ADVERTISEMENT

ಪಾಕ್‌ ಪ್ರಜೆಗಳಿಗೆ ಗೆಜೆಟೆಡ್ ಅಧಿಕಾರಿ ನೆರವು!

ಕದಿರೇನಹಳ್ಳಿ ಕೇಂದ್ರದಲ್ಲಿ ಆಧಾರ್ ಕಾರ್ಡ್ ಪಡೆದಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 27 ಮೇ 2017, 19:30 IST
Last Updated 27 ಮೇ 2017, 19:30 IST

ಬೆಂಗಳೂರು: ನಗರದಲ್ಲಿ ಸೆರೆ ಸಿಕ್ಕ ಪಾಕಿಸ್ತಾನ ಪ್ರಜೆಗಳು ಗೆಜೆಟೆಡ್ ಅಧಿಕಾರಿಯೊಬ್ಬರ ಶಿಫಾರಸಿನಿಂದ ಕದಿರೇನಹಳ್ಳಿ ಕೇಂದ್ರದಲ್ಲಿ ಆಧಾರ್  ಕಾರ್ಡ್  (ಯುಐಡಿ) ಮಾಡಿಸಿಕೊಂಡಿದ್ದರು ಎಂಬ ಸಂಗತಿ ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಶಿಫಾರಸು ಮಾಡಿದ್ದ ಗೆಜೆಟೆಡ್ ಅಧಿಕಾರಿಯ ಬಗ್ಗೆ ಮಾಹಿತಿ ಕೋರಿ ಸಿಸಿಬಿ ಪೊಲೀಸರು ಇದೀಗ ಯುಐಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಮತ್ತೊಂದೆಡೆ ಕದಿರೇನಹಳ್ಳಿ ಕೇಂದ್ರದ ನೌಕರರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

‘ಗೆಜೆಟೆಡ್ ಅಧಿಕಾರಿಗೆ ಹಣ ಕೊಟ್ಟು ಅವರ ನೆರವು ಪಡೆದಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿರುವ ಬಂಧಿತರು, ಅವರ ಹೆಸರು ಹಾಗೂ ಯಾವ ಇಲಾಖೆಗೆ ಸೇರಿದವರು ಎಂಬುದು ಗೊತ್ತಿಲ್ಲ ಎನ್ನುತ್ತಿದ್ದಾರೆ. ಶಿಫಾರಸು ಪತ್ರದ ಜತೆಗೆ ಯಾವ್ಯಾವ ದಾಖಲೆಗಳನ್ನು ಸಲ್ಲಿಸಲಾಯಿತು ಎಂಬ ಬಗ್ಗೆಯೂ ವಿವರ ನೀಡುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘₹ 2,000 ಖರ್ಚು ಮಾಡಿ ಪತ್ನಿ ಸಮೀರಾ, ಆಕೆಯ ಸಂಬಂಧಿಗಳಾದ ಝೈನಬ್ ಹಾಗೂ ಖಾಸಿಫ್ ಅವರ ಹೆಸರಿನಲ್ಲಿ ಮೂರು ಆಧಾರ್ ಕಾರ್ಡ್‌ ಮಾಡಿಸಿದ್ದೆ’ ಎಂದು ಸಿಹಾಬ್ ಹೇಳಿಕೆ ಕೊಟ್ಟಿದ್ದಾರೆ.

ಜೆರಾಕ್ಸ್ ದಾಖಲೆ:  ‘ನಾವು ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಪಡೆದು, ಸ್ಕ್ಯಾನ್ ಮಾಡಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುತ್ತೇವೆ. ಹೀಗಾಗಿ, ನಾಗರಿಕರು ಸಲ್ಲಿಸುವ ದಾಖಲೆಗಳ ಅಸಲಿತನವನ್ನು ಪರಿಶೀಲಿಸುವುದು ಕಡಿಮೆ. ಪಾಕ್‌ ಪ್ರಜೆಗಳು ನಕಲಿ ದಾಖಲೆಗಳನ್ನು ಸಲ್ಲಿಸಿ ಆಧಾರ್ ಕಾರ್ಡ್ ಪಡೆದಿರಬಹುದು. ಆ ಬಗ್ಗೆ ನಮಗೆ ಮಾಹಿತಿ ಇಲ್ಲ’ ಎಂದು ಕದಿರೇನಹಳ್ಳಿ ಕೇಂದ್ರದ ಸಿಬ್ಬಂದಿ ಹೇಳಿಕೆ ಕೊಟ್ಟಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಇ–ಮೇಲ್ ಪರಿಶೀಲನೆ: ‘ಸಿಹಾಬ್‌ ಅವರ ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಟ್ಯಾಬ್ ಜಪ್ತಿ ಮಾಡಿದ್ದೇವೆ. ಅವರಿಗೆ ಬಂದಿರುವ ಹಾಗೂ ಅವರು ಕಳುಹಿಸಿರುವ ಇ–ಮೇಲ್‌ಗಳನ್ನು ಪರಿಶೀಲಿಸಲಾಗುತ್ತಿದೆ. ಸಿಬ್ಬಂದಿಯ ಮತ್ತೊಂದು ತಂಡ, ಆರೋಪಿಗಳ ಬ್ಯಾಂಕ್‌ ಖಾತೆಗಳತ್ತ ಚಿತ್ತ ಹರಿಸಿದೆ. ಹಣ ವರ್ಗಾವಣೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಪ್ರಕರಣದ ತನಿಖಾಧಿಕಾರಿಗಳು ತಿಳಿಸಿದರು.

ಹರಿಪ್ರಸಾದ್ ನಾಪತ್ತೆ: ‘ತಮ್ಮ ಬಳಿ ಇದ್ದ ತಮಿಳುನಾಡು ನೋಂದಣಿ ಸಂಖ್ಯೆ ಕಾರು ಕೇರಳದ ಹರಿಪ್ರಸಾದ್ ಎಂಬುವರಿಂದ ಖರೀದಿಸಿದ್ದು ಎಂದು ಸಿಹಾಬ್ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದರು. ಆದರೆ, ಹರಿಪ್ರಸಾದ್‌ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಕೂಡ ಸ್ವಿಚ್ಡ್‌ಆಫ್ ಆಗಿದೆ. ವಿಶೇಷ ತಂಡಗಳು ಕೇರಳ ಹಾಗೂ ತಮಿಳುನಾಡಿಗೂ ತೆರಳಿ ತನಿಖೆ ನಡೆಸುತ್ತಿವೆ’ ಎಂದು ಅವರು ಮಾಹಿತಿ ನೀಡಿದರು.
*
ಮಾಹಿತಿ ಕೊಡಿ, ಕೇಸ್ ಮಾಡ್ತೀವಿ
‘ಶಿಫಾರಸು ಮಾಡಿದ ಆ ಗೆಜೆಟೆಡ್ ಅಧಿಕಾರಿ ಯಾರು ಎಂಬ ಬಗ್ಗೆ ನೀವು ಮಾಹಿತಿ ಕೊಡಿ. ನಾವು ಅವರ ವಿರುದ್ಧ ಕೇಸ್ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ  ಎಂದು ಯುಐಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ’ ಎಂದು ತನಿಖಾಧಿಕಾರಿಗಳು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.