ADVERTISEMENT

ಪುನಶ್ಚೇತನ ಹೋರಾಟಕ್ಕೆ ಸಲಹೆ

ಬೆಳ್ಳಂದೂರು, ವರ್ತೂರು ಕೆರೆಗಳಲ್ಲಿ ನೊರೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2016, 20:16 IST
Last Updated 12 ಜೂನ್ 2016, 20:16 IST
ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಟಿ.ವಿ.ರಾಮಚಂದ್ರ ಅವರು ವರ್ತೂರು ಮತ್ತು ಬೆಳ್ಳಂದೂರು ಕೆರೆಯ   ಪುನಶ್ಚೇತನದ ಬಗ್ಗೆ ಸ್ಥಳೀಯರ ಜತೆ ಸಮಾಲೋಚನೆ ನಡೆಸಿದರು   – ಪ್ರಜಾವಾಣಿ ಚಿತ್ರ
ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಟಿ.ವಿ.ರಾಮಚಂದ್ರ ಅವರು ವರ್ತೂರು ಮತ್ತು ಬೆಳ್ಳಂದೂರು ಕೆರೆಯ ಪುನಶ್ಚೇತನದ ಬಗ್ಗೆ ಸ್ಥಳೀಯರ ಜತೆ ಸಮಾಲೋಚನೆ ನಡೆಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಸೇನಾ ಬೆಟಾಲಿಯನ್‌ಗಳನ್ನು ಬಳಸಿ ಕೈಗೊಳ್ಳಲಾದ ‘ಶುದ್ಧ ಗಂಗಾ’ ಅಭಿಯಾನದ ಮಾದರಿಯಲ್ಲೇ  ಬೆಳ್ಳಂದೂರು  ಕೆರೆ ಮತ್ತು ವರ್ತೂರು ಕೆರೆಗಳನ್ನು  ಪುನರುಜ್ಜೀವನ ಮಾಡಬೇಕು ಎಂದು ಭಾರತೀಯ  ವಿಜ್ಞಾನ ಸಂಸ್ಥೆಯ ಪ್ರೊ.ಟಿ.ವಿ. ರಾಮಚಂದ್ರ ನೇತೃತ್ವದ ಅಧ್ಯಯನ ತಂಡವು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಈ ಎರಡು ಕೆರೆಗಳನ್ನು 18 ತಿಂಗಳುಗಳಲ್ಲಿ ಶುದ್ಧೀಕರಿಸಬಹುದು ಎಂದು ಅಧ್ಯಯನ ತಂಡ ಹೇಳಿದೆ. 

ಸೈನಿಕರು ಹಾಗೂ ಶಾಲಾ ವಿದ್ಯಾರ್ಥಿಗಳ ನೆರವಿನಿಂದ ಮೂರು ತಿಂಗಳ ಕಾಲ ಎರಡು ಕೆರೆಗಳ ಸಮಗ್ರ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿರುವ ತಂಡವು ಈ ಕುರಿತು ಸ್ಥಳೀಯರ ಜೊತೆ ಭಾನುವಾರ ಸಮಾಲೋಚನೆ ನಡೆಸಿತು.

‘ಕೆರೆ ಪುನಶ್ಚೇತನಕ್ಕೆ ಪಟ್ಟು ಹಿಡಿಯಬೇಕು. ಈ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಟ ನಡೆಸಬೇಕು’ ಎಂದು ಪ್ರೊ.ರಾಮಚಂದ್ರ  ಸ್ಥಳೀಯರಿಗೆ ಸಲಹೆ ನೀಡಿದರು.

‘ಈ ಕೆರೆಗಳಲ್ಲಿ ನೊರೆ ಸಮಸ್ಯೆ ಕಾಣಿಸಿಕೊಳ್ಳಲು ಕಾರಣರಾದವರೇ ಕೆರೆ ಪುನಶ್ಚೇತನಕ್ಕೆ ತಗಲುವ ವೆಚ್ಚವನ್ನು ಭರಿಸಬೇಕು. ಜಲಮಂಡಳಿ, ಕೈಗಾರಿಕೆಗಳು ಹಾಗೂ ಮನೆಯ ಕೊಳಚೆಯನ್ನು ಕೆರೆಗೆ ಬಿಟ್ಟವರು ಅದಕ್ಕೆ ತಕ್ಕ   ಬೆಲೆ ತೆರಬೇಕು. ಕೆರೆಗಳ ಸುತ್ತಮುತ್ತಲೂ ಇರುವ ಉದ್ದಿಮೆಗಳ ಕಾರ್ಪೊರೇಟ್‌ ಸಾಮಾಜಿಕ  ಹೊಣೆಗಾರಿಕೆ ನಿಧಿಯ ಶೇ 15ರಷ್ಟು ಮೊತ್ತವನ್ನಾದರೂ ಈ ಕೆರೆಗಳ ಪುನಶ್ಚೇತನಕ್ಕೆ ಕಾಯ್ದಿರಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಈ ಕೆರೆಗಳ ಮೀನುಗಳನ್ನು ಹಾಗೂ ಕೆರೆಯ ನೀರನ್ನು ಬಳಸಿ ಬೆಳೆದ ತರಕಾರಿಗಳನ್ನು  ಅರಿವಿಲ್ಲದೆಯೇ ಸೇವಿಸುತ್ತಿದ್ದೇವೆ. ಇದು ಕಿಡ್ನಿ ವೈಫಲ್ಯ ಮತ್ತಿತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿವೆ. ಆರೋಗ್ಯ ಸಮಸ್ಯೆ ಇನ್ನಷ್ಟು ಹೆಚ್ಚುವ ಮುನ್ನ  ನಗರದಲ್ಲಿ  ವಾಸಿಸುವ ಪ್ರತಿಯೊಬ್ಬರೂ ಈ ಕೆರೆಗಳ ಪುನಶ್ಚೇತನಕ್ಕೆ ಕೈಜೋಡಿಸಬೇಕು’ ಎಂದರು.

‘ಜನರಲ್ಲಿ ಪರಿಸರ ಕಾಳಜಿಯ ಕೊರತೆ ಇದೆ. ಈ ಕೆರೆಗಳ ಅಧ್ಯಯನ ತೊಡಗಿದ್ದಾಗ, ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುವವರೂ ಕಸವನ್ನು ತಂದು ಕೆರೆಗಳಿಗೆ ಎಸೆದು ಹೋಗಿದ್ದನ್ನು ನೋಡಿದ್ದೇನೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೆರೆಯ ಪುನಶ್ಚೇತನಕ್ಕಾಗಿ  ರಾಜಕಾಲುವೆಗಳು ಹಾಗೂ ಕೆರೆದಂಡೆ ಒತ್ತುವರಿ ತೆರವುಗೊಳಿಸಬೇಕು. ಕೆರೆಯ ಜಲಾನಯನ ಪ್ರದೇಶ ಮತ್ತು ಕೆರೆಯಂಚಿನ ಪ್ರದೇಶಗಳ ಮ್ಯಾಪಿಂಗ್‌ ನಡೆಸಬೇಕು. ದ್ರವತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪಿಸಬೇಕು.  ಪುನಶ್ಚೇತನ ಕಾರ್ಯವನ್ನು ಪೂರ್ಣಗೊಳಿಸಲು 18 ತಿಂಗಳು ಬೇಕು’ ಎಂದರು.

ಕೆಸರಿನ ಮೌಲ್ಯ ₹ 15 ಸಾವಿರ ಕೋಟಿ; ‘ಬೆಳ್ಳಂದೂರು ಕೆರೆ ಮತ್ತು ವರ್ತೂರು ಕೆರೆಗಳಲ್ಲಿ ತುಂಬಿರುವ ಹೂಳು ಹಾಗೂ ಕೆಸರಿನ ಮೌಲ್ಯವೇ ₹ 15,697  ಕೋಟಿಯಷ್ಟು ಆಗಲಿದೆ’ ಎನ್ನುತ್ತಾರೆ ಪ್ರೊ.ರಾಮಚಂದ್ರ.

ಪುನಶ್ಚೇತನದ ಹಂತಗಳು
* ಕೆರೆಯಲ್ಲಿ ತುಂಬಿರುವ ಮಾಲಿನ್ಯಕಾರಕಗಳನ್ನು ಬೇರ್ಪಡಿಸುವುದು

* ಸಂಸ್ಕರಣೆಗೆ ಒಳಪಡಿಸದ ದ್ರವತ್ಯಾಜ್ಯ ಕೆರೆಗಳಿಗೆ ಸೇರದಂತೆ ತಡೆಯುವುದು
* ಕೆರೆಗೆ ಸೇರುವ ದ್ರವತ್ಯಾಜ್ಯವನ್ನು ಜಕ್ಕೂರು ಕೆರೆ ಮಾದರಿಯಲ್ಲಿ ಸಂಸ್ಕರಿಸುವುದು
* ಕೈಗಾರಿಕೆಗಳಿಂದ ಯಾವುದೇ ತ್ಯಾಜ್ಯ ಕೆರೆಗಳನ್ನು ಸೇರದಂತೆ ನೋಡಿಕೊಳ್ಳುವುದು
* ಹೂಳೆತ್ತುವುದು
*   ಕೆರೆಯ ಸೌಂದರ್ಯ ವೃದ್ಧಿಗೆ ಕ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT