ADVERTISEMENT

ಪ್ರತಿಮೆ ಅನಾವರಣದ ದಿನವೇ ಸ್ಥಳಾಂತರದ ಘೋಷಣೆ

ಒರಾಯನ್‌ ಮಾಲ್‌ ಪಕ್ಕದಲ್ಲಿ ಗಾಂಧಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 19:36 IST
Last Updated 30 ಜನವರಿ 2015, 19:36 IST

ಬೆಂಗಳೂರು: ನಗರದ ಡಾ.ರಾಜ್‌­ಕುಮಾರ್‌ ರಸ್ತೆಯ ಬ್ರಿಗೇಡ್‌ ಗೇಟ್‌ವೇ ಸಂಸ್ಥೆ ಆವರಣದಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆ­ಯನ್ನು ಅನಾವರಣ ಮಾಡಲಾಯಿತು. ಮಹಾತ್ಮ ಗಾಂಧಿ ಅವರ ಮೊಮ್ಮಗನಾದ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರು ಪ್ರತಿಮೆಯನ್ನು ಅನಾವರಣ­ಗೊಳಿಸಿದರು.

ವರ್ಲ್ಡ್ ಟ್ರೇಡ್ ಸೆಂಟರ್, ಶೆರಟಾನ್ ಹೋಟೆಲ್ ಹಾಗೂ ಒರಾಯನ್ ಮಾಲ್ ನಡುವಣ ಆವರಣದಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ೧7 ಅಡಿ ಎತ್ತರದ ಈ ಪ್ರತಿಮೆಯನ್ನು ಕಲಬುರ್ಗಿಯ ಶಿಲ್ಪಿ ಮಾನಯ್ಯ ಎನ್‌. ಬಡಿಗೇರ್‌ ಹಾಗೂ ಅವರ 30 ಜನರ ತಂಡ ನಿರ್ಮಿಸಿದೆ.

ಹಿತ್ತಾಳೆ ಮತ್ತು ತಾಮ್ರದ ಮಿಶ್ರ­ಲೋಹದಿಂದ ತಯಾರಿಸಿದ ಈ ಪ್ರತಿ­ಮೆ ತೂಕ ೧೦೦೦ ಕೆ.ಜಿಯಷ್ಟಿದೆ. ಅದನ್ನು ನಿರ್ಮಿಸಲು ಒಂದು ವರ್ಷ ತೆಗೆದು­ಕೊಳ್ಳಲಾಗಿದೆ. ಆರು ಅಡಿ ಎತ್ತರದ ಗ್ರಾನೈಟ್‌ ಪೀಠದ ಮೇಲೆ 11 ಅಡಿ ಎತ್ತರದ ಪ್ರತಿಮೆಯನ್ನು ನಿಲ್ಲಿಸಲಾಗಿದೆ.  ಹಿರಿಯ ವಿಜ್ಞಾನಿ ಡಾ.ಕೆ. ಕಸ್ತೂರಿ­ರಂಗನ್ ಹಾಗೂ ಬ್ರಿಗೇಡ್‌ ಗ್ರೂಪ್‌ನ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಜೈಶಂಕರ್ ಸಮಾರಂಭದಲ್ಲಿ ಹಾಜರಿದ್ದರು.

ಪ್ರತಿಮೆ ಸ್ಥಳಾಂತರಕ್ಕೆ ನಿರ್ಧಾರ
ಬ್ರಿಗೇಡ್‌ ಗೇಟ್‌ವೇ ಸಂಸ್ಥೆ ಆವರಣದಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಿದ ಸ್ಥಳದ ಪಕ್ಕದಲ್ಲೇ ಬಾರ್‌ ಇದ್ದು, ಪ್ರತಿಮೆಯನ್ನು ಬೇರೆಡೆಗೆ ಸ್ಥಳಾಂತರಿ­ಸ­ಬೇಕು ಎಂದು ವಿವಿಧ ಸಂಘಟನೆಗಳು ಸಮಾರಂಭಕ್ಕೂ ಮುನ್ನ ಪ್ರತಿಭಟನೆ ನಡೆಸಿದವು.

ಸಂಘಟನೆಗಳ ಮುಖಂಡರು, ಬ್ರಿಗೇಡ್‌ ಗೇಟ್‌ವೇ ಸಂಸ್ಥೆ ಮುಖ್ಯಸ್ಥರು, ಪೊಲೀಸ್‌ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳ ಮಧ್ಯೆ ಸಂಧಾನ ಸಭೆ ನಡೆಯಿತು. ಪ್ರತಿಮೆಯನ್ನು ಈಗಿರುವ ಸ್ಥಳದಿಂದ ಕೊಲಂಬಿಯಾ ಆಸ್ಪತ್ರೆ ದ್ವಾರದ ಕಡೆಗೆ 15 ದಿನದಲ್ಲಿ ಸ್ಥಳಾಂತರ ಮಾಡುವ ನಿರ್ಧಾರಕ್ಕೆ ಬರಲಾ­ಯಿತು. ಬಳಿಕ ಸಮಾರಂಭ ನಡೆಸಲು ಅವಕಾಶ ಮಾಡಿಕೊಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.