ADVERTISEMENT

ಪರಸ್ಪರರ ಪತಿಗೆ ಕಿಡ್ನಿದಾನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2015, 19:30 IST
Last Updated 3 ಜುಲೈ 2015, 19:30 IST

ಬೆಂಗಳೂರು: ಇಬ್ಬರು ಮಹಿಳೆಯರು ಪರಸ್ಪರರ ಪತಿಗೆ ಮೂತ್ರಪಿಂಡ ದಾನ ಮಾಡುವ ಮೂಲಕ ಹೊಸ ಬದುಕು ನೀಡಿದ ಅಪರೂಪದ ಘಟನೆ ಇದು.

ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಕಲಬುರ್ಗಿಯ ಭೀಮಸೇನ್‌ ಜೋಶಿ ಹಾಗೂ ಬೆಂಗಳೂರಿನ ವೇಣು ಗೋಪಾಲ್‌ ಅವರು ಪರಸ್ಪರರ ಪತ್ನಿ ಯಿಂದ ಮೂತ್ರಪಿಂಡ ದಾನ ಪಡೆದು ಹೊಸ ಬದುಕು ಕಂಡುಕೊಂಡವರು. ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದರು.

ಭೀಮಸೇನ್ ಅವರು 2 ವರ್ಷದಿಂದ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು. ಅವರ ಪತ್ನಿ ಮೂತ್ರಪಿಂಡ ದಾನ ಮಾಡಲು ನಿರ್ಧರಿಸಿದ್ದರೂ ರಕ್ತದ ಗುಂಪು ಹೊಂದಿಕೆಯಾಗದ ಕಾರಣ ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಅವರು ಡಯಾಲಿಸಿಸ್‌ಗೆ ಒಳಗಾಗಲು ಆಸ್ಪತ್ರೆಗೆ ಬಂದಾಗ ಇಂತ ಹದ್ದೇ ಸಮಸ್ಯೆಯಿಂದ ಬಳಲುತ್ತಿದ್ದ ವೇಣುಗೋಪಾಲ್ ಪರಿಚಿತರಾದರು.

ವೇಣುಗೋಪಾಲ್‌ ಅವರ ಪತ್ನಿಯ ರಕ್ತದ ಗುಂಪು ಹೊಂದದ ಕಾರಣ ಅವರಿಗೂ ಮೂತ್ರಪಿಂಡ ದಾನ ಪಡೆಯಲು ಆಗಿರಲಿಲ್ಲ.

ಪರಸ್ಪರರ ಪತ್ನಿಯಿಂದ ಮೂತ್ರ ಪಿಂಡ ದಾನ ಪಡೆಯಬಹುದು ಎಂದು ವೈದ್ಯರು ಸಲಹೆ ಕೊಟ್ಟರು. ಭೀಮಸೇನ್‌ ಅವರು ವೇಣುಗೋಪಾಲ್‌ ಅವರ ಪತ್ನಿಯಿಂದ ಮತ್ತು ವೇಣುಗೋಪಾಲ್‌ ಅವರು ಭೀಮಸೇನ್‌ ಅವರ ಪತ್ನಿಯಿಂದ ಮೂತ್ರಪಿಂಡ ದಾನ ಪಡೆದರು. ಈ ದಂಪತಿಗಳ ಜೋಡಿ ಜೂನ್‌ 24ರಂದು ಏಕಕಾಲಕ್ಕೆ ಶಸ್ತ್ರ ಚಿಕಿತ್ಸೆಗೆ ಒಳಗಾದರು. ಪರಸ್ಪರರ ಮೂತ್ರಪಿಂಡ ದಾನ ಮತ್ತು ಕಸಿ ಪ್ರಕ್ರಿಯೆ ಸುಮಾರು ನಾಲ್ಕೂವರೆ ಗಂಟೆ ನಡೆಯಿತು.

‘ಭೀಮಸೇನ್ ಮತ್ತು ಅವರ ಪತ್ನಿ ಯನ್ನು ಭೇಟಿ ಮಾಡಿದ್ದು ನನಗೆ ವರವಾಗಿ ಪರಿಣಮಿಸಿತು. ನಾಲ್ಕು ವರ್ಷದಿಂದ ನಾನು ಸೂಕ್ತ ದಾನಿಗಾಗಿ ಅರಸುತ್ತಿದ್ದೆ. ಪರಸ್ಪರ ಮೂತ್ರಪಿಂಡ ದಾನ ಹೊಸ ಬದುಕು ನೀಡಿದ್ದಷ್ಟೇ ಅಲ್ಲ, ಹೊಸ ಗೆಳೆಯನನ್ನೂ ತಂದುಕೊಟ್ಟಿತು’ ಎಂದು ವೇಣುಗೋಪಾಲ್ ಅವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂತಸ ಹಂಚಿಕೊಂಡರು.

‘ಅದೃಷ್ಟವಶಾತ್ ಪರಸ್ಪರರ ರಕ್ತದ ಗುಂಪು ಪರಸ್ಪರರ ಪತ್ನಿಯ ರಕ್ತದ ಗುಂಪಿನ ಜೊತೆಗೆ ಹೊಂದಿಕೆ ಆಯಿತು. ವೇಣುಗೋಪಾಲ್‌ ಅವರ ಪತ್ನಿ ನನಗೆ ಮತ್ತು ನನ್ನ ಪತ್ನಿ ವೇಣುಗೋಪಾಲ್‌ ಅವರಿಗೆ ಮೂತ್ರಪಿಂಡ ದಾನ ಮಾಡಲು ಸಮ್ಮತಿಸಿದರು. ಇದರಿಂದ ನಾವು ಅನುಭವಿಸುತ್ತಿದ್ದ ನೋವಿನಿಂದ ಮುಕ್ತಿ ಪಡೆಯಲು ಸಾಧ್ಯವಾಯಿತು’ ಎಂದು ಭೀಮಸೇನ್‌ ತಿಳಿಸಿದರು.

‘ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸುವಾಗ, ಇಬ್ಬರೂ ರೋಗಿಗಳ ಪ್ರಕ್ರಿಯೆಯನ್ನು ಏಕಕಾಲಕ್ಕೆ ನಡೆಸಬೇಕಿತ್ತು. ಏಕೆಂದರೆ ಮೊದಲ ಶಸ್ತ್ರಚಿಕಿತ್ಸೆ ನೆರವೇರಿದ ಬಳಿಕ ಇನ್ನೊಬ್ಬರು ಹಿಂದೆ ಸರಿಯುವ ಅಪಾಯ ಇತ್ತು. ಹೀಗಾಗಿ ನಾಲ್ಕು ಶಸ್ತ್ರಚಿಕಿತ್ಸೆ ಕೊಠಡಿಗಳ ವ್ಯವಸ್ಥೆ ಮಾಡಿಕೊಂಡು ಪ್ರಕ್ರಿಯೆ ಶುರು ಮಾಡಿದೆವು’ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಮುಖ್ಯ ಕಸಿ ಶಸ್ತ್ರ ಚಿಕಿತ್ಸಕ ಡಾ.ಅಜಿತ್ ಹುಯಿಲಗೋಳ ಹೇಳಿದರು.

‘ನಾವು ಅರಿವಳಿಕೆ ಚಿಕಿತ್ಸೆ ಸೇರಿ ಎಲ್ಲ ಕೆಲಸವನ್ನು ಒಟ್ಟಿಗೆ ಆರಂಭಿಸಬೇಕಿತ್ತು. ಇದನ್ನು ಬೆಳಿಗ್ಗೆ 5.30ಕ್ಕೆ ಆರಂಭಿಸಿದೆವು. ಅರಿವಳಿಕೆ ತಜ್ಞರು ಮತ್ತು ಶಸ್ತ್ರಚಿಕಿತ್ಸಕರ 2 ತಂಡ ರಚಿಸಿದ್ದೆವು’ ಎಂದು ಅವರು ವಿವರಿಸಿದರು. ‘ರೋಗಿಗಳು ಭಿನ್ನ ಜಾತಿ,  ಧರ್ಮದಿಂದ ಬರುವ ಕಾರಣ ಅವರಿಗೆ ಮನವರಿಕೆ ಮಾಡುವುದು ಕಷ್ಟ’ ಎಂದು ಮೂತ್ರರೋಗ ವಿಭಾಗದ ಮುಖ್ಯಸ್ಥ ಡಾ.ಸಂಕರನ್ ಸುಂದರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.