ADVERTISEMENT

ಪ್ರವಾಸಿ ತಾಣವಾಗಿ ‘ಕವಳಾ’ ಗುಹೆ

ಸುಪ್ರೀಂಕೋರ್ಟ್‌ ಆದೇಶದ ಉಲ್ಲಂಘನೆ: ತಜ್ಞರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 20:01 IST
Last Updated 29 ಜುಲೈ 2015, 20:01 IST

ಬೆಂಗಳೂರು:  ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ಪ್ರದೇಶದ ಕವಳಾ ಗುಹೆಗಳನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಈ ತೀರ್ಮಾನಕ್ಕೆ ವನ್ಯಜೀವಿ ತಜ್ಞರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ರಾಜ್ಯ ಸರ್ಕಾರ ನೂತನ ಪ್ರವಾಸೋದ್ಯಮ ನೀತಿಯನ್ನು (2015–2020) ಜುಲೈ 16ರಂದು ಬಿಡುಗಡೆ ಮಾಡಿದೆ. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸಲು ಆರು ಕಾರ್ಪೊರೇಟ್‌ ಕಂಪೆನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ.

ಈ ಕಂಪೆನಿಗಳು ತಾವು ದತ್ತು ಪಡೆದಿರುವ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪಡಿಸಲಿದ್ದು, ಐದು ವರ್ಷಗಳ ಕಾಲ ಆರ್ಥಿಕ ಸಹಾಯ ನೀಡಲಿವೆ.

ಕವಳಾ ಗುಹೆಗಳನ್ನು ಅಭಿವೃದ್ಧಿ ಪಡಿಸಲು ದಾಂಡೇಲಿಯ ವೆಸ್ಟ್‌ಕೋಸ್ಟ್‌ ಕಾಗದದ ಕಾರ್ಖಾನೆ ಜತೆಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ದಾಂಡೇಲಿ ವನ್ಯಜೀವಿ ಧಾಮದ 475 ಚ.ಕಿ.ಮೀ. ಹಾಗೂ ಅಣಶಿ ರಾಷ್ಟ್ರೀಯ ಉದ್ಯಾನದ 340 ಚ.ಕಿ.ಮೀ. ಸೇರಿಸಿ ಒಟ್ಟೂ 819 ಚ.ಕಿ.ಮೀ. ‍ಪ್ರದೇಶವನ್ನು ‘ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ಪ್ರದೇಶದ ಹೃದಯಭಾಗದ ಹಾಗೂ  ಅಪಾಯದಂಚಿನಲ್ಲಿರುವ ಆವಾ ಸಸ್ಥಾನ’ ಎಂದು ರಾಜ್ಯ ಸರ್ಕಾರ 2007ರ ಡಿಸೆಂಬರ್‌ 20ರಂದು ಘೋಷಿಸಿದೆ. ಕುಳಗಿ ವನ್ಯಜೀವಿ ವಲಯದಲ್ಲಿರುವ ಕವಳಾ ಗುಹೆಗಳು ಇಲ್ಲಿವೆ.

ಆದೇಶಕ್ಕೆ ವಿರುದ್ಧ: ‘ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸೋದ್ಯಮದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅವಕಾಶ ಇಲ್ಲ’ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ 2012ರ ಅಕ್ಟೋಬರ್‌ನಲ್ಲಿ ನಿರ್ದೇಶನ ನೀಡಿದೆ. ‘ತನ್ನ ಅನುಮತಿ ಇಲ್ಲದೆ ವನ್ಯಜೀವಿ ಧಾಮಗಳಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ‘ಕವಳಾ ಗುಹೆಗಳನ್ನು ಅಭಿವೃದ್ಧಿಪಡಿಸಿ ದರೆ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ’ ಎಂದು ವನ್ಯ ಜೀವಿ ತಜ್ಞರು ಎಚ್ಚರಿಸಿದ್ದಾರೆ.

‘ಅಣಶಿ ಹುಲಿ ಸಂರಕ್ಷಿತ ಪ್ರದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕವಳಾ ಪ್ರದೇಶದಲ್ಲೇ 2008ರಲ್ಲಿ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಹುಲಿ ಸೆರೆಯಾಗಿತ್ತು. ಕವಳಾ ಗುಹೆಗಳಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು,  ಪಕ್ಕದಲ್ಲೇ ನಾಗ ಝರಿ ಪ್ರದೇಶದಲ್ಲಿ ಕಾಳಿ ವಿದ್ಯುತ್‌ ಯೋಜನೆ ಸಹ ಇದೆ. ಇದರಿಂದ ವನ್ಯ ಜೀವಿಗಳಿಗೆ ಸಾಕಷ್ಟು ತೊಂದರೆಯಾ ಗುತ್ತಿದೆ’ಎಂದು ವನ್ಯಜೀವಿ ಹೋರಾಟ ಗಾರರೊಬ್ಬರು ಗಮನ ಸೆಳೆದಿದ್ದಾರೆ.

ವನ್ಯಜೀವಿ: ಅನುಮತಿ ಪಡೆದಿಲ್ಲ
ಹುಲಿ ಸಂರಕ್ಷಿತ ಪ್ರದೇಶದಲ್ಲಿ ಯಾವುದೇ ಚಟುವಟಿಕೆ ಕೈಗೆತ್ತಿ ಕೊಳ್ಳುವ ಮುನ್ನ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್‌ 33ರ ಅಡಿಯಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಪಡೆಯ ಬೇಕಿದೆ.

ಆದರೆ, ಇಲ್ಲಿ ಅನುಮತಿ ಪಡೆದಿಲ್ಲ. ಕಾನೂನಿನ  ಸ್ಪಷ್ಟ ಉಲ್ಲಂಘನೆ ಮಾಡಲಾಗಿದೆ’ ಎಂದು ‘ವೈಲ್ಡ್‌ಲೈಫ್ ಫಸ್ಟ್‌್್’ನ ವ್ಯವಸ್ಥಾಪಕ ಟ್ರಸ್ಟಿ ಪ್ರವೀಣ್‌ ಭಾರ್ಗವ್‌ ತಿಳಿಸಿದರು.

‘ಪರಿಸರ ಸೂಕ್ಷ್ಮ ಪ್ರದೇಶಗಳ ಅಭಿವೃದ್ಧಿ ಹೊಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವುದು ತಪ್ಪು. ಈ ಸಂಸ್ಥೆಗಳಿಗೆ ಪರಿಸರದ ಕಾಳಜಿ ಇರುವುದಿಲ್ಲ.
ಕುದುರೆಮುಖ ಉದ್ಯಾನದ ಉದಾಹರಣೆ ನಮ್ಮ ಕಣ್ಣ ಮುಂದೆ ಇದೆ. ಮತ್ತೆ ಮತ್ತೆ ಸರ್ಕಾರ ತಪ್ಪು ಹೆಜ್ಜೆ ಇಡುತ್ತಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.