ADVERTISEMENT

ಪೊಲೀಸರ ಕ್ರಮಕ್ಕೆ ಹೈಕೋರ್ಟ್‌ ತರಾಟೆ

ಹೈಕೋರ್ಟ್‌ ಸುದ್ದಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:46 IST
Last Updated 26 ಸೆಪ್ಟೆಂಬರ್ 2016, 19:46 IST

ಬೆಂಗಳೂರು: ದಂತ ವೈದ್ಯೆಯೊಬ್ಬರನ್ನು ಕಾನೂನು ಬಾಹಿರವಾಗಿ ಬಂಧಿಸಿ ಮಡಿವಾಳದ ಸರ್ಕಾರಿ ಪುನರ್ವಸತಿ ಕೇಂದ್ರದಲ್ಲಿ  ಇರಿಸಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರ ಕ್ರಮಕ್ಕೆ ಹೈಕೋರ್ಟ್‌ ಸೋಮವಾರ ಕಿಡಿ ಕಾರಿತು.

ಈ ಸಂಬಂಧ ಆನೇಕಲ್‌ ತಾಲ್ಲೂಕಿನ ಸೂರ್ಯ ಸಿಟಿ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಗಿರೀಶ್‌ ಅವರನ್ನು ನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ಹಾಗೂ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ವಿಭಾಗೀಯ ಪೀಠವು  ತರಾಟೆಗೆ ತೆಗೆದುಕೊಂಡಿತು.

ಪ್ರಕರಣವೇನು: ಬೆಂಗಳೂರು ಮೂಲದ ದಂತವೈದ್ಯೆ ಜಿ.ಆರ್. ಶಿಲ್ಪಾ  ಮತ್ತು ಹೈದರಾಬಾದ್‌ ನಿವಾಸಿ ಎಂಜಿನಿಯರ್ ಪವನ್‌ ಶ್ರೀಕಾಂತ್‌ ರೆಡ್ಡಿ 2006ರಲ್ಲಿ ಮದುವೆಯಾಗಿದ್ದರು.

ನಂತರ ಅಮೆರಿಕಕ್ಕೆ ತೆರಳಿದ್ದ ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ.  ಭಿನ್ನಾಭಿಪ್ರಾಯದ ಕಾರಣ  ಶಿಲ್ಪಾ ಇತ್ತೀಚೆಗೆ ತಮ್ಮ ಇಬ್ಬರು ಮಕ್ಕಳ ಜತೆ ಭಾರತಕ್ಕೆ ಮರಳಿ ಬೆಂಗಳೂರಿನ ಆನೇಕಲ್‌ ತಾಲ್ಲೂಕಿನ ಗೋಪಸಂದ್ರದಲ್ಲಿ ನೆಲೆಸಿದ್ದಾರೆ.

‘ನನ್ನ ಅನುಮತಿ ಇಲ್ಲದೆ ಶಿಲ್ಪಾ ಮಕ್ಕಳನ್ನು ಕರೆದುಕೊಂಡು ಬಂದಿದ್ದಾರೆ’  ಎಂದು ಆಕ್ಷೇಪಿಸಿ ಪವನ್‌ ಅಮೆರಿಕದ ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಇದೇ ವೇಳೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ತಮ್ಮ ಸಂಬಂಧಿಯ ಮೂಲಕ ಶಿಲ್ಪಾ ಅವರ ಕ್ರಮವನ್ನು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಸೆ.26ರಂದು  ವಿಚಾರಣೆಗೆ ನಿಗದಿಪಡಿಸಿತ್ತು. ಇದೇ ವೇಳೆ ಪವನ್‌ ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಪವನ್‌ ಸಂಬಂಧಿಕರು ಸೂರ್ಯ ಸಿಟಿ ಪೊಲೀಸ್‌ ಠಾಣೆಗೆ ಮೌಖಿಕ ದೂರು ನೀಡಿದ್ದರು.

ಇದೇ ಆಧಾರದಲ್ಲಿ  ಪೊಲೀಸರು ಶಿಲ್ಪಾ ಅವರನ್ನು ಭಾನುವಾರ ಮಧ್ಯಾಹ್ನ (ಸೆ.26) ಬಂಧಿಸಿ ಕರೆದೊಯ್ದಿದ್ದರು. ಸೋಮವಾರ ಹೈಕೋರ್ಟ್‌ಗೆ ಹಾಜರುಪಡಿಸಿದ್ದರು.

ವಿಚಾರಣೆ ವೇಳೆ ಶಿಲ್ಪಾ ಪರ ವಕೀಲರು, ‘ಯಾವುದೇ ದೂರು ಅಥವಾ ಕೋರ್ಟ್ ಆದೇಶ ಇಲ್ಲದಿದ್ದರೂ ಪೊಲೀಸರು  ನಮ್ಮ ಕಕ್ಷಿದಾರರನ್ನು ಅಕ್ರಮವಾಗಿ ಬಂಧಿಸಿ ಮಡಿವಾಳದ ಸರ್ಕಾರಿ ಪುನರ್ವಸತಿ ಕೇಂದ್ರದಲ್ಲಿ ಇರಿಸಿದ್ದಾರೆ. ಇದರಿಂದ ಅವರು ಆಘಾತಕ್ಕೆ ಒಳಗಾಗಿದ್ದಾರೆ’ ಎಂದು ನ್ಯಾಯಪೀಠಕ್ಕೆ ದೂರಿದರು.

ಈ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿ ಇನ್‌ಸ್ಪೆಕ್ಟರ್‌ಗೆ ಛೀಮಾರಿ ಹಾಕಿದ ಪೀಠವು, ‘ಶಿಲ್ಪಾ ಅವರು ಮಾಡಿದ್ದ ತಪ್ಪೇನು? ಬಂಧನಕ್ಕೆ ನಿಮಗೆ ಅನುಮತಿ ನೀಡಿದವರು ಯಾರು? ಎಂದು ಕೇಳಿತು. ನಿಮ್ಮ ಈ ವರ್ತನೆಗೆ ನೀವು ಕಠಿಣ ಕ್ರಮ ಎದುರಿಸಬೇಕಾದೀತು’ ಎಂದೂ ಎಚ್ಚರಿಸಿತು.

ಇದಕ್ಕೆ ಉತ್ತರಿಸಿದ ಸರ್ಕಾರಿ ವಕೀಲರು ಇನ್‌ಸ್ಪೆಕ್ಟರ್‌ ಅವರಿಂದ ತಪ್ಪಾಗಿದೆ ಒಪ್ಪಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ಪೊಲೀಸರು  ಸಾರ್ವಜನಿಕರ ರಕ್ಷಣೆ ಮಾಡಬೇಕೇ ಹೊರತು ತಾವೇ ಕಾನೂನು ಎಂದು ತಿಳಿದು  ಅವರ ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ಹರಣ ಮಾಡಿದರೆ ಹೇಗೆ’ ಎಂದು ಪ್ರಶ್ನಿಸಿತು. ‘ಏನೇ ಹೇಳುವುದಿದ್ದರೂ ಪ್ರಮಾಣ ಪತ್ರದ ಮೂಲಕ ಕೋರ್ಟ್‌ಗೆ ಎಲ್ಲ ವಿವರವನ್ನೂ ಸಲ್ಲಿಸಿ’ ಎಂದು ಸೂಚಿಸಿ ವಿಚಾರಣೆಯನ್ನು ಇದೇ 28ಕ್ಕೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.