ADVERTISEMENT

ಪಾಲಿಕೆ ಗುತ್ತಿಗೆದಾರರಿಂದ ಪ್ರತಿಭಟನೆ

ಪ್ಯಾಕೇಜ್‌ ಟೆಂಡರ್‌ ಕೈಬಿಡಲು, ಬಾಕಿ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2016, 20:02 IST
Last Updated 9 ಫೆಬ್ರುವರಿ 2016, 20:02 IST

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾಮಗಾರಿಗಳಿಗೆ ಸದ್ಯ ಕರೆದಿರುವ ಪ್ಯಾಕೇಜ್ ಟೆಂಡರ್ ರದ್ದುಗೊಳಿಸಿ, ಮೊದಲಿನಂತೆ ವಾರ್ಡ್‌ ಮಟ್ಟದಲ್ಲೇ ಟೆಂಡರ್‌ ಕರೆಯಬೇಕು’ ಎಂದು ಆಗ್ರಹಿಸಿ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

‘ನಾವು ಈ ಹಿಂದೆ ನಡೆಸಿದ ಕಾಮಗಾರಿಗಳಿಗೆ 23 ತಿಂಗಳಿಂದ ಬಿಲ್‌ ಬಾಕಿ ಉಳಿಸಿಕೊಂಡಿರುವ ಬಿಬಿಎಂಪಿ, ಈಗ ಪ್ಯಾಕೇಜ್‌ ಟೆಂಡರ್‌ ಕರೆಯುವ ಮೂಲಕ ನಮ್ಮಂತಹ ಎರಡು ಸಾವಿರ ಗುತ್ತಿಗೆದಾರರಿಗೆ ಅನ್ಯಾಯ ಎಸಗಿದೆ’ ಎಂದು ಪ್ರತಿಭಟನಾಕಾರರು ದೂರಿದರು.

‘2015–2016ನೇ ಸಾಲಿನಲ್ಲಿ ₹ 797 ಕೋಟಿ  ಮೊತ್ತದ 1,150 ಕಾಮಗಾರಿಗಳಿಗೆ ಪ್ಯಾಕೇಜ್‌ ಟೆಂಡರ್‌ ಕರೆಯಲಾಗಿದ್ದು, ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಅದರಲ್ಲಿ ಭಾಗವಹಿಸಲು ಆಗದ ರೀತಿಯಲ್ಲಿ ನಿಯಮ ರೂಪಿಸ ಲಾಗಿದೆ. ಕೆಲವರಿಗೆ ಮಾತ್ರ ಅನುಕೂಲ ಮಾಡಿಕೊಡುವ ದುರುದ್ದೇಶದಿಂದ ಈ ಹುನ್ನಾರ ನಡೆಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಿಬಿಎಂಪಿ ಆಡಳಿತವು ಬಡ ಗುತ್ತಿಗೆದಾರರ ಹೊಟ್ಟೆಮೇಲೆ ಬರೆ ಎಳೆಯುತ್ತಿದೆ’ ಎಂದು ದೂರಿದರು. ಪ್ರತಿಭಟನಾನಿರತ ಗುತ್ತಿಗೆದಾರರನ್ನು ಭೇಟಿ ಮಾಡಿದ ಆಯುಕ್ತ ಜಿ.ಕುಮಾರ್‌ ನಾಯಕ್‌, ‘ಮಾರ್ಚ್‌ ಅಂತ್ಯದೊಳಗೆ ಬಾಕಿ ಕಂತನ್ನು ಬಿಡುಗಡೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಆಯುಕ್ತರ ಭರವಸೆಯಿಂದ ಸಮಾಧಾನಗೊಳ್ಳದ ಗುತ್ತಿಗೆದಾರರು, ‘ನಿಮ್ಮಿಂದ ಮೇಲಿಂದ ಮೇಲೆ ಸುಳ್ಳು ಭರವಸೆಗಳೇ ಸಿಗುತ್ತಿವೆ. ಬಾಕಿ ಮಾತ್ರ ಬಿಡುಗಡೆ ಆಗುತ್ತಿಲ್ಲ. ಬಾಕಿ ಬಿಡುಗಡೆ ಮಾಡದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಹೇಳಿದರು. ‘ಬಿಬಿಎಂಪಿಗೆ ನಿಮ್ಮ ಸಹಕಾರ ಅಗತ್ಯವಾಗಿದೆ’ ಎಂದು ಆಯುಕ್ತರು ಮನವಿ ಮಾಡಿದರು. ಆದರೆ, ಪ್ರತಿಭಟನಾಕಾರರು ಅದಕ್ಕೆ ಕಿವಿಗೊಡಲಿಲ್ಲ.

‘ಕೌನ್ಸಿಲ್‌ ಸಭೆ ನಡೆಯುವ ದಿನ ಸಭಾಂಗಣಕ್ಕೆ ಬೀಗಹಾಕಿ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.