ADVERTISEMENT

ನೌಕರಿ ಕೊಡಿಸುವುದಾಗಿ ₹29.20 ಲಕ್ಷ ವಂಚನೆ

ವಿವಿಧ ಇಲಾಖೆಗಳಲ್ಲಿ ಕೆಲಸದ ಆಮಿಷ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 19:22 IST
Last Updated 23 ಏಪ್ರಿಲ್ 2018, 19:22 IST

ಬೆಂಗಳೂರು: ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ₹29.20 ಲಕ್ಷ ಪಡೆದುಕೊಂಡು ವಂಚಿಸಿದ್ದ ಆರೋಪದಡಿ ವಿಜಯನಗರದ ನಿವಾಸಿ ಎನ್‌.ಆರ್‌. ಶ್ರೀನಿವಾಸ್‌ ಗೌಡ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಆರೋಪಿಯಿಂದ ವಂಚನೆಗೀಡಾದ ಕನಕಪುರ ತಾಲ್ಲೂಕಿನ ನಿಡಗಲ್ಲು ಗ್ರಾಮದ ಕೃಷ್ಣೇ ಅರಸು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

‘ಸ್ನೇಹಿತ ಪ್ರಕಾಶ್‌ ಮೂಲಕ ಕೃಷ್ಣೆ ಅರಸು ಅವರಿಗೆ ಎರಡು ವರ್ಷಗಳ ಹಿಂದೆ ಶ್ರೀನಿವಾಸ್‌ ಗೌಡ ಪರಿಚಯವಾಗಿತ್ತು. ಅದೇ ವೇಳೆ ಆರೋಪಿ, ಸರ್ಕಾರಿ ಕೆಲಸ ಕೊಡಿಸುವ ಭರವಸೆ ನೀಡಿದ್ದರು. ಸುಮಾರು ದಿನಗಳ ನಂತರ ಕೃಷ್ಣೇ ಅರಸುಗೆ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಮಕ್ಕಳಿಗೆ ಹಾಗೂ ಪರಿಚಯಸ್ಥರ ಮಕ್ಕಳಿಗೆ ಕೆಪಿಎಸ್‌ಸಿ, ಅಬಕಾರಿ ಇಲಾಖೆ ಹಾಗೂ ಇತರೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ. ಅದಕ್ಕೆ ಬೇಕಾದ ಹಣ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಬನ್ನಿ’ ಎಂದಿದ್ದರು.

ADVERTISEMENT

ಅದನ್ನು ನಂಬಿದ್ದ ಕೃಷ್ಣೇ ಅರಸು ಹಾಗೂ ಅವರ ಸ್ನೇಹಿತ ಕೆ.ರಾಮಕೃಷ್ಣ, ತಮ್ಮ ಮಕ್ಕಳ ವಿದ್ಯಾರ್ಹತೆಯ ದಾಖಲೆಗಳನ್ನು ತೆಗೆದುಕೊಂಡು 2017ರ ಮೇನಲ್ಲಿ ಬೆಂಗಳೂರಿನ ಎಸ್‌.ಸಿ.ರಸ್ತೆಗೆ ಬಂದಿದ್ದರು. ಅಲ್ಲಿ ಭೇಟಿಯಾಗಿದ್ದ ಆರೋಪಿ, ಅವರಿಬ್ಬರನ್ನೂ ಕರೆದುಕೊಂಡು ಜನತಾ ಹೋಟೆಲ್‌ಗೆ ಹೋಗಿದ್ದರು.  ಕೃಷ್ಣೇ ಅರಸು ಅವರ ಇಬ್ಬರು ಮಕ್ಕಳಿಗೆ
ಕೆಪಿಎಸ್‌ಸಿಯಲ್ಲಿ ಕೆಲಸ ಕೊಡಿಸುವುದಾಗಿ ₹12 ಲಕ್ಷ ಪಡೆದುಕೊಂಡಿದ್ರು. ರಾಮಕೃಷ್ಣ ಅವರ ಮಗನಿಗೆ ಅಬಕಾರಿ ನಿರೀಕ್ಷಕ ಹುದ್ದೆ ಕೊಡಿಸುವುದಾಗಿ ₹17.20 ಲಕ್ಷ ಪಡೆದಿದ್ದರು ಎಂದು ಪೊಲೀಸರು ಹೇಳಿದರು.

ಹಣ ಪಡೆದ ಬಳಿಕ ಆರೋಪಿ, ‘ಕೆಲ ದಿನ ಬಿಟ್ಟು ನೇಮಕಾತಿ ಆದೇಶ ಕೊಡಿಸುತ್ತೇನೆ’ ಎಂದಿದ್ದರು. ವಾಪಸ್‌ ಊರಿಗೆ ಹೋಗಿದ್ದ ದೂರುದಾರರು, ನಿಗದಿತ
ದಿನದಂದು ಆರೋಪಿಗೆ ಕರೆ ಮಾಡಿದ್ದರು. ಆದರೆ, ಅವರ ಮೊಬೈಲ್ ಸ್ವಿಚ್ಡ್‌ ಆಫ್‌ ಆಗಿತ್ತು. ದೂರುದಾರರಿಗೆ ವಂಚನೆಗೀಡಾಗಿದ್ದು ಆಗ ಗೊತ್ತಾಗಿದೆ ಎಂದರು.

ಹಲವರಿಗೆ ವಂಚನೆ ಶಂಕೆ: ‘ವಿಜಯನಗರದಲ್ಲಿ ವಾಸವಿರುವುದಾಗಿ ದೂರುದಾರರ ಬಳಿ ಆರೋಪಿ ಹೇಳಿಕೊಂಡಿದ್ದರು. ಅವರ ಮನೆ ಎಲ್ಲಿದೆ ಎಂಬುದನ್ನು ಹುಡುಕುತ್ತಿದ್ದೇವೆ. ಅವರು ಇನ್ನೂ ಹಲವರಿಗೆ ವಂಚಿಸಿರುವ ಮಾಹಿತಿ ಇದ್ದು, ಅದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.