ADVERTISEMENT

ಬಾಡಿಗೆ ಬಾಕಿ: ಟ್ರಾವೆಲ್ಸ್ ಮಾಲೀಕ ಆತ್ಮಹತ್ಯೆ

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2016, 19:48 IST
Last Updated 2 ಡಿಸೆಂಬರ್ 2016, 19:48 IST
ಮಾರೇಗೌಡ
ಮಾರೇಗೌಡ   

ಬೆಂಗಳೂರು: ‘ನನ್ನ ಏಜೆನ್ಸಿಯಿಂದ ಕಾರುಗಳನ್ನು ಬಾಡಿಗೆ ಪಡೆದಿದ್ದ ಬಿಬಿಎಂಪಿ ಅಧಿಕಾರಿಗಳು, ಬಾಡಿಗೆ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿದ್ದಾರೆ’ ಎಂದು ಪತ್ರ ಬರೆದಿಟ್ಟು ಟ್ರಾವೆಲ್ಸ್ ಏಜೆನ್ಸಿ ಮಾಲೀಕ ಮಾರೇಗೌಡ (67) ಎಂಬುವರು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಾಜಿನಗರ 5ನೇ ಬ್ಲಾಕ್‌ನಲ್ಲಿ ನಡೆದಿದೆ.

ಪತ್ನಿ ಹಾಗೂ ಇಬ್ಬರು ಮಕ್ಕಳಿಂದ ಪ್ರತ್ಯೇಕವಾಗಿದ್ದ ಮಾರೇಗೌಡ, ಗುರುವಾರ ರಾತ್ರಿ ಮನೆಯಲ್ಲೇ ಕ್ರಿಮಿನಾಶಕ ಕುಡಿದಿದ್ದರು. ಅವರ ಏಜೆನ್ಸಿಯ ಕಾರು ಚಾಲಕ ಮನೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ
ಸ್ಪಂದಿಸದ ಮಾರೇಗೌಡ, ಬೆಳಿಗ್ಗೆ ಕೊನೆಯುಸಿರೆಳೆದರು ಎಂದು ಪೊಲೀಸರು ಹೇಳಿದ್ದಾರೆ.

ಪತ್ನಿ ಮೇಲೂ ಆರೋಪ:  ‘ನನ್ನ ಸಾವಿಗೆ ಬಿಬಿಎಂಪಿ ಕಾರ್ಯ ನಿರ್ವಾಹಕ ಎಂಜಿನಿಯರ್ ಧರಣೇಂದ್ರ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮಹದೇವ್, ಗುಮಾಸ್ತರಾದ ಶಾಂತಮ್ಮ ಹಾಗೂ ನನ್ನ ಪತ್ನಿ ಜಾನಕಿ ಕಾರಣ. ಬಿಬಿಎಂಪಿಯ ನಿರ್ಲಕ್ಷ್ಯ ಧೋರಣೆಯ ಜತೆಗೆ, ಕೌಟುಂಬಿಕ ಕಲಹದಿಂದಲೂ ಸಾಕಷ್ಟು ಯಾತನೆ ಅನುಭವಿಸಿದ್ದೇನೆ’ ಎಂದು ಮಾರೇಗೌಡ ಅವರು ಪತ್ರ ಬರೆದಿಟ್ಟಿದ್ದಾರೆ.

ADVERTISEMENT

ಪತ್ರದ ಆಧಾರದ ಮೇಲೆ ಆ ನಾಲ್ವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಗಡಿ ರಸ್ತೆ ಪೊಲೀಸರು ತಿಳಿಸಿದ್ದಾರೆ.

₹ 29 ಲಕ್ಷ ಬಾಕಿ?: ‘ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರದ ಬಳಿ ‘ಮಾರುತಿ ಟ್ರಾವೆಲ್ಸ್’ ನಡೆಸುತ್ತಿದ್ದ ಮಾರೇಗೌಡ, ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳ ಓಡಾಟಕ್ಕೆ ವಾಹನಗಳನ್ನು ಪೂರೈಸುವ  ಗುತ್ತಿಗೆ ಪಡೆದಿದ್ದರು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

‘ನಾಲ್ಕೈದು ವರ್ಷಗಳಿಂದ 25ಕ್ಕೂ ಹೆಚ್ಚು ಕಾರುಗಳನ್ನು ಬಿಬಿಎಂಪಿಗೆ ಬಾಡಿಗೆ ನೀಡಿದ್ದರು. ಇವುಗಳಲ್ಲಿ ಐದು ವಾಹನಗಳು ಮಾತ್ರ ಅವರಿಗೆ ಸೇರಿದ್ದು, ಇನ್ನುಳಿದ ವಾಹನಗಳನ್ನು ಸ್ನೇಹಿತರಿಂದ ಪಡೆದುಕೊಂಡಿದ್ದರು.’

‘ಮಾರೇಗೌಡ ಅವರಿಗೆ ನೀಡಬೇಕಿದ್ದ ₹ 29 ಲಕ್ಷ ಬಾಡಿಗೆಯನ್ನು ಬಿಬಿಎಂಪಿ ಒಂದು ವರ್ಷದಿಂದ ಬಾಕಿ ಉಳಿಸಿಕೊಂಡಿತ್ತು. ಇತ್ತ ವಾಹನಗಳನ್ನು ಕೊಟ್ಟಿದ್ದ ಸ್ನೇಹಿತರು ಮೇಲಿಂದ ಮೇಲೆ ಬಾಡಿಗೆ ಕೇಳುತ್ತಿದ್ದರಿಂದ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.’

‘ಬಾಕಿ ಹಣ ನೀಡುವಂತೆ ಮಾರೇಗೌಡ ಹಲವು ಬಾರಿ ಬಿಬಿಎಂಪಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಈ ನಡುವೆ ಆಸ್ತಿ ವಿಚಾರಕ್ಕೆ ಪತ್ನಿ ಜಾನಕಿ ಜತೆಗೂ ಜೋರು ಗಲಾಟೆಯಾಗಿತ್ತು’ ಎಂದು ಅಧಿಕಾರಿಗಳು ಹೇಳಿದರು.

‘₹ 27 ಲಕ್ಷ ಪಾವತಿಸಿದ್ದೇವೆ’

‘ಬಿಬಿಎಂಪಿಗೆ ವಾಹನ ಪೂರೈಸುವ ಗುತ್ತಿಗೆ ಪಡೆದಿದ್ದ ಮಾರೇಗೌಡ ಅವರ ಬ್ಯಾಂಕ್‌ ಖಾತೆಗೆ ಆರ್‌ಟಿಜಿಎಸ್ ಮೂಲಕ ಗುರುವಾರವಷ್ಟೇ ₹ 27 ಲಕ್ಷ ಪಾವತಿಸಿದ್ದೇವೆ’ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್ ಪ್ರಸಾದ್, ‘ಮಾರೇಗೌಡ ಖಾತೆಗೆ ಬಾಕಿ ಹಣ ಪಾವತಿಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡ ಸಂಬಂಧ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆರೋಪ ಕೇಳಿ ಬಂದಿರುವುದರಿಂದ, ಆಡಳಿತ ವಿಭಾಗದ ವಿಶೇಷ ಆಯುಕ್ತರಿಂದ ಆಂತರಿಕ ತನಿಖೆ ಮಾಡಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.