ADVERTISEMENT

ಬಳಸಿದ ಎಣ್ಣೆಯಿಂದ ಜೈವಿಕ ಡೀಸೆಲ್‌!

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2016, 19:30 IST
Last Updated 5 ಫೆಬ್ರುವರಿ 2016, 19:30 IST
ಬಳಸಿದ ಎಣ್ಣೆಯಿಂದ ಜೈವಿಕ ಡೀಸೆಲ್‌!
ಬಳಸಿದ ಎಣ್ಣೆಯಿಂದ ಜೈವಿಕ ಡೀಸೆಲ್‌!   

ಬೆಂಗಳೂರು: ಬಳಕೆ ಮಾಡಿದ ಅಡುಗೆ ಎಣ್ಣೆಯಿಂದಲೂ ಜೈವಿಕ ಡೀಸೆಲ್‌ ತಯಾರಿಸಲು ಲಂಡನ್‌ನ ಸಂಸ್ಥೆಯೊಂದು ಮುಂದೆ ಬಂದಿದೆ ಎಂದು ಸಚಿವ ಕೆ.ಜೆ.ಜಾರ್ಜ್‌ ಶುಕ್ರವಾರ ಇಲ್ಲಿ ತಿಳಿಸಿದರು.

‘ಹೋಟೆಲ್‌ ಸೇರಿದಂತೆ ಮನೆಗಳಲ್ಲಿ ಕೂಡ ಅಡುಗೆ ಎಣ್ಣೆ ಬಳಸಿದ ನಂತರ ಅದನ್ನು ತ್ಯಾಜ್ಯದ ರೂಪದಲ್ಲಿ ಹೊರ ಹಾಕುತ್ತೇವೆ. ಹಾಗೆ ಹಾಕುವುದರಿಂದ ಪರಿಸರದ ಮೇಲೂ ಪರಿಣಾಮ ಬೀರುತ್ತದೆ. ಅದರ ಬದಲು, ಆ ಎಣ್ಣೆಯನ್ನೇ ಜೈವಿಕ ಡೀಸೆಲ್‌ ಮಾಡಬಹುದು. ಅಂತಹ ತೈಲದಿಂದ ಲಂಡನ್‌ನಲ್ಲಿ 25 ಬಸ್‌ಗಳನ್ನು ಓಡಿಸುತ್ತಿದ್ದು, ಪರಿಸರ ಸ್ನೇಹಿಯಾಗಿವೆ ಎಂಬುದನ್ನು ಅಲ್ಲಿಂದ ಬಂದಿರುವ ಪ್ರತಿನಿಧಿಗಳು ವಿವರಿಸಿದ್ದಾರೆ’ ಎಂದು ಜಾರ್ಜ್‌  ತಿಳಿಸಿದರು.

ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಬಂದಿದ್ದ ಲಂಡನ್ ಮೂಲದ ಅಪ್‌ಟೌನ್‌ ಆಯಿಲ್‌ ಸಂಸ್ಥೆಯ ಪ್ರತಿನಿಧಿಗಳು ಜಾರ್ಜ್‌ ಜತೆ ಶುಕ್ರವಾರ ಚರ್ಚೆ ನಡೆಸಿದರು.  ಈ ಸಂದರ್ಭದಲ್ಲಿ ಭಾರತದಲ್ಲಿನ ಇಂಗ್ಲೆಂಡ್‌ ರಾಯಭಾರ ಕಚೇರಿಯ ಅಧಿಕಾರಿಗಳು ಕೂಡ ಇದ್ದರು. ಇದೊಂದು ಸಣ್ಣ ಉದ್ಯಮ. ಹೀಗಾಗಿ ಅದಕ್ಕೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.

ಸಹಭಾಗಿತ್ವ: ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಸಂಬಂಧ ಜಪಾನ್‌ನ ಯಕೊಮಾ ನಗರ ಪಾಲಿಕೆ ಜತೆಗೂ ಮಾತುಕತೆ ನಡೆಸಲಾಗಿದೆ. 100 ಟನ್‌ ಸಾಮರ್ಥ್ಯದ ತ್ಯಾಜ್ಯ ವಿಲೇವಾರಿ ಘಟಕವನ್ನು ಪ್ರಾಯೋಗಿಕವಾಗಿ ಸ್ಥಾಪಿಸಲು ಅಲ್ಲಿನ ಪಾಲಿಕೆ ಮುಂದೆ ಬಂದಿದೆ. ಅದನ್ನು ಪರಿಶೀಲಿಸಲಾಗುವುದು ಎಂದು ಅವರು ವಿವರಿಸಿದರು.

ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಸಂಬಂಧ ಅನೇಕ ವಿದೇಶಿ ಸಂಸ್ಥೆಗಳು ಮುಂದೆ ಬಂದಿವೆ. ಆದರೆ, ಎಲ್ಲ ಸಂಸ್ಥೆಗಳಿಗೂ ಕೊಡಲು ಜಾಗ ಇಲ್ಲ. ಯಾವುದು ಹೆಚ್ಚು ಸೂಕ್ತ ಎಂಬುದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಜರ್ಮನಿ ಮೂಲದ ಕಂಪೆನಿಗಳು ಕಡಿಮೆ ಭೂಮಿ ಕೇಳುತ್ತಿದ್ದು, ಅಂತಹದ್ದಕ್ಕೇ ಹೆಚ್ಚು ಆಸಕ್ತಿ ತೋರುತ್ತಿದ್ದೇವೆ ಎಂದರು.

ಟೆಂಡರ್‌ ಶೂರ್‌: 50 ರಸ್ತೆ ಅಭಿವೃದ್ಧಿ
ಬೆಂಗಳೂರು:
ಟೆಂಡರ್‌ ಶೂರ್‌ ಯೋಜನೆಯಡಿ ನಗರದ ಇನ್ನೂ 50 ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು. ಈ ಸಂಬಂಧ ಮಹಾನಗರ ಪಾಲಿಕೆಯು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದು, ಆದಷ್ಟು ಬೇಗ ಅದಕ್ಕೆ ಒಪ್ಪಿಗೆ ನೀಡಲಾಗುವುದು ಎಂದರು.

ಮೊದಲ ಹಂತದಲ್ಲಿ ಕೈಗೆತ್ತಿಕೊಂಡಿರುವ ರಸ್ತೆಗಳಿಗೆ ಹೊಂದಿಕೊಂಡೇ ಹೊಸ ರಸ್ತೆಗಳು ಇರುತ್ತವೆ. ಯೋಜನೆಗೆ ಒಪ್ಪಿಗೆ ಸಿಕ್ಕ ನಂತರ ರಸ್ತೆಗಳ ಹೆಸರು ಪ್ರಕಟಿಸಲಾಗುವುದು. ಪ್ರಮುಖವಾಗಿ ನಗರದ ಕೇಂದ್ರ ಭಾಗದಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಇದೆ ಎಂದು ಹೇಳಿದರು.

ಎಂ.ಜಿ.ರಸ್ತೆಯನ್ನು ಟೆಂಡರ್ ಶೂರ್‌ನಲ್ಲಿ ಅಭಿವೃದ್ದಿಪಡಿಸಲಾಗುತ್ತದೆ. ಆದರೆ, ಅದು ಆಗುವುದಕ್ಕೆ ಇನ್ನೂ ಸಮಯ ಹಿಡಿಯುತ್ತದೆ ಎಂಬ ಕಾರಣಕ್ಕೆ ಹಾಳಾದ ಪಾದಚಾರಿ ಮಾರ್ಗದ ರಿಪೇರಿ ಮತ್ತು ರಸ್ತೆಗೆ ಡಾಂಬರು ಹಾಕುವ ಕೆಲಸ ಕೈಗೆತ್ತಿಕೊಂಡಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮೊದಲ ಹಂತದಲ್ಲಿ ಕೆಲವು ಕಡೆ ಟೆಂಡರ್‌ ಶೂರ್‌ ಸರಿಯಾಗಿ ಅನುಷ್ಠಾನ ಆಗಿಲ್ಲ ಎನ್ನುವ ದೂರುಗಳು ಇವೆ. ಅವೆಲ್ಲವನ್ನೂ 2ನೇ ಹಂತದಲ್ಲಿ ಸರಿ ಮಾಡುತ್ತೇವೆ. ಯಾವುದೇ ತೊಂದರೆ ಆಗದ ರೀತಿಯಲ್ಲಿ ಯೋಜನೆ ಅನುಷ್ಠಾನ ಮಾಡುತ್ತೇವೆ. ಗುಣಮಟ್ಟ ಕೂಡ ಕಾಪಾಡುತ್ತೇವೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT