿತಗೊಳಿಸಬೇಕು. ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಸಮಗ್ರವಾಗಿ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

೧೯೯೫ರಿಂದ ಈವರೆಗೆ ಎಲ್ಲ ಸರ್ಕಾರಗಳೂ ನೈಸ್ ಕಂಪೆನಿಯ ಪರವಾಗಿ ಕೆಲಸ ಮಾಡಿವೆ. ಈ ಕಾರಣದಿಂದಾಗಿಯೇ ಕಂಪೆನಿ ಅಕ್ರಮ ಚಟುವಟಿಕೆ­ಗಳನ್ನು ನಿರಾಯಾಸವಾಗಿ ಮುಂದುವರಿಸಿಕೊಂಡು ಬಂದಿದೆ. ಈಗ ಸರ್ಕಾರ ಕಂಪೆನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಯಾವುದೇ ಒತ್ತಡಕ್ಕೂ ಮಣಿಯಬಾರದು ಎಂದು ಒತ್ತಾಯಿಸಿದರು.

‘ಒಂದು ಸಂಸ್ಥೆ ಸರ್ಕಾರವನ್ನು ಹೇಗೆ ತನ್ನ ಹಿತಾಸಕ್ತಿಗೆ ತಕ್ಕಂತೆ ಕುಣಿಸಬಹುದು ಎಂಬುದಕ್ಕೆ ನೈಸ್ ಕಂಪೆನಿ ಪ್ರಕರಣ ಒಂದು ಉತ್ತಮ ಉದಾಹರಣೆ. ಬಿಎಂಐಸಿ ರಸ್ತೆ ಹಾದುಹೋಗುವ ಮಾರ್ಗದುದ್ದಕ್ಕೂ ಯೋಜನೆಗೆ ಸ್ವಾಧೀನಪಡಿಸಿ­ಕೊಳ್ಳದ ಜಮೀನುಗಳನ್ನೂ ವಶಕ್ಕೆ ಪಡೆಯಲು ನೈಸ್ ಕಂಪೆನಿ ಯತ್ನಿಸುತ್ತಿದೆ. ಮೈಸೂರು ರಸ್ತೆಯಲ್ಲಿ ಪ್ರಮೋದ್ ಬಡಾವಣೆಯನ್ನು ಇದೇ ರೀತಿ ಕಬಳಿಸಲು ಕಂಪೆನಿ ಹವಣಿಸುತ್ತಿದೆ’ ಎಂದು ಬಿಜೆಪಿಯ ಎಸ್.ಸುರೇಶ್‌ಕುಮಾರ್ ವಾಗ್ದಾಳಿ ನಡೆಸಿದರು.

‘ಇದು ಕೇವಲ ₨ ೨೦೦೦ ಕೋಟಿ ವೆಚ್ಚದ ಯೋಜನೆ: ಅದಕ್ಕಾಗಿ ಸರ್ಕಾರ  ₨ ೧೪,೦೦೦ ಕೋಟಿ ಮೌಲ್ಯದ ಜಮೀನನ್ನು ನೈಸ್ ಕಂಪೆನಿಗೆ ನೀಡುತ್ತಿದೆ. ಈ ಕಂಪೆನಿಯ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದ ಅಮೆರಿಕ ಮೂಲದ ವಿಎಚ್‌ಪಿ ಎಂಬ ಕಂಪೆನಿ ಯೋಜನೆಯಿಂದ ಹೊರಹೋಗಿದೆ. ನೈಸ್ ಕಂಪೆನಿ ನಡೆಸುತ್ತಿರುವ ಅವ್ಯವಹಾರಗಳನ್ನು ತಿಳಿದ ಬಳಿಕವೇ ವಿಎಚ್‌ಪಿ ಹೊರಹೋಗಿದೆ’ ಎಂದು ಜೆಡಿಎಸ್‌ನ ಮಂಜುನಾಥ್ ಹೇಳಿದರು.

ಬಿಜೆಪಿಯ ಸತೀಶ್ ರೆಡ್ಡಿ ಮಾತನಾಡಿ, ಉತ್ತರ ಪ್ರದೇಶದಲ್ಲಿ ೧೬೫ ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣಕ್ಕೆ ೬,೫೦೦ ಎಕರೆ ಜಮೀನು        ನೀಡಲಾ­ಗಿದೆ. ಇಲ್ಲಿ ೧೧೧ ಕಿ.ಮೀ. ಉದ್ದದ ರಸ್ತೆ ನಿರ್ಮಾ­ಣಕ್ಕೆ ೨೦,೦೦೦ ಎಕರೆ ಜಮೀನು ನೀಡಲಾಗಿದೆ. ಇದು ವಂಚನೆ ಅಲ್ಲವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನ ಎಸ್.ಟಿ.ಸೋಮಶೇಖರ್, ಜೆಡಿ­ಎಸ್‌ನ ಎನ್.ಚೆಲುವರಾಯಸ್ವಾಮಿ ಸೇರಿದಂತೆ ಹಲವರು ಬಿಎಂಐಸಿ ಯೋಜನೆ ಕುರಿತು ತನಿಖೆಗೆ ಆದೇಶಿಸಬೇಕೆಂಬ ಆಗ್ರಹವನ್ನು ಬೆಂಬಲಿಸಿದರು. ಮಧ್ಯಪ್ರವೇಶ ಮಾಡಿದ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು, ‘ಮೊದಲು ಸದನ ಸಮಿತಿಯ ಮೂಲಕ ತನಿಖೆ ನಡೆಸಿ. ಆ ಬಳಿಕ ಮುಂದಿನ ತನಿಖೆ ಬಗ್ಗೆ ನಿರ್ಧರಿಸಿ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.