ADVERTISEMENT

ಬಾಕಿ ಪಾವತಿಸಲು ತಾಕೀತು

ಬಿಬಿಎಂಪಿ ವಾಣಿಜ್ಯ ಮಳಿಗೆಗಳ ಬಾಡಿಗೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 19:30 IST
Last Updated 28 ಜುಲೈ 2015, 19:30 IST

ಬೆಂಗಳೂರು: ಬಾಡಿಗೆ ಪಡೆದಿರುವ ಮಳಿಗೆಗಳ ಬಾಕಿಯನ್ನು ಕೂಡಲೇ ಪಾವತಿಸಬೇಕು ಎಂದು ರೈಲ್ವೆ, ಪೊಲೀಸ್‌, ಆರ್‌ಟಿಒ, ಬಿಎಸ್ಎನ್ಎಲ್, ಅಳತೆ ಮತ್ತು ತೂಕ ಮಾಪನ ಇಲಾಖೆಗಳ ಅಧಿಕಾರಿಗಳಿಗೆ ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯ ಭಾಸ್ಕರ್  ಮಂಗಳವಾರ ತಾಕೀತು ಮಾಡಿದರು.

ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಇಲಾಖೆಗಳಿಂದಲೇ ಪಾಲಿಕೆಗೆ ರೂ18 ಕೋಟಿ ಬಾಡಿಗೆ ಬರಬೇಕಾಗಿದೆ.  ಬಾಕಿ ಪಾವತಿಸುವಂತೆ ನೋಟಿಸ್‌ ಕಳುಹಿಸಿದರೂ ಇಲಾಖೆಗಳು ಸ್ಪಂದಿಸುತ್ತಿಲ್ಲ. ಆದ್ದರಿಂದ, ಇಲಾಖೆಗಳು ಶೀಘ್ರವಾಗಿ ಬಾಕಿ ಪಾವತಿಸದಿದ್ದರೆ ಅವುಗಳ ಕಚೇರಿಗೆ ಬೀಗ ಹಾಕಿ’ ಎಂದು ಸಭೆಯಲ್ಲಿದ್ದ ಮಾರುಕಟ್ಟೆ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಬಾಡಿಗೆ ಬಾಕಿ ಉಳಿಸಿಕೊಂಡಿರುವ ಅಂಗಡಿ ಮಾಲೀಕರಿಗೆ ಬಾಡಿಗೆ ಪಾವತಿಸುವಂತೆ ಪ್ರತಿ ತಿಂಗಳೂ ನೋಟಿಸ್ ಜಾರಿ ಮಾಡಬೇಕು. ಒಂದು ವಾರದಲ್ಲಿ ನೋಟಿಸ್ ಜಾರಿ ಮಾಡಿ ಅದರ ಪ್ರತಿಗಳನ್ನು ಉಪ ಆಯುಕ್ತರಿಗೆ (ಮಾರುಕಟ್ಟೆ) ಸಲ್ಲಿಸಬೇಕು. ಇದರಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ’ ಎಂದು ಎಚ್ಚರಿಸಿದರು.
*
ಡೆಂಗಿ ಜ್ವರ: ಕಟ್ಟಡ ಮಾಲೀಕರಿಗೆ ಬಿಬಿಎಂಪಿ ಆಯುಕ್ತರ ಎಚ್ಚರಿಕೆ
ಬೆಂಗಳೂರು:
ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ನಿರ್ಮಾಣಕ್ಕಾಗಿ ತೆರೆದ ಟ್ಯಾಂಕರ್‌ಗಳಲ್ಲಿ ನೀರು ಸಂಗ್ರಹಿಸಿ ಸೊಳ್ಳೆ ಹುಟ್ಟಿಕೊಳ್ಳಲು ಕಾರಣರಾಗುವ ಮಾಲೀಕರಿಗೆ ದಂಡ ವಿಧಿಸಬೇಕು ಎಂದು ಬಿಬಿಎಂಪಿ ಆಯುಕ್ತ ಜಿ. ಕುಮಾರ್‌ ನಾಯಕ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಡೆಂಗಿ ನಿಯಂತ್ರಿಸುವ ಸಂಬಂಧ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಸೂಚನೆ ನೀಡಿದರು. ‘ಹೆಚ್ಚು ದಿನ ನೀರು ಶೇಖರಣೆ ಮಾಡಿ ಇಟ್ಟುಕೊಳ್ಳದಂತೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು’ ಎಂದರು. ‘ಜೊತೆಗೇ ಏರ್‌ ಕೂಲರ್‌, ಹೂಕುಂಡ, ಡ್ರಂ, ಬ್ಯಾರಲ್‌ಗಳಲ್ಲಿ ನೀರು ನಿಲ್ಲದಂತೆ ಅರಿವು ಮೂಡಿಸಬೇಕು. ವಲಯ ಮಟ್ಟದ ಅಧಿಕಾರಿಗಳು ತಮ್ಮ ವಲಯಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು’ ಎಂದು ಸೂಚಿಸಿದರು.

‘ನರ್ಸಿಂಗ್‌ ಕಾಲೇಜು, ಸ್ಥಳೀಯ ಸಂಸ್ಥೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸಹಯೋಗದಲ್ಲಿ ಜಾಥಾ ನಡೆಸಬೇಕು. ಬೀದಿನಾಟಕ, ವಿದ್ಯುನ್ಮಾನ ಮಾಧ್ಯಮ, ಪತ್ರಿಕೆ ಮತ್ತು ರೇಡಿಯೊ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು’ ಎಂದು ಹೇಳಿದರು. ‘ಎಲ್ಲ ಕಡೆ ನಿತ್ಯ ಫಾಗಿಂಗ್‌ ಮಾಡಬೇಕು. ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ ಸೊಳ್ಳೆ ಸೃಷ್ಟಿಯಾಗದಂತೆ ನಿಗಾ ವಹಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT