ADVERTISEMENT

ನೈಸ್‌ ವಿರುದ್ಧ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2015, 20:01 IST
Last Updated 28 ಜನವರಿ 2015, 20:01 IST

ಬೆಂಗಳೂರು: ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ರಸ್ತೆಯಲ್ಲಿ ತಕ್ಷಣ ಟೋಲ್‌ ಸಂಗ್ರಹ ಸ್ಥಗಿತಗೊಳಿಸಬೇಕು ಮತ್ತು ರಸ್ತೆ ಮಾರ್ಗದಲ್ಲಿ ಜಮೀನು ಮಾರಾಟಕ್ಕೆ ನಿರ್ಬಂಧ ವಿಧಿಸಬೇಕು ಎಂದು ಬಿಎಂಐಸಿ ಅಕ್ರಮ ಕುರಿತು ತನಿಖೆ ನಡೆಸುತ್ತಿರುವ ಸದನ ಸಮಿತಿಯ ಸದಸ್ಯರಾಗಿರುವ ಬಿಜೆಪಿ, ಜೆಡಿಎಸ್‌ ಶಾಸಕರು ಪಟ್ಟು ಹಿಡಿದಿದ್ದಾರೆ.

ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಒಡೆತನದ ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ (ನೈಸ್‌) ಕಂಪೆನಿ ನಿರ್ಮಿಸುತ್ತಿರುವ ಬಿಎಂಐಸಿ ರಸ್ತೆಗೆ ಸಂಬಂಧಿಸಿದಂತೆ ನಡೆದಿರುವ ಅಕ್ರಮಗಳ ಕುರಿತು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅಧ್ಯಕ್ಷತೆಯ ಸದನ ಸಮಿತಿ ತನಿಖೆ ನಡೆಸುತ್ತಿದೆ. ವಿಧಾನಸೌಧದಲ್ಲಿ ಬುಧವಾರ ನಡೆದ ಸಭೆಯಲ್ಲೇ ಬಿಜೆಪಿಯ ಎಂ.ಸತೀಶ್ ರೆಡ್ಡಿ, ಎಸ್‌.ಆರ್‌. ವಿಶ್ವನಾಥ್‌, ಜೆಡಿಎಸ್‌ ಕೆ.ಎಂ. ಶಿವಲಿಂಗೇಗೌಡ ಮತ್ತು ಪಿ.ಸುಧಾಕರ ಲಾಲ್‌ ನೈಸ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮೂಲ ಒಪ್ಪಂದದ ಪ್ರಕಾರ ನೈಸ್‌ ಕಂಪೆನಿ 2012ರೊಳಗೆ ಕಾಂಕ್ರೀಟ್‌ ರಸ್ತೆ ನಿರ್ಮಿಸಬೇಕಿತ್ತು. ಆದರೆ, ಈವರೆಗೂ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಿಲ್ಲ. ಆದರೂ ಒಪ್ಪಂದಕ್ಕೆ ವಿರುದ್ಧವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ. ತಕ್ಷಣವೇ ಟೋಲ್‌ ಸಂಗ್ರಹ ಸ್ಥಗಿತಗೊಳಿಸಬೇಕು. ರಸ್ತೆಯುದ್ದಕ್ಕೂ ಉಪ ನಗರಗಳ ನಿರ್ಮಾಣಕ್ಕೆ ನೀಡಿರುವ ಜಮೀನುಗಳನ್ನು ನೈಸ್ ಕಂಪೆನಿ ಮಾರಾಟ ಮಾಡುತ್ತಿದೆ. ಇದಕ್ಕೂ ನಿರ್ಬಂಧ ಹೇರಬೇಕು ಎಂದು ಈ ಶಾಸಕರು ಬುಧವಾರದ ಸಭೆಯಲ್ಲಿ ಒತ್ತಾಯಿಸಿದ್ದಾರೆ.

ಸಭೆ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಸತೀಶ್‌ ರೆಡ್ಡಿ, ‘ನೈಸ್‌ ಕಂಪೆನಿ ಅಕ್ರಮವಾಗಿ ಟೋಲ್‌ ಸಂಗ್ರಹಿಸುತ್ತಿದೆ. ರಸ್ತೆ ಮತ್ತು ಉಪ ನಗರಗಳ ನಿರ್ಮಾಣ­ಕ್ಕಾಗಿ ನೀಡಿರುವ ಜಮೀನುಗಳನ್ನು ಒಪ್ಪಂದಕ್ಕೆ ವಿರುದ್ಧವಾಗಿ ಪರಭಾರೆ ಮಾಡುತ್ತಿದೆ. ಮುಂದಿನ ಸಭೆಯೊಳಗೆ ಎರಡಕ್ಕೂ ಕಡಿವಾಣ ಹಾಕಲೇಬೇಕು’ ಎಂದು ಆಗ್ರಹಿಸಿದರು.

ಅಧಿಕಾರಿಗಳು ತನಿಖೆಗೆ ಸಹಕರಿಸುತ್ತಿಲ್ಲ. ಕೆಲವು ಕಡತಗಳನ್ನು ಈವರೆಗೂ ಸದನ ಸಮಿತಿಯ ಮುಂದೆ ಹಾಜರುಪಡಿಸುತ್ತಿಲ್ಲ. ಈ ವಿಷಯದಲ್ಲೂ ಬಿಗಿ ಕ್ರಮ ಅನುಸರಿಸಬೇಕು ಎಂದರು.

ನಾಲ್ಕು ತಿಂಗಳಲ್ಲಿ ವರದಿ: ಸದನ ಸಮಿತಿಯು ನಾಲ್ಕು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ, ವರದಿ ಸಲ್ಲಿಸಲಿದೆ ಎಂದು  ಟಿ.ಬಿ. ಜಯಚಂದ್ರ ಹೇಳಿದರು.
ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತ­ನಾಡಿದ ಅವರು, ‘ನಾವು ಇದುವರೆಗೆ ಏಳು ಸಭೆ ನಡೆಸಿ­ದ್ದೇವೆ. ದಸರಾ ರಜೆ, ಬೆಳಗಾವಿ ಅಧಿವೇಶನದ ಕಾರಣಕ್ಕೆ ಸಭೆ ಸೇರಲು ಸಾಧ್ಯವಾಗಿಲ್ಲ. ತನಿಖೆಯನ್ನು ಬೇಗ ಮುಗಿ­ಸಬೇಕು ಎಂದು ಸಮಿತಿ ಸದಸ್ಯರು ಒತ್ತಡ ಹಾಕುತ್ತಿದ್ದಾರೆ. ಮೂರು ಅಥವಾ ನಾಲ್ಕು ತಿಂಗಳಲ್ಲಿ ವರದಿ ಸಲ್ಲಿಸಲಾಗುವುದು’ ಎಂದರು.

‘ಯೋಜನೆಗೆ ಸಂಬಂಧಿಸಿದ ದಾಖಲೆ­ಗಳನ್ನು ಅಧಿಕಾರಿ­ಗಳು ಸುಟ್ಟು ಹಾಕಿರುವ ಆರೋಪಕ್ಕೆ ಸಂಬಂಧಿ­ಸಿದಂತೆ ಇಲಾಖಾ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಬುಧವಾರ ನಡೆದ ಸಭೆಯಲ್ಲಿ ಕೆಲವು ಶಾಸಕರಿಂದ ಆಕ್ಷೇಪ ವ್ಯಕ್ತವಾದ ಬಗ್ಗೆ ಕೇಳಿದ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರ ನೀಡದ ಅವರು, ‘ಸಭೆಯ ನಡಾವಳಿಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.