ADVERTISEMENT

ಬಿಎಂಟಿಸಿ ಬಸ್‌ಗಳ ವಿರುದ್ಧ ಕಾರ್ಯಾಚರಣೆ

ಶಬ್ದ, ವಾಯು ಮಾಲಿನ್ಯ ಮಾಡುವ ವಾಹನಗಳ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2014, 19:30 IST
Last Updated 27 ಆಗಸ್ಟ್ 2014, 19:30 IST

ಬೆಂಗಳೂರು: ನಗರದಲ್ಲಿ ಶಬ್ದಮಾಲಿನ್ಯ ಹಾಗೂ ವಾಯುಮಾಲಿನ್ಯ ಮಾಡುತ್ತಿದ್ದ ಬಿಎಂಟಿಸಿ ಬಸ್‌ ಹಾಗೂ ಇತರ ವಾಹನಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಕಾರ್ಯಾಚರಣೆ ನಡೆಸಿದರು. ಮಾಲಿನ್ಯ ಮಾಡುತ್ತಿರುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಈ ಕಾರಣದಿಂದ ಸಾರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.

ಜಯನಗರ ಪ್ರಾದೇಶಿಕ ಸಾರಿಗೆ ಅಧಿಕಾರಿ ಜ್ಞಾನೇಂದ್ರ ಕುಮಾರ್ ನೇತೃತ್ವದಲ್ಲಿ ಇಲಾಖೆಯ ಅಧಿಕಾರಿಗಳು ಜಯದೇವ ವೃತ್ತ ಮತ್ತಿತರ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ಶಬ್ದ ಮಾಲಿನ್ಯ ಮಾಡುತ್ತಿದ್ದ 62 ಬಸ್‌, ವಾಯುಮಾಲಿನ್ಯ ಮಾಡುತ್ತಿದ್ದ 60 ಬಸ್‌ ಹಾಗೂ ನಿಲ್ದಾಣದಲ್ಲಿ ನಿಲುಗಡೆ ಮಾಡದ 68 ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿದರು.

‘ಬಿಎಂಟಿಸಿ ಬಸ್‌ಗಳನ್ನು ನಿಲ್ದಾಣದಲ್ಲಿ ನಿಲ್ಲಿಸದೆ ರಸ್ತೆ ನಡುವಿನಲ್ಲೇ ಯದ್ವಾತದ್ವಾ ನಿಲ್ಲಿಸಲಾಗುತ್ತಿದೆ. ಇದರಿಂದ ವಾಹನ ಸವಾರರಿಗೆ ಅಡ್ಡಿ ಆಗುತ್ತಿದೆ. ಅಲ್ಲದೆ ಮಾಲಿನ್ಯ ಹೆಚ್ಚಳವೂ ಆಗುತ್ತಿದೆ. ಇಂತಹ ಬಸ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಲಾ­ಗಿದೆ’ ಎಂದು ಜ್ಞಾನೇಂದ್ರ ಕುಮಾರ್‌ ತಿಳಿಸಿದರು.

‘ಕಳೆದ ಕೆಲವು ದಿನಗಳಿಂದ ಮಾಲಿನ್ಯ ಮಾಡುತ್ತಿದ್ದ ಬಸ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಬುಧವಾರದಿಂದ ಇದನ್ನು ತೀವ್ರಗೊಳಿಸಲಾಗಿದೆ. ಮುಂದಿನ ದಿನಗಳಲ್ಲೂ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಅವರು ವಿವರಿಸಿದರು.

‘ನಗರದಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚುತ್ತಿ­ರುವುದಕ್ಕೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ರಸ್ತೆ ನಡುವಿನಲ್ಲಿ ನಿಲ್ಲುವ ಬಿಎಂಟಿಸಿ ಬಸ್‌ಗಳು ಹಾಗೂ ಇತರ ವಾಹನಗಳ ಮೇಲೂ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಬುಧ­ವಾರ ಬೆಳಿಗ್ಗೆ ಅಧಿಕಾರಿಗಳ ಸಭೆ ನಡೆಸಿ ಕಾರ್ಯಾ­ಚರಣೆ ನಡೆಸುವಂತೆ ಸೂಚಿಸಲಾಯಿತು’ ಎಂದು ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ತಿಳಿಸಿದರು.

ಅನ್ಯ ರಾಜ್ಯದ ವಾಹನಗಳ ವಿರುದ್ಧ ಕ್ರಮ: ನಗರ­ದಲ್ಲಿ ಸಂಚರಿಸುತ್ತಿದ್ದ ಅನ್ಯ ರಾಜ್ಯದ ಸುಮಾರು 500 ವಾಹನಗಳ ನ್ನು ಬುಧವಾರ ತಪಾಸಣೆ ನಡೆಸಲಾಗಿದೆ. ಈ ಪೈಕಿ ರಾಜ್ಯಕ್ಕೆ ತೆರಿಗೆ  ಪಾವತಿಸದ 150 ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಸಾರಿಗೆ ಇಲಾಖೆಗೆ ಒಟ್ಟು ₨1.5 ಕೋಟಿ ಆಜೀವ ತೆರಿಗೆ ಸಂಗ್ರಹ ಆಗುವ ನಿರೀಕ್ಷೆ ಇದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.