ADVERTISEMENT

ಪ್ರತಿಭಟನೆ: ನಡೆಯದ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:50 IST
Last Updated 19 ಜನವರಿ 2017, 19:50 IST
ಆರ್‌.ಟಿ.ನಗರದ ಶ್ರೀರಾಮ್‌ ವೈಟ್‌ಹೌಸ್‌ ಅಪಾರ್ಟ್‌ಮೆಂಟ್‌ನಲ್ಲಿ ತೆರವು ಕಾರ್ಯಾಚರಣೆ ನಡೆಸದಂತೆ ನಿವಾಸಿಗಳು ತಡೆಯೊಡ್ಡಿದರು  –ಪ್ರಜಾವಾಣಿ ಚಿತ್ರ
ಆರ್‌.ಟಿ.ನಗರದ ಶ್ರೀರಾಮ್‌ ವೈಟ್‌ಹೌಸ್‌ ಅಪಾರ್ಟ್‌ಮೆಂಟ್‌ನಲ್ಲಿ ತೆರವು ಕಾರ್ಯಾಚರಣೆ ನಡೆಸದಂತೆ ನಿವಾಸಿಗಳು ತಡೆಯೊಡ್ಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಲಾಗಿದೆ ಎಂದು ದೂರಲಾದ ಆರ್‌.ಟಿ.ನಗರದ ಶ್ರೀರಾಮ್‌ ವೈಟ್‌ಹೌಸ್‌ ಅಪಾರ್ಟ್‌ಮೆಂಟ್‌ ಕಟ್ಟಡದ ಕಾಂಪೌಂಡ್‌ ಭಾಗವನ್ನು ತೆರವುಗೊಳಿಸಲು ತೆರಳಿದ್ದ ಬಿಬಿಎಂಪಿ ಅಧಿಕಾರಿಗಳು ನಿವಾಸಿಗಳ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ವಾಪಸ್‌ ಬಂದ ಘಟನೆ ಗುರುವಾರ ನಡೆಯಿತು.

9.5 ಗುಂಟೆಯಷ್ಟು ರಾಜಕಾಲುವೆ ಅತಿಕ್ರಮಿಸಿ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಕಂದಾಯ ಅಧಿಕಾರಿಗಳು ವರದಿ ನೀಡಿದ್ದರು. ಹೀಗಾಗಿ ಅತಿಕ್ರಮಿತ ಭಾಗವನ್ನು ತೆರವುಗೊಳಿಸಲು ಬಿಬಿಎಂಪಿ ಸಿಬ್ಬಂದಿ ತೆರಳಿದ್ದರು. ಆದರೆ, ಅಲ್ಲಿನ ನಿವಾಸಿಗಳು ಬಿಬಿಎಂಪಿ ಹಾಗೂ ಬಿಎಂಟಿಎಫ್‌ ಸಿಬ್ಬಂದಿಗೆ ಅತಿಕ್ರಮಿತ ಭಾಗವನ್ನು ತೆರವುಗೊಳಿಸಲು ಅವಕಾಶ ನೀಡಲಿಲ್ಲ. ಅರ್ಥ್‌ ಮೂವರ್‌ ಮುಂಭಾಗದಲ್ಲಿ ಮಲಗಿ ಪ್ರತಿಭಟಿಸಿದರು.

ಆರ್‌.ಟಿ.ನಗರ ಠಾಣೆಯ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಅವರು ಹಿಡಿದ ಪಟ್ಟು ಸಡಿಲಿಸಲಿಲ್ಲ. ಗಲಾಟೆ ಜೋರಾದಾಗ ಸ್ಥಳಕ್ಕೆ ಬಂದ ಶಾಸಕ ವೈ.ಎ. ನಾರಾಯಣಸ್ವಾಮಿ, ‘ಯಾವ ಸರ್ವೆ ಆಧಾರದ ಮೇಲೆ ಈ ಕ್ರಮ ಕೈಗೊಳ್ಳುತ್ತಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು. ಪ್ರತಿಭಟನೆ ತೀವ್ರಗೊಂಡಿದ್ದರಿಂದ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸದೆ ವಾಪಸ್‌ ಹೋದರು. ‘ಮರು ಸರ್ವೆ ನಡೆಸಿದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ರಾಜಕಾಲುವೆ) ಸಿದ್ದೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.