ADVERTISEMENT

ಬಸ್‌ ಹರಿದು ಮೆಕ್ಯಾನಿಕ್‌ ಸಾವು

​ಪ್ರಜಾವಾಣಿ ವಾರ್ತೆ
Published 23 ಮೇ 2016, 19:34 IST
Last Updated 23 ಮೇ 2016, 19:34 IST

ಬೆಂಗಳೂರು: ಕೆ.ಆರ್.ಪುರದ ಮೇಲ್ಸೇತುವೆ ಬಳಿ ಸೋಮವಾರ ಬೆಳಿಗ್ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್‌ ಸವಾರ ಸುಭಾಷ್‌ (21) ಎಂಬುವವರು ಮೃತಪಟ್ಟಿದ್ದಾರೆ.

ದೇವಸಂದ್ರದ ಸುಭಾಷ್‌, ಮೆಕ್ಯಾನಿಕ್ ಆಗಿದ್ದರು. ಅವರು ಬಾಬೂಸಾಪಾಳ್ಯದ ಗ್ಯಾರೇಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸುಭಾಷ್, ಬೆಳಿಗ್ಗೆ 8.30ರ ಸುಮಾರಿಗೆ ಬೈಕ್‌ನಲ್ಲಿ ಗ್ಯಾರೇಜ್‌ಗೆ ಹೋಗುತ್ತಿದ್ದರು. ಈ ವೇಳೆ ಹೊಸಕೋಟೆ ಕಡೆಯಿಂದ ಬಂದ ಬಸ್, ಮೇಲ್ಸೇತುವೆ ಬಳಿ ಸುಭಾಷ್‌ ಅವರ ಬೈಕ್‌ಗೆ ಡಿಕ್ಕಿ ಹೊಡೆಯಿತು.

ಆಗ ಕೆಳಗೆ ಬಿದ್ದ ಸುಭಾಷ್ ಅವರ ಮೇಲೆ ಬಸ್‌ನ ಹಿಂಭಾಗದ ಚಕ್ರ ಹರಿದಿದೆ. ಕೂಡಲೇ ಸ್ಥಳೀಯರು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು  ಮೃತಪಟ್ಟರು ಎಂದು ಕೆ.ಆರ್.ಪುರ ಸಂಚಾರ ಪೊಲೀಸರು ತಿಳಿಸಿದರು. ಘಟನೆ ನಂತರ ಬಸ್‌ ಚಾಲಕ ಪರಾರಿಯಾಗಿದ್ದಾನೆ. ಬಸ್‌ ಜಪ್ತಿ ಮಾಡಲಾಗಿದೆ.

ಲಾರಿ ಡಿಕ್ಕಿ–ಕಾರ್ಪೆಂಟರ್ ಸಾವು:  ಚಿಕ್ಕಜಾಲ ಸಮೀಪದ ರಾಜಾನುಕುಂಟೆ ರಸ್ತೆಯಲ್ಲಿ ಭಾನುವಾರ ಸಂಜೆ ಲಾರಿ ಡಿಕ್ಕಿ ಹೊಡೆದು ಬೈಕ್‌ ಸವಾರ ಮಣಿಕಂಠಾಚಾರ್ (24) ಎಂಬುವವರು ಮೃತಪಟ್ಟಿದ್ದಾರೆ.

ವಿನಾಯಕನಗರದ ಮಣಿಕಂಠಾ ಚಾರ್, ಕಾರ್ಪೆಂಟರ್ ಆಗಿದ್ದರು. ಅವರು ಸಂಜೆ 7 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ರಾಜಾನುಕಂಟೆ ರಸ್ತೆಯ ಗಂಗಾನಗರ ಬಳಿ ಹೋಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಆಗ ಕೆಳಗೆ ಬಿದ್ದ ಅವರ ಮೇಲೆ ಲಾರಿಯ ಹಿಂಭಾಗದ ಚಕ್ರ ಹರಿದಿದ್ದರಿಂದ ಅವರು ಸ್ಥಳದಲ್ಲೇ ಮೃತಟ್ಟಿದ್ದಾರೆ. ಘಟನೆ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.

ಕಣ್ಣುಗಳು ದಾನ
ಅಪಘಾತದಲ್ಲಿ ಮೃತಪಟ್ಟ ಸುಭಾಷ್‌ ಅವರ ಕಣ್ಣುಗಳನ್ನು ಅವರ ಪೋಷಕರು ಬೌರಿಂಗ್ ಆಸ್ಪತ್ರೆಗೆ ದಾನ ಮಾಡಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿದ್ದ ಸುಭಾಷ್‌ ಅವರನ್ನು ಇಂದಿರಾನಗರದ ಚಿನ್ಮಯ್ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ  ಬೌರಿಂಗ್ ಆಸ್ಪತ್ರೆಗೆ ಕರೆತಂದರು. ಚಿಕಿತ್ಸೆಗೆ ಸ್ಪಂದಿಸದೆ ಸುಭಾಷ್ ಮೃತಪಟ್ಟ ಬಳಿಕ ಅವರ ತಂದೆ ಕೃಷ್ಣ ಕಣ್ಣುಗಳನ್ನು ದಾನ ಮಾಡಿದರು ಎಂದು ವೈದ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT