ADVERTISEMENT

ಪರ್ಯಾಯ ರಸ್ತೆ ನಿರ್ಮಾಣ ಮತ್ತೆ ಆರಂಭ

ವಿಮಾನ ನಿಲ್ದಾಣ ಸಂಪರ್ಕ: ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದ್ದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 20:26 IST
Last Updated 27 ಜುಲೈ 2017, 20:26 IST
ಪರ್ಯಾಯ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ
ಪರ್ಯಾಯ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ   

ಬೆಂಗಳೂರು: ಕಳೆದ ತಿಂಗಳು ಸ್ಥಗಿತಗೊಂಡಿದ್ದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪರ್ಯಾಯ ರಸ್ತೆಯ ನಿರ್ಮಾಣ ಕಾಮಗಾರಿ ಈಗ ಪುನಃ ಆರಂಭವಾಗಿದೆ.

ರಾಷ್ಟ್ರೀಯ ಹೆದ್ದಾರಿ–7ಕ್ಕೆ (ಬಳ್ಳಾರಿ ರಸ್ತೆ)  ಪರ್ಯಾಯವಾಗಿ ಈ ರಸ್ತೆಯನ್ನು ನಿರ್ಮಿಸಲಾಗುತ್ತಿದ್ದು, ಕೆಲ ತಾಂತ್ರಿಕ ಕಾರಣಗಳಿಂದ ಕೆಲಸ ನಿಂತಿತ್ತು. ಈಗ ರಸ್ತೆಯ ಅಡಿಯ ಕೇಬಲ್‌ ಸ್ಥಳಾಂತರ ಹಾಗೂ ಜೋಡಣೆ ಕೆಲಸ ಶುರುವಾಗಿದೆ.  ಅರ್ಧಕ್ಕೆ ನಿಂತಿದ್ದ ರಸ್ತೆಯ ನಿರ್ಮಾಣ ಕೆಲಸಕ್ಕೂ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಫೆಬ್ರುವರಿಯಲ್ಲಿ ನಡೆದಿದ್ದ ಏರ್‌ಶೋ ವೇಳೆ ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಅದು ಮುಗಿದ ಬಳಿಕವೂ ರಸ್ತೆ ನಿರ್ಮಾಣ ಕೆಲಸ ಬಾಕಿ ಇದೆ ಎಂದು ನೆಪ ಹೇಳಿ ಮುಚ್ಚಲಾಗಿತ್ತು.

‘ರಸ್ತೆ ನಿರ್ಮಾಣಕ್ಕೆ ಜಮೀನು ಸ್ವಾಧೀನ ಹಾಗೂ ವಿಮಾನ ನಿಲ್ದಾಣ ಅಧಿಕಾರಿಗಳು ಹೇಳಿದಂತೆ ಕೆಲಸ ಮಾಡಲು ಸಮಯ ಬೇಕಾಗಿದೆ. ರಸ್ತೆ ನಿರ್ಮಾಣದಲ್ಲಿ ಕೆಲವು ಮಾರ್ಪಾಡು ಮಾಡಿದ್ದರಿಂದ ಕಾಮಗಾರಿ ಸ್ಥಗಿತ ಮಾಡಿದ್ದೆವು. ಈಗ ಎಲ್ಲವೂ ಸರಿಯಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಈ ಹಿಂದಿನ ರಸ್ತೆಯು ಜಮೀನಾಗಿತ್ತು. ಅದನ್ನು ಕಚ್ಚಾ ರಸ್ತೆಯನ್ನಾಗಿ ಮಾರ್ಪಾಡು ಮಾಡಿದ್ದೇವೆ. ಅದನ್ನೇ ಸುಸಜ್ಜಿತ ರಸ್ತೆಯನ್ನಾಗಿ ಮಾಡಬೇಕಿದ್ದು,  ಕಾಮಗಾರಿ ಮುಗಿಯಲು ಎರಡು ತಿಂಗಳು ಬೇಕಾಗಬಹುದು’ ಎಂದು ಹೇಳಿದರು.

ಪ್ರತಿಭಟನೆ ಎಚ್ಚರಿಕೆ: ‘ರಸ್ತೆ ನಿರ್ಮಾಣ ಕಾಮಗಾರಿ  ನಿಧಾನಗತಿಯಲ್ಲಿ ನಡೆಯುತ್ತಿರುವುದಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ’ ಎಂದು ಆರೋಪಿಸಿರುವ ಟ್ಯಾಕ್ಸಿ ಚಾಲಕರ ಮುಖಂಡರು, ‘ತಿಂಗಳಲ್ಲಿ ಕಾಮಗಾರಿ ಮುಗಿಯದಿದ್ದರೆ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಓಲಾ, ಉಬರ್‌ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಮುಖಂಡ ತನ್ವೀರ್‌ ಪಾಷಾ, ‘ಈ ರಸ್ತೆಯು ಟ್ಯಾಕ್ಸಿ ಚಾಲಕರಿಗೆ ಹೆಚ್ಚು ಅನುಕೂಲವಾಗಿದೆ. ಇಲ್ಲಿ ವಾಹನಗಳನ್ನು ಓಡಿಸಲು ಅವಕಾಶ ನೀಡಿದರೆ, ಬಳ್ಳಾರಿ ರಸ್ತೆಯ ದಟ್ಟಣೆಯಿಂದ ಮುಕ್ತಿ ಸಿಗಲಿದೆ’ ಎಂದರು. 

‘ನಗರ ಹಾಗೂ ನಿಲ್ದಾಣದ ನಡುವೆ ಪ್ರತಿದಿನ 25 ಸಾವಿರ ಟ್ಯಾಕ್ಸಿಗಳು ಓಡಾಡುತ್ತವೆ. ಸದ್ಯ ಬಳ್ಳಾರಿ ರಸ್ತೆಯ ಮೂಲಕ ಅವು ಹೋಗುತ್ತಿದ್ದು, ಪ್ರತಿ ಬಾರಿಯೂ ಟೋಲ್‌ನಲ್ಲಿ ₹ 125 ಶುಲ್ಕ ಪಾವತಿಸಬೇಕಿದೆ’ ಎಂದು ಹೇಳಿದರು.

‘ಕಾಮಗಾರಿ ತ್ವರಿತವಾಗಿ ಮುಗಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಅದಕ್ಕೆ ಅವರು ಸ್ಪಂದಿಸದಿದ್ದರೆ ಗಂಭೀರ ಸ್ವರೂಪದ ಪ್ರತಿಭಟನೆ ನಡೆಸುತ್ತೇವೆ’ ಎಂದು ತನ್ವೀರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.