ADVERTISEMENT

ಪಿಐಎಲ್‌ ವಜಾ ಮಾಡಿದ ವಿಭಾಗೀಯ ಪೀಠ

​ಪ್ರಜಾವಾಣಿ ವಾರ್ತೆ
Published 23 ಜುಲೈ 2016, 19:30 IST
Last Updated 23 ಜುಲೈ 2016, 19:30 IST
ಪಿಐಎಲ್‌ ವಜಾ ಮಾಡಿದ ವಿಭಾಗೀಯ ಪೀಠ
ಪಿಐಎಲ್‌ ವಜಾ ಮಾಡಿದ ವಿಭಾಗೀಯ ಪೀಠ   

ಬೆಂಗಳೂರು: ‘ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅನುಕೂಲಕರ ತೀರ್ಪು ಪಡೆಯಲು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌್.ಕೆ. ಮುಖರ್ಜಿ ಅವರ ಮನೆಗೆ  ಬಂಗಾಳಿ ಭಾಷಿಕರೊಬ್ಬರು ಭೇಟಿ ನೀಡಿ ಲಂಚದ ಆಮಿಷ ಒಡ್ಡಿ ಹೋಗಿದ್ದಾರೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ  ಉಮ್ರಾವ್ ಡೆವಲಪರ್ಸ್‌ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂಬ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

ಈ ಕುರಿತಂತೆ ವಕೀಲ ಜಿ.ಆರ್. ಮೋಹನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು  (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ಹಾಗೂ ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ವಿಭಾಗೀಯ ಪೀಠವು ಶುಕ್ರವಾರ ವಜಾ ಮಾಡಿತು.
ಬೆಳಗಿನ ಕಲಾಪದಲ್ಲಿ ಪ್ರಕರಣ ವಿಚಾರಣೆಗೆ ಬರುತ್ತಿದ್ದಂತೆಯೇ ಎಸ್‌.ಕೆ. ಮುಖರ್ಜಿ ಅವರ ಮುಖ ಕೆಲ ಕ್ಷಣ ಕಪ್ಪಿಟ್ಟಿತು. ‘ಯಾರು ಬಂದಿದ್ದರು ಎಂದು ಯಾರಿಗೆ ಗೊತ್ತು. ಅವನೇ (ಉಮ್ರಾವ್ ಡೆವಲಪರ್ಸ್‌ನ ವ್ಯಕ್ತಿ) ಬಂದಿದ್ದನೊ ಅಥವಾ ಅವನ ಚಾಲಕ ಬಂದಿದ್ದನೊ ಯಾರಿಗೆ ಗೊತ್ತು’ ಎಂದು ಕೈಚೆಲ್ಲಿ ಮಳಿಮಠ ಅವರಿಗೆ ಮುಂದಿನ ಕ್ರಮಕ್ಕೆ ಸೂಚಿಸಿದರು.

ಆಗ ಮಳಿಮಠ, ‘ಅರ್ಜಿದಾರರ ಆರೋಪಗಳನ್ನು ಪುಷ್ಟೀಕರಿಸುವಂತಹ ಅಂಶಗಳು ನಿಮ್ಮ ಅಹವಾಲಿನಲ್ಲಿ ಇಲ್ಲ. ಹೈಕೋರ್ಟ್‌ ಮತ್ತು ಅಧೀನ ನ್ಯಾಯಾ ಲಯಗಳಲ್ಲಿ ನ್ಯಾಯಾಧೀಶರ ಮನೆಗಳಿಗೆ ಯಾರು ಬಂದು ಹೋಗುತ್ತಾರೆ ಎಂಬು ದರ ಬಗ್ಗೆ ಮಾರ್ಗಸೂಚಿ ರಚಿಸಬೇಕೆಂಬ ನಿಮ್ಮ ಕೋರಿಕೆಯನ್ನು ಮನ್ನಿಸಲು ಸಾಧ್ಯವಿಲ್ಲ. ನ್ಯಾಯಮೂರ್ತಿಗಳು ಈ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಅರಿತುಕೊಳ್ಳಲು ಸ್ವಯಂ ಸಶಕ್ತರಾಗಿದ್ದಾರೆ’ ಎಂದು ಆದೇಶಿಸಿ ಅರ್ಜಿ ವಜಾ ಮಾಡುತ್ತಿರುವುದಾಗಿ ತಿಳಿಸಿದರು.

ಮನವಿ: ‘ಮುಖರ್ಜಿ ವಿರುದ್ಧ ಬೆಂಗಳೂರು ವಕೀಲರ ಸಂಘ ಕೈಗೊಂಡಿರುವ ನಿರ್ಣಯಗಳು ಶೀಘ್ರವೇ ಕಾರ್ಯಗತವಾಬೇಕು. ಇಲ್ಲದಿದ್ದಲ್ಲಿ ಕೇಂದ್ರ ಕಾನೂನು ಸಚಿವರು ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳನ್ನು ಸಂಘದ  ನಿಯೋಗವು ಭೇಟಿ ಮಾಡಿ ಚರ್ಚಿಸಬೇಕು’ ಎಂದು ಕೆ.ಎನ್‌. ಸುಬ್ಬಾರೆಡ್ಡಿ ಮನವಿ ಮಾಡಿದ್ದಾರೆ.

ಹೋರಾಟಕ್ಕೆ ನಿರ್ಧಾರ: ‘ಮುಖ್ಯ ನ್ಯಾಯಮೂರ್ತಿಗಳನ್ನು ಇಲ್ಲಿಂದ ಕೂಡಲೇ ವರ್ಗಾವಣೆ ಮಾಡಬೇಕು ಮತ್ತು ಲಂಚದ ಆಮಿಷ ಒಡ್ಡಿರುವ ಘಟನೆಯ ಸಂಬಂಧ ತನಿಖೆ ನಡೆಯಬೇಕು ಎಂಬ ಈ ಹಿಂದಿನ ನಿರ್ಣಯಗಳಿಗೆ ಸಂಬಂಧಿಸಿದಂತೆ  ಬೆಂಗಳೂರು ವಕೀಲರ ಸಂಘದ ಜೊತೆ ಇದೇ 25ರಂದು ಚರ್ಚಿಸಲಾಗುವುದು’ ಎಂದು  ಎ.ಪಿ.ರಂಗನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬೀದಿಗಿಳಿದು ಹೋರಾಟ ನಡೆಸುವ ಕುರಿತಂತೆ ಇದೇ ಸಂದರ್ಭ ತೀರ್ಮಾನ ಕೈಗೊಳ್ಳುವುದಾಗಿ  ಹೇಳಿದರು.

ದೊಡ್ಡವರು ಎನ್ನಿಸಿಕೊಂಡವರು  (ಸಿ.ಜೆ) ಈ ರೀತಿ ನಡೆದುಕೊಳ್ಳುವುದು ತಪ್ಪು. ಕಾನೂನು ಎಲ್ಲರಿಗೂ ಒಂದೆ 
ಎಸ್.ಎಸ್.ಮಿಟ್ಟಲಕೋಡ
ರಾಜ್ಯ ವಕೀಲರ ಪರಿಷತ್‌ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT