ADVERTISEMENT

ಬಲವಂತದ ಅಸ್ವಾಭಾವಿಕ ಲೈಂಗಿಕ ಕ್ರಿಯೆ

ಇಬ್ಬರು ಬಿಪಿಒ ಉದ್ಯೋಗಿಗಳ ಸುಲಿಗೆ: ಮೂವರು ಕ್ಯಾಬ್ ಚಾಲಕರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 19:57 IST
Last Updated 7 ಅಕ್ಟೋಬರ್ 2015, 19:57 IST

ಬೆಂಗಳೂರು: ಇಬ್ಬರು ಬಿಪಿಒ ಉದ್ಯೋಗಿಗಳನ್ನು ಸುಲಿಗೆ ಮಾಡಿ, ಅವರೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಮೂವರು ಕ್ಯಾಬ್ ಚಾಲಕರನ್ನು ಮೈಕೊ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಮನಗರದ ಸತೀಶ (24), ಕನಕಪುರದ ಕಿರಣ್ (25) ಹಾಗೂ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸತೀಶ (25) ಬಂಧಿತರು.

ಕಾಡಬೀಸನಹಳ್ಳಿಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಪುರುಷ ಉದ್ಯೋಗಿಗಳು, ಸೆ. 30ರ ಬೆಳಿಗ್ಗೆ  2.15ರ ಸುಮಾರಿಗೆ ಕಂಪೆನಿಯ ಟೆಂಪೊ ಟ್ರಾವೆಲರ್‌ನಲ್ಲಿ (ಟಿ.ಟಿ) ಮನೆಗೆ ಹೋಗುತ್ತಿದ್ದರು. ಮೈಕೊ ಲೇಔಟ್‌ನ 16ನೇ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ ಟಿ.ಟಿ ಚಾಲಕ, ಎದುರಿನ ವೆರಿಟೊ ಕಾರನ್ನು ಹಿಂದಿಕ್ಕಿದ್ದಾನೆ.

ಇದೇ ಕಾರಣಕ್ಕಾಗಿ ಟಿ.ಟಿಯನ್ನು ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿರುವ ಸತೀಶ ಮತ್ತು ಕಿರಣ್, ‘ನಮ್ಮ ಕಾರನ್ನೇ ಹಿಂದಿಕ್ಕುತ್ತಿಯಾ? ಹೈಬೀಮ್ ಹಾಕಿ ಗಾಡಿ ಓಡಿಸುತ್ತಿಯಾ’ ಎಂದು ಚಾಲಕನಿಗೆ ಬೈದು, ಹಲ್ಲೆ ನಡೆಸಿದ್ದಾರೆ.

ಆಗ ತಡೆಯಲು ಮುಂದಾದ ಉದ್ಯೋಗಿಗಳನ್ನೂ ಹೊಡೆದು ನಂತರ ಟಿ.ಟಿಗೆ ತಾವೂ ಹತ್ತಿಕೊಂಡು ಚಾಲಕನಿಗೆ ಜೆ.ಪಿ. ನಗರದ ಕಡೆಗೆ ಹೋಗುವಂತೆ ಸೂಚಿಸಿದ್ದಾರೆ.

ಟಿ.ಟಿಯಲ್ಲಿ ಇದ್ದವರ ಎಟಿಎಂ ಕಾರ್ಡ್ ಕಸಿದು ಎಟಿಎಂ ಘಟಕದ ಬಳಿ ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದಾರೆ. ಅಲ್ಲಿ ಹಣ ತೆಗೆಯಲು ಯತ್ನಿಸಿದ್ದಾರೆ.  ಅಲ್ಲಿ ಒಂದರಲ್ಲಿ ಹಣ ಸಿಕ್ಕಿಲ್ಲ. ಮತ್ತೊಂದರಲ್ಲಿ ₹ 300 ಮಾತ್ರ ದೊರೆತಿದೆ.

ಅಲ್ಲಿಂದ ಜೆ.ಪಿ. ನಗರದ ರಾಗಿಗುಡ್ಡದ ಕಡೆಗೆ ಹೋಗುವಂತೆ ಚಾಲಕನಿಗೆ ಸೂಚಿಸಿರುವ ಆರೋಪಿಗಳು, ತಮ್ಮ ಸ್ನೇಹಿತ ಸತೀಶನಿಗೆ ಕರೆ ಮಾಡಿ, ‘ನಮ್ಮ ಕಾರು ಕೆಟ್ಟಿದ್ದು, ಕೂಡಲೇ ರಾಗಿಗುಡ್ಡದ ಹತ್ತಿರ ಬಾ’ ಎಂದಿದ್ದಾರೆ. ಅಂತೆಯೇ ಆತ ಇಂಡಿಕಾ ಕಾರಿನಲ್ಲಿ ಸ್ಥಳಕ್ಕೆ ಬಂದಿದ್ದಾನೆ.

ಆಗ ಮೂವರೂ ಸೇರಿ ಚಾಲಕ ಮತ್ತು ಉದ್ಯೋಗಿಗಳ ಬಳಿ ಇದ್ದ 3 ಮೊಬೈಲ್, ಒಂದು ವಾಚ್‌, ತಲಾ ಒಂದು ಬೆಳ್ಳಿ ಉಂಗುರ ಹಾಗೂ ಕೈಕಡಗವನ್ನು ದೋಚಿ 4 ಗಂಟೆ ಸುಮಾರಿಗೆ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಬಳಿಕ ಸುಧಾರಿಸಿಕೊಂಡು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದ ಉದ್ಯೋಗಿಗಳು, ಮಾರನೆಯ ದಿನ (ಸೆಪ್ಟೆಂಬರ್ 30) ಠಾಣೆಗೆ ಬಂದು ದೂರು ಕೊಟ್ಟರು.

ದೂರಿನಲ್ಲಿ ಆರೋಪಿಗಳು ಪರಾರಿಯಾದ ಇಂಡಿಕಾ ಕಾರಿನ ನೋಂದಣಿ ಸಂಖ್ಯೆಯನ್ನು ದಾಖಲಿಸಿದ್ದರು. ಇದರೊಂದಿಗೆ ಅವರು ನೀಡಿದ ಹೇಳಿಕೆಗಳು ಮತ್ತು ಕೆಲ ಸ್ಥಳಗಳ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಮಾರನೆಯ ದಿನ ಆರೋಪಿಗಳನ್ನು ಬಂಧಿಸಲಾಯಿತು.
ಘಟನೆ ಸಂಬಂಧ ದೂರುದಾರರು ಮತ್ತು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್‌ 364 (ಹಣಕ್ಕಾಗಿ ಅಪಹರಣ) ಹಾಗೂ 394ರ (ದರೋಡೆ ಮಾಡುವಾಗ ಸ್ವ ಇಚ್ಛೆಯಿಂದ ಗಾಯಗೊಳಿಸುವುದು) ಹಾಗೂ 377 (ಅಸ್ವಾಭಾವಿಕ ಲೈಂಗಿಕ ಕ್ರಿಯೆ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮೊಬೈಲ್‌ನಲ್ಲಿ ಚಿತ್ರೀಕರಣ
ಟಿ.ಟಿ ಹತ್ತಿಕೊಂಡ ನಂತರ, ಮೂವರಿಗೂ ಥಳಿಸಿರುವ ಆರೋಪಿಗಳು, ನಂತರ ಜೆ.ಪಿ. ನಗರದ ಉದ್ಯಾನವೊಂದಕ್ಕೆ ಕರೆದೊಯ್ದಿದ್ದಾರೆ. ನಂತರ ಅವರ ಬಟ್ಟೆ ಕಳಚಿಸಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಅಲ್ಲದೆ, ಬೆಲ್ಟ್‌ನಿಂದ ಹೊಡೆದಿದ್ದಾರೆ ಎಂದು ಪೊಲೀಸರು ಹೇಳಿದರು.

ಮೊಬೈಲ್‌ನಲ್ಲಿ ಚಿತ್ರೀಕರಣ: ಆರೋಪಿಗಳು ಉದ್ಯೋಗಿಗಳ ಜತೆ ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುವ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಪರಸ್ಪರ ಚಿತ್ರೀಕರಿಸಿಕೊಂಡಿದ್ದರು. ಅಲ್ಲದೆ, ಪೊಲೀಸರಿಗೆ ದೂರು ಕೊಟ್ಟರೆ, ಈ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದರು.

ಮರ್ಯಾದೆಗೆ ಅಂಜಿದ್ದ ಉದ್ಯೋಗಿಗಳು ತಾವು ಕೊಟ್ಟ ದೂರಿನಲ್ಲಿ, ಆ ಕುರಿತು ಏನನ್ನು ಹೇಳದೆ, ಕೇವಲ ಸುಲಿಗೆ ಮಾಡಿದ್ದಾರೆ ಎಂದು ತಿಳಿಸಿದ್ದರು. ಆದರೆ, ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿರುವ ವಿಷಯವನ್ನು ಬಾಯ್ಬಿಟ್ಟರು ಎಂದು ಪೊಲೀಸರು ಹೇಳಿದರು.

ಮುಖ್ಯಾಂಶಗಳು
* ಕಾರು ಹಿಂದಿಕ್ಕಿದ್ದಕ್ಕೆ ಟಿ.ಟಿ ತಡೆದು ಜಗಳ ತೆಗೆದರು

* ಉದ್ಯೋಗಿಗಳನ್ನು ಒಂದೂ ಮುಕ್ಕಾಲು ತಾಸು ವಶದಲ್ಲಿಟ್ಟುಕೊಂಡಿದ್ದರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.