ADVERTISEMENT

ಪತ್ನಿಗೆ ಎರಚಲೆಂದೇ ಆ್ಯಸಿಡ್‌ ಕಾದಿಟ್ಟಿದ್ದ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:49 IST
Last Updated 20 ಜುಲೈ 2017, 19:49 IST

ಬೆಂಗಳೂರು: ಕೆ.ಜಿ.ನಗರ ಬಳಿಯ ಸನ್ಯಾಸಿ ಪಾಳ್ಯದಲ್ಲಿ ಮಂಜುಳಾ (38) ಎಂಬುವರ ಮೇಲೆ ಆ್ಯಸಿಡ್‌ ಎರಚಿದ್ದ ಪತಿ ಚನ್ನೇಗೌಡ (45), ಗುರುವಾರ ಪೊಲೀಸರಿಗೆ ಸೆರೆಸಿಕ್ಕಿದ್ದಾನೆ.

‘ಕೃತ್ಯವೆಸಗಿದ್ದ ಬಳಿಕ ತಲೆಮರೆಸಿಕೊಂಡಿದ್ದ ಆತ, ಶ್ರೀನಗರದ ಸಂಬಂಧಿಕರ ಮನೆಗೆ ಬಂದಿದ್ದ.  ಸಂಬಂಧಿಕರು ಆತನನ್ನು ಬೈಯ್ದು ಕಳುಹಿಸಿದ್ದರು. ಬಳಿಕ ಬಸ್‌ ನಿಲ್ದಾಣದ ಬಳಿ ನಿಂತಿದ್ದ ಆತನನ್ನು ಬಂಧಿಸಿದೆವು’ ಎಂದು ಕೆ.ಜಿ.ನಗರ ಪೊಲೀಸರು ತಿಳಿಸಿದರು.

‘ಆಟೊ ಚಾಲಕನಾದ ಚನ್ನೇಗೌಡ, ಮಂಜುಳಾ ಅವರನ್ನು 17 ವರ್ಷಗಳ ಹಿಂದೆ ಮದುವೆಯಾಗಿದ್ದ. ಅವರಿಗೆ ಇಬ್ಬರು ಮಕ್ಕಳು ಇದ್ದಾರೆ.’

ADVERTISEMENT

‘ಜುಲೈ 14ರಂದು ಬೆಳಿಗ್ಗೆ ಮಕ್ಕಳು ಶಾಲೆಗೆ ಹೋಗಿದ್ದರು. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ಆರೋಪಿಯು  ಪತ್ನಿಯೊಂದಿಗೆ ಜಗಳ ತೆಗೆದು ಆ್ಯಸಿಡ್‌ ಎರಚಿ ಪರಾರಿಯಾಗಿದ್ದ’ ಎಂದು ವಿವರಿಸಿದರು.

ಸುಳ್ಳು ಹೇಳಿ ಆ್ಯಸಿಡ್‌ ಪಡೆದಿದ್ದ: ‘ಎರಡು ವರ್ಷಗಳಿಂದ ದಂಪತಿ  ಜಗಳವಾಡುತ್ತಿದ್ದರು. ಆರೋಪಿಯು ಹಲವು ಬಾರಿ ಪತ್ನಿಯ ಮೇಲೆ ಹಲ್ಲೆಯನ್ನೂ ಮಾಡಿದ್ದ’ ಎಂದು ತನಿಖಾಧಿಕಾರಿ ತಿಳಿಸಿದರು.

‘ಮನೆಯ ಮುಂದೆ ಮರಗಳು ಬೆಳೆಯುತ್ತಿದ್ದು, ಅವುಗಳಿಂದ ಓಡಾಟಕ್ಕೆ ತೊಂದರೆ ಉಂಟಾಗಿದೆ. ಬೇರು ನಾಶ ಮಾಡಲು ಆ್ಯಸಿಡ್‌ ಬೇಕಿರುವುದಾಗಿ ಹೇಳಿ ಸ್ನೇಹಿತನ ಬಳಿ ಎರಡು ತಿಂಗಳ ಹಿಂದೆ ಆರೋಪಿಯು ಆ್ಯಸಿಡ್‌ ಪಡೆದಿದ್ದ. ಅದನ್ನೇ ಕಾದಿಟ್ಟು ಪತ್ನಿ ಮೇಲೆ ಎರಚಿದ್ದ’ ಎಂದು ವಿವರಿಸಿದರು.

ಕೈವಾರದಲ್ಲಿ ಉಳಿದುಕೊಂಡಿದ್ದ: ‘ಕೃತ್ಯದ ವೇಳೆ ಆರೋಪಿಯ ಕಣ್ಣಿಗೂ ಆ್ಯಸಿಡ್‌ ಬಿದ್ದು, ಗಾಯವಾಗಿತ್ತು. ಅದೇ ಸ್ಥಿತಿಯಲ್ಲಿ ಸಂಬಂಧಿಕರ ಮನೆಗೆ ಹೋಗಿದ್ದ ಆತ, ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದ’ ‘ಸಂಬಂಧಿಕರು ಸಹ ಆತನನ್ನು ಮರುದಿನವೇ ಮನೆಯಿಂದ ಹೊರಗೆ ಹಾಕಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರಕ್ಕೆ ಹೋಗಿದ್ದ ಆರೋಪಿಯು ಅಲ್ಲಿಯೇ ಕೆಲ ದಿನ ಉಳಿದಿದ್ದ’ ಎಂದು ಪೊಲೀಸರು ತಿಳಿಸಿದರು.

ಆರೋಗ್ಯದಲ್ಲಿ ಚೇತರಿಕೆ: ಆ್ಯಸಿಡ್‌ ಎರಚಿದ್ದರಿಂದ ಗಾಯಗೊಂಡಿರುವ ಮಂಜುಳಾ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.