ADVERTISEMENT

ಪಿ.ಯು. ಫಲಿತಾಂಶ: ಬೆಂಗಳೂರಿಗೂ ಕಹಿ

​ಪ್ರಜಾವಾಣಿ ವಾರ್ತೆ
Published 11 ಮೇ 2017, 20:26 IST
Last Updated 11 ಮೇ 2017, 20:26 IST
ಪಿ.ಯು. ಫಲಿತಾಂಶ: ಬೆಂಗಳೂರಿಗೂ ಕಹಿ
ಪಿ.ಯು. ಫಲಿತಾಂಶ: ಬೆಂಗಳೂರಿಗೂ ಕಹಿ   

ಬೆಂಗಳೂರು: ದ್ವಿತಿಯ ಪಿಯುಸಿ ಫಲಿತಾಂಶ ಸಾಧನೆಯಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಗ್ರಾಮಾಂತರ ಶೈಕ್ಷಣಿಕ ಜಿಲ್ಲೆಗಳ ಸ್ಥಾನ ಕುಸಿದಿದೆ.

2016ರಲ್ಲಿ ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ 5ನೇ ಸ್ಥಾನ ಪಡೆದಿತ್ತು. ಈ ವರ್ಷ 8ನೇ ಸ್ಥಾನಕ್ಕೆ ಕುಸಿದಿದೆ.  6ನೇ ಸ್ಥಾನ ಪಡೆದಿದ್ದ ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆ ಈ ಬಾರಿ 7ನೇ ಸ್ಥಾನಕ್ಕೆ ಇಳಿದಿದೆ. 9ನೇ ಸ್ಥಾನದಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ 12ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

‘ಈ ಬಾರಿ ರಾಜ್ಯದ ಶೇಕಡಾವಾರು ಫಲಿತಾಂಶದಲ್ಲಿ ಇಳಿಕೆಯಾಗಿದೆ. ಹಾಗಾಗಿ ಜಿಲ್ಲಾವಾರು ಸಾಧನೆಯೂ ಕಡಿಮೆ ಆಗಿದೆ. ನಗರದ ಕಾಲೇಜುಗಳ ಫಲಿತಾಂಶ ಹೆಚ್ಚಿಸಲು ವಾರಾಂತ್ಯ ಹಾಗೂ ತಿಂಗಳಾಂತ್ಯದಲ್ಲಿ ಕಿರು–ಪರೀಕ್ಷೆಗಳನ್ನು ನಡೆಸಿದ್ದೆವು. ಕೆಲವೆಡೆ ವಿಶೇಷ ತರಗತಿಗಳನ್ನು ತೆಗೆದುಕೊಂಡಿದ್ದೆವು. ಅಧ್ಯಾಪಕರು ಕೂಡ ಶ್ರಮವಹಿಸಿಯೇ ಪಾಠ–ಪ್ರವಚನಗಳನ್ನು ಮಾಡಿದ್ದರು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಅಬ್ದುಲ್‌ ರಶೀದ್ ಅಹಮ್ಮದ್‌ ತಿಳಿಸಿದರು.

ADVERTISEMENT

‘ನಗರದಲ್ಲಿ ನೂರಾರು ಪಿ.ಯು.ಕಾಲೇಜುಗಳಿವೆ. ಫಲಿತಾಂಶದಲ್ಲಿ  ಇಳಿಕೆಯಾಗಲು ಸರ್ಕಾರಿ ಕಾಲೇಜುಗಳ ಫಲಿತಾಂಶ ಕಾರಣವೇ ಅಥವಾ ಖಾಸಗಿ ಕಾಲೇಜುಗಳ ಫಲಿತಾಂಶ ಕಾರಣವೇ ಎಂಬುದನ್ನು ಈ ವಾರದಲ್ಲಿ ಪತ್ತೆ ಹಚ್ಚುತ್ತೇವೆ. ಈ ಬಾರಿ ಪಠ್ಯ ಬೋಧನೆಯಲ್ಲಿ ಆಗಿರುವ ತಪ್ಪುಗಳನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ’ ಎಂದು ತಿಳಿಸಿದರು.

ಸಿಹಿ ಹಂಚಿ ಸಂಭ್ರಮಿಸಿದರು: ಗುರುವಾರ ಮಧ್ಯಾಹ್ನ ಫಲಿತಾಂಶ ಆನ್‌ಲೈನ್‌ನಲ್ಲಿ ಬಿಡುಗಡೆ ಆಗುತ್ತಿದ್ದಂತೆ ವಿದ್ಯಾರ್ಥಿಗಳು ಮೊಬೈಲ್‌ ಹಾಗೂ ಸೈಬರ್‌ ಸೆಂಟರ್‌ಗಳಲ್ಲಿ ಫಲಿತಾಂಶ ವೀಕ್ಷಿಸಿದರು. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಸ್ನೇಹಿತರಿಗೆ, ಕುಟುಂಬ ಸದಸ್ಯರಿಗೆ ಹಾಗೂ ನೆರೆಹೊರೆಯವರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಹೆಚ್ಚು ಅಂಕ ಗಳಿಸಿರುವ ನಗರದ ವಿದ್ಯಾರ್ಥಿಗಳು (ಶೇಕಡಾವಾರು): ವಾಣಿಜ್ಯ: ದಿನೇಶ್‌ ರೆಡ್ಡಿ ಪೆರಮ್‌ (98.83), ಆರ್‌.ಪ್ರೇರಣಾ (98.33), ಲೋಕೇಶ್‌ ಜೈನ್‌ (98.17), ಆರ್.ರೋಶನಿ (98.17), ಸಾಕ್ಷಿ ರಾಜೇಂದ್ರಕುಮಾರ್‌ (97.83).
ವಿಜ್ಞಾನ ವಿಭಾಗ : ರಕ್ಷಿತಾ ರಮೇಶ್‌ (98.17), ಬಿ.ಬಿ.ಬನಶ್ರೀ (98.17), ಜಿ.ಆರ್.ಬಾಲಾಜಿ (98) ಸುಚೇತ್‌ ಶೆಣೈ (97.83), ಎಸ್‌.ವೈಷ್ಣವಿ ಕುಬೇರ್‌ (97.67), ಬಿ.ಸಿ.ಅನನ್ಯ (97.50).

**

ಸ್ನೇಹಮಯ ಶಿಕ್ಷಕರಿಂದ ಸಾಧನೆ

‘ಅಧ್ಯಯನದಲ್ಲಿ ಎದುರಾಗುತ್ತಿದ್ದ ಗೊಂದಲಗಳನ್ನು ಶಿಕ್ಷಕರು ಸಕಾಲದಲ್ಲಿ ಪರಿಹರಿಸುತ್ತಿದ್ದರು. ಕಾಲೇಜಿನಲ್ಲಿ ಸ್ನೇಹಮಯ ವಾತಾವರಣವಿತ್ತು. ಸ್ನೇಹಿತರು, ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಉತ್ತಮ ಅಂಕಗಳನ್ನು ಗಳಿಸಿದೆ’ ಎಂದು ವಿಜ್ಞಾನ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನ ಗಳಿಸಿರುವ ಎನ್‌. ಸಹನಾ ತಿಳಿಸಿದರು.

ತಲಘಟ್ಟಪುರದ ದೀಕ್ಷಾ ಸೆಂಟರ್‌ ಫಾರ್‌ ಲರ್ನಿಂಗ್‌ ಪಿ.ಯು. ಕಾಲೇಜಿನ ವಿದ್ಯಾರ್ಥಿಯಾದ ಅವರು 594 ಅಂಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.