ADVERTISEMENT

ಪಾಲಕರೊಂದಿಗೆ ಮಕ್ಕಳ ಪ್ರತಿಭಟನೆ

ಶಾಲೆಗಳ ವಿರುದ್ಧ ಕ್ರಮ ಜರುಗಿಸದ ಆಯೋಗ: ಆರೋಪ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:58 IST
Last Updated 29 ಆಗಸ್ಟ್ 2016, 19:58 IST
ಪಾಲಕರೊಂದಿಗೆ ಮಕ್ಕಳ ಪ್ರತಿಭಟನೆ
ಪಾಲಕರೊಂದಿಗೆ ಮಕ್ಕಳ ಪ್ರತಿಭಟನೆ   

ಬೆಂಗಳೂರು: ‘ವಿನಾಕಾರಣ ಕಿರುಕುಳ ನೀಡುತ್ತಿರುವ ಶಾಲೆಗಳ ವಿರುದ್ಧ ಕ್ರಮ ಜರುಗಿಸಲು ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಹಿಂದೇಟು ಹಾಕುತ್ತಿದೆ’ ಎಂದು ಆರೋಪಿಸಿ  ಪೋಷಕರ ಸಮ್ಮುಖದಲ್ಲಿ ಮಕ್ಕಳು, ಆಯೋಗದ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ವಿದ್ಯಾರ್ಥಿಗಳ ಪೋಷಕರ ಜಾಗೃತಿ ವೇದಿಕೆ ನೇತೃತ್ವದಲ್ಲಿ  ಸೇರಿದ್ದ ಮಕ್ಕಳು, ಆಯೋಗದ ವಿರುದ್ಧ ಘೋಷಣೆ ಕೂಗಿದರು.

‘ಪೀಣ್ಯ 2ನೇ ಹಂತದ ಕಿರಣ್‌ ಪ್ರೌಢಶಾಲೆ, ಸುಂಕದಕಟ್ಟೆಯ ಅಪೊಲೊ ಪ್ರೌಢಶಾಲೆ ಹಾಗೂ ವಿದ್ಯಾನಿಕೇತನ ಶಾಲೆಗಳಲ್ಲಿ ಮಕ್ಕಳಿಗೆ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಲಾಗಿದೆ. ಆದರೆ ಆಯೋಗವು ತನಿಖೆಯನ್ನೇ ನಡೆಸಿಲ್ಲ’ ಎಂದು ವೇದಿಕೆಯ ಅಧ್ಯಕ್ಷ ರವಿ ದೂರಿದರು.

‘ಈ ಶಾಲೆಗಳು ದುಬಾರಿ ಶುಲ್ಕ ವಸೂಲಿ ಮಾಡುತ್ತಿವೆ ಎಂದು ಆರೋಪಿಸಿ ಪೋಷಕರು ಕೋರ್ಟ್‌ ಮೊರೆ ಹೋಗಿದ್ದರು. ಬಳಿಕ ಕೋರ್ಟ್‌ ನಿಗದಿಪಡಿಸಿದ್ದ ಶುಲ್ಕವನ್ನು ಪಾವತಿಸಿದ್ದರು. ಇದು ಆಡಳಿತ ಮಂಡಳಿಗಳ ಕೆಂಗಣ್ಣಿಗೆ ಕಾರಣವಾಗಿತ್ತು. ಕಡಿಮೆ ಶುಲ್ಕ ಪಾವತಿಸಿದ ಮಕ್ಕಳನ್ನು ಸಭಾಂಗಣದಲ್ಲಿ ಕೂಡಿ ಹಾಕುವುದು, ಹೊಡೆಯುವುದನ್ನು ಮಾಡಲಾಗುತ್ತಿತ್ತು’ ಎಂದು ಆರೋಪಿಸಿದರು.

‘ಈ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ದೂರು ನೀಡಿದ್ದೆವು. ಮಕ್ಕಳಿಗೆ ಕಿರುಕುಳ ನೀಡಿದ ಪ್ರಕರಣಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಸಬೂಬು ಹೇಳುತ್ತಿದ್ದಾರೆ’ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.