ADVERTISEMENT

ಪ್ರಥಮ್‌ಗೆ ನಿರೀಕ್ಷಣಾ ಜಾಮೀನು

ಕಿರುತೆರೆ ನಟ ಭುವನ್‌ನ ತೊಡೆ ಕಚ್ಚಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 19:48 IST
Last Updated 24 ಜುಲೈ 2017, 19:48 IST
ಪ್ರಥಮ್‌
ಪ್ರಥಮ್‌   

ಬೆಂಗಳೂರು: ಕಿರುತೆರೆ ನಟ ಭುವನ್‌ ಪೊನ್ನಣ್ಣ ಅವರ ತೊಡೆ ಕಚ್ಚಿದ್ದ ಪ್ರಕರಣದ ಆರೋಪಿ ‘ಬಿಗ್ ಬಾಸ್’ 4ನೇ ಆವೃತ್ತಿಯ ವಿಜೇತ ಪ್ರಥಮ್‌ಗೆ  2ನೇ ಎಸಿಜೆಎಂ ನ್ಯಾಯಾಲಯವು ಸೋಮವಾರ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.

ಮಧ್ಯಾಹ್ನ ನ್ಯಾಯಾಲಯಕ್ಕೆ ಬಂದಿದ್ದ ಪ್ರಥಮ್‌ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ‘ಸಮಾಜಕ್ಕೆ ನಿಮ್ಮಿಂದ ಉತ್ತಮ ಸಂದೇಶ ರವಾನೆಯಾಗಬೇಕು.  ಅದನ್ನು ಬಿಟ್ಟು ಈ ರೀತಿ  ಹುಚ್ಚಾಟ ಮಾಡುವುದು ಸರಿಯಲ್ಲ. ಇದು ಮುಂದುವರಿಯಬಾರದು’ ಎಂದು ತಾಕೀತು ಮಾಡಿದರು.

ಬಳಿಕ ₹5,000 ಶ್ಯೂರಿಟಿ ಹಾಗೂ ತನಿಖಾಧಿಕಾರಿ ಎದುರು ಹಾಜರಾಗಬೇಕು ಎಂದು ಹೇಳಿ ಜಾಮೀನು ಮಂಜೂರು ಮಾಡಿದರು. ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿದರು.

ತಲೆಮರೆಸಿಕೊಂಡಿದ್ದ ಪ್ರಥಮ್: ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ, ವಿಚಾರಣೆಗೆ ಹಾಜರಾಗುವಂತೆ ಇನ್‌ಸ್ಪೆಕ್ಟರ್‌ ನೋಟಿಸ್‌ ನೀಡಿದ್ದರು. ಆದರೆ, ಪ್ರಥಮ್‌ ಮೊಬೈಲ್ ಸ್ವಿಚ್ಡ್‌ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದರು. ಬಳಿಕ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.

‘ಆರೋಪಿಯು ನೇರವಾಗಿ ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾರೆ.  ನ್ಯಾಯಾಲಯದ ನಿರ್ದೇಶನದಂತೆ ಮುಂದುವರಿಯುತ್ತೇವೆ’ ಎಂದು ಪೊಲೀಸರು ತಿಳಿಸಿದರು.

ಸೋಮವಾರವೂ ಠಾಣೆಗೆ ಬಂದಿದ್ದ ಭುವನ್‌, ಕಚ್ಚಿದ್ದ ಗಾಯಕ್ಕೆ ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಗ್ಗೆ ಪೊಲೀಸರಿಗೆ ದಾಖಲೆನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಭುವನ್‌, ‘ಯಾವುದೇ ಕಾರಣಕ್ಕೂ ದೂರು ಹಿಂಪಡೆಯುವುದಿಲ್ಲ. ಆತ (ಪ್ರಥಮ್‌) ಗಿಮಿಕ್‌ಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದು
ಎಲ್ಲರಿಗೂ ಗೊತ್ತಿದೆ. ಧಾರಾವಾಹಿ ಚಿತ್ರೀಕರಣ ವೇಳೆ ಅಶ್ಲೀಲ ಜೋಕ್‌ ಹೇಳಿ ಪ್ರಥಮ್ ಮುಜುಗರ ಉಂಟು ಮಾಡುತ್ತಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.