ADVERTISEMENT

ಪೆರಿಫೆರಲ್‌ ರಸ್ತೆ ಯೋಜನೆಗೆ ತಾತ್ವಿಕ ಒಪ್ಪಿಗೆ

ಅಭಿವೃದ್ಧಿ ಪಡಿಸಿದ ಶೇ 25ರಷ್ಟು ಭೂಮಿ, ಎರಡು ಪಟ್ಟು ಎಫ್‌ಎಆರ್‌ ರೈತರಿಗೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 20:20 IST
Last Updated 29 ಜೂನ್ 2016, 20:20 IST

ಬೆಂಗಳೂರು: ಅಭಿವೃದ್ಧಿಪಡಿಸಿದ ಭೂಮಿಯಲ್ಲಿ ಶೇ 25ರಷ್ಟನ್ನು ರೈತರಿಗೆ ನೀಡುವ ಮೂಲಕ ಪೆರಿಫೆರಲ್‌ ರಸ್ತೆ ಯೋಜನೆ ಕೈಗೆತ್ತಿಕೊಳ್ಳುವ ಮಹತ್ವದ ಹೆಜ್ಜೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ನೇತೃತ್ವ ಸಮಿತಿ ಸಿದ್ಧಪಡಿಸಿದ್ದ ಪರಿಷ್ಕೃತ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಲಾಯಿತು ಎಂದು ಸಭೆ ಬಳಿಕ ಕಾನೂನು ಸಚಿವ ಟಿ.ಬಿ. ಜಯಚಂದ್ರ ಸುದ್ದಿಗಾರರಿಗೆ ತಿಳಿಸಿದರು.
ರೈತರಿಗೆ ಪರಿಹಾರ ನೀಡಲು ₹ 8000–9000 ಕೋಟಿ ರೂ. ಸಂಪನ್ಮೂಲ ಬೇಕಾಗುತ್ತಿತ್ತು. ಈ ಹೊರೆ ತಪ್ಪಿಸಲು ಅಭಿವೃದ್ಧಿ ಪಡಿಸಿದ ಭೂಮಿ, ಎರಡು ಪಟ್ಟು ಫ್ಲೋರ್‌ ಏರಿಯಾ ರೇಷಿಯೋ(ಎಫ್‌ಎಆರ್‌) ನೀಡಿ ರೈತರನ್ನು  ಒಲಿಸಿಕೊಂಡು ವೆಚ್ಚ ಇಳಿಕೆ ಹಾದಿ ಹಿಡಿದಿದೆ.
ಬೆಂಗಳೂರಿನ ಹೊರವಲಯದಲ್ಲಿ ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಪೆರಿಫೆರಲ್‌ ರಸ್ತೆ ನಿರ್ಮಾಣದ ಯೋಜನೆ 1986ರಲ್ಲಿ ಆರಂಭವಾಗಿತ್ತು. ಇದಕ್ಕಾಗಿ 1989 ಎಕರೆ ಭೂಮಿಯನ್ನು ರೈತರಿಂದ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಎಲ್ಲಾ ಪ್ರಕ್ರಿಯೆ ಮುಗಿದರೂ ಹೊಸ ಕಾಯ್ದೆ ಅನ್ವಯ ರೈತರಿಗೆ ನೀಡಬೇಕಾದ ಪರಿಹಾರ ಮೊತ್ತ ₹8000 ರಿಂದ 9000 ಕೋಟಿಗೆ ಏರಿದ್ದರಿಂದಾಗಿ ಸರ್ಕಾರ ಹಿಂದೇಟು ಹಾಕಿತ್ತು.
ಇದೀಗ 65 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ರೈತರಿಗೆ ಪರಿಹಾರ ನೀಡುವ ಬದಲು ಅಭಿವೃದ್ಧಿ ಪಡಿಸುವ ಭೂಮಿ ನೀಡುವ ಮೂಲಕ ಸರ್ಕಾರದ ಹೊರೆ ₹2000 ಕೋಟಿ ಗೆ ಇಳಿಕೆಯಾಗಲಿದೆ.

ಬಿಎಂಟಿಸಿಗೆ 1000 ಬಸ್‌: ಬಿಎಂಟಿಸಿಗೆ 1000 ಹೊಸ ಬಸ್‌ ಖರೀದಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಬಿಎಂಟಿಸಿ ತನ್ನದೇ ಸಂಪನ್ಮೂಲ ಹಾಗೂ ಸಾಲದ ರೂಪದಲ್ಲಿ ₹ 388 ಕೋಟಿ ವಿನಿಯೋಗಿಸಿ ಬಸ್‌ ಖರೀದಿಸಲಿದೆ. ಬಡ್ಡಿ ಮೊತ್ತ ₹ 152 ಕೋಟಿಗಳನ್ನು ರಾಜ್ಯ ಸರ್ಕಾರ ಭರಿಸಲಿದೆ.

ರೈತರ ಸಭೆ ಇಂದು
ಪೆರಿಫೆರಲ್‌ ರಸ್ತೆ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ನೂತನ ಪರಿಹಾರ ಯೋಜನೆ ಬಗ್ಗೆ ವಿವರಿಸಿ ಮನವರಿಕೆ ಮಾಡಿಕೊಡಲು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅವರು ಗುರುವಾರ ಸಭೆ ಆಯೋಜಿಸಿದ್ದಾರೆ. ರೈತರ ಮನವೊಲಿಸಿಯೇ ಯೋಜನೆ ಕೈಗೊಳ್ಳುವ ಯೋಚನೆ ಸರ್ಕಾರದ್ದಾಗಿದೆ.

ಯೋಜನೆ ವಿವರ

ADVERTISEMENT

- ತುಮಕೂರು ನೈಸ್‌ ರಸ್ತೆಯಿಂದ ಶುರುವಾಗುವ ರಸ್ತೆ ದೊಡ್ಡಬಳ್ಳಾಪುರ ರಸ್ತೆ, ಎನ್‌ಎಚ್‌–7, ಬಾಗಲೂರು, ಎನ್‌ಎಚ್‌ –4, ಹೊಸೂರು ರಸ್ತೆ ಸಂಪರ್ಕಿಸಿ ಬನ್ನೇರುಘಟ್ಟ ಸಮೀಪದ ನೈಸ್‌ ರಸ್ತೆಯನ್ನು ಸಂಪರ್ಕಿಸಲಿದೆ.
-ಯೋಜನೆ ಅನುಷ್ಠಾನಕ್ಕೆ ವಿಶೇಷ ಪ್ರಾಧಿಕಾರ ರಚನೆ, ಟೋಲ್‌ ರಸ್ತೆಯಾಗಿ ಪರಿವರ್ತನೆ.
- 100 ಮೀಟರ್‌ ಅಗಲದ ರಸ್ತೆ ಬದಲು 75 ಮೀಟರ್‌ಗೆ ಇಳಿಸಿ, ಎಂಟು ಪಥ ರಸ್ತೆ ನಿರ್ಮಾಣ.
- ರಸ್ತೆ ನಿರ್ಮಾಣಕ್ಕೆ ಬಳಸದೇ ಇರುವ 25 ಮೀಟರ್‌ ವಿಸ್ತೀರ್ಣವನ್ನು ರೈತರಿಗೆ ಹಂಚಿಕೆ.
-ನಗದು ರೂಪದಲ್ಲಿ ಪರಿಹಾರ ಬಯಸುವವರಿಗೆ ಅಭಿವೃದ್ಧಿ ಪಡಿಸದ ಭೂಮಿ ಬದಲು ನಗದು ಪರಿಹಾರ.
- ಸ್ವಾಧೀನಪಡಿಸಿಕೊಂಡ 1890 ಎಕರೆ ಭೂಮಿಯಲ್ಲಿ 1200 ಎಕರೆಗೆ ಅಭಿವೃದ್ಧಿಪಡಿಸಿದ ಭೂಮಿ ರೂಪದಲ್ಲಿ ಪರಿಹಾರ. 600 ಎಕರೆಗೆ ಮಾತ್ರ ನಗದು ಪರಿಹಾರ.
- ನೂರು ಮೀಟರ್‌ನ ಎರಡೂ ಬದಿ ಒಂದು ಕಿ.ಮೀ. ಪರಿಧಿಯಲ್ಲಿ ಜಮೀನು ಅಭಿವೃದ್ಧಿ ಪಡಿಸುವರಿಗೆ ಮಾರ್ಗಸೂಚಿ ದರದ ಶೇ 1ರಷ್ಟು ಅಭಿವೃದ್ಧಿ ಶುಲ್ಕ ವಸೂಲಿ ಹಾಗೂ ಪ್ರಿಮಿಯಮ್‌ ಎಫ್‌ಎಆರ್‌ ಮಾರಾಟದಿಂದ ಸಂಪನ್ಮೂಲ ಸಂಗ್ರಹಕ್ಕೆ ಆದ್ಯತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.