ADVERTISEMENT

ಬಿಡಿಎ ನಡೆಗೆ ಮನವಿದಾರರ ವಿರೋಧ

ನ್ಯಾಯಮೂರ್ತಿ ಎಚ್‌.ಎಸ್‌.ಕೆಂಪಣ್ಣ ವಿಚಾರಣಾ ಆಯೋಗ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 19:30 IST
Last Updated 4 ಜುಲೈ 2015, 19:30 IST

ಬೆಂಗಳೂರು: ಅರ್ಕಾವತಿ ಡಿನೋಟಿಫಿಕೇಷನ್‌ ಅಕ್ರಮಗಳ ಕುರಿತಂತೆ ನ್ಯಾಯಮೂರ್ತಿ ಎಚ್‌.ಎಸ್‌.ಕೆಂಪಣ್ಣ ವಿಚಾರಣಾ ಆಯೋಗಕ್ಕೆ ವಿಚಾರಣೆಯ ಹಕ್ಕೇ ಇಲ್ಲವೆಂದು ಪ್ರತಿಪಾದಿಸಿ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯನ್ನು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಶನಿವಾರ ಹಿಂದಕ್ಕೆ ಪಡೆಯಿತು.

ಕಾವೇರಿ ಭವನದಲ್ಲಿನ ವಿಚಾರಣಾ ಆಯೋಗದ ಕೋರ್ಟ್‌ನಲ್ಲಿ ನಡೆದ ಕಲಾಪದಲ್ಲಿ ಬಿಡಿಎ ಪರ ವಕೀಲರು ಈ ಸಂಬಂಧ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆದು ಪರಿಷ್ಕೃತ ಅರ್ಜಿಯನ್ನು ಸಲ್ಲಿಸಿದರು.

ಈ ಹಂತದಲ್ಲಿ ಬಿಡಿಎ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಮತ್ತು ಇತರರ ಪರ ವಕೀಲರಾದ ಎಸ್‌. ದೊರೆರಾಜು ಹಾಗೂ ರೈತ ಸಂಘದ ಪರ ವಕೀಲರು, ‘ಬಿಡಿಎ ಈ ರೀತಿಯ ಅರ್ಜಿಗಳನ್ನು ಸಲ್ಲಿಸುತ್ತಾ ಆಯೋಗದ ವೇಳೆಯನ್ನು ವೃಥಾ ಹಾಳು ಮಾಡುತ್ತಿದೆ’ ಎಂದು ಆರೋಪಿಸಿ, ‘ಇದಕ್ಕಾಗಿ ಬಿಡಿಎಗೆ ಕನಿಷ್ಠ ₨ 50 ಸಾವಿರ ದಂಡ ವಿಧಿಸಬೇಕು’ ಎಂದು ಆಯೋಗವನ್ನು  ಕೋರಿದರು.

ಇದೇ ವೇಳೆ, ‘ಅರ್ಕಾವತಿ ಬಡಾವಣೆ ಕಾಲಕಾಲಕ್ಕೆ ಅಭಿವೃದ್ಧಿ ಹೊಂದಿದ ಕುರಿತಂತೆ ಬಿಡಿಎ ಆಯೋಗಕ್ಕೆ ಸಲ್ಲಿಸಿರುವ ಗೂಗಲ್‌ ಮ್ಯಾಪ್‌ಗಳು ಹಾಗೂ ಇತರೆ  ದೃಢೀಕೃತ ದಾಖಲೆಗಳನ್ನು ನೀಡಬೇಕು’ ಎಂದು ದೊರೆರಾಜು ಮನವಿ ಮಾಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೆಂಪಣ್ಣ, ಮುಂದಿನ ವಿಚಾರಣೆ ವೇಳೆಗೆ ಗೂಗಲ್‌ ಮ್ಯಾಪ್‌ಗಳ ನಕಲು ನೀಡುವುದಾಗಿ ತಿಳಿಸಿದರು.

ಆದರೆ ದೃಢೀಕೃತ ದಾಖಲೆಗಳನ್ನು ನೀಡಬೇಕೆಂಬ ಮನವಿಯನ್ನು ತಿರಸ್ಕರಿಸಿದರು.

‘ನೀವು ಕೇಳುತ್ತಿರುವ ದಾಖಲೆಗಳು ಲಕ್ಷಾಂತರ ಪುಟಗಳಷ್ಟಿವೆ. ಬೇಕಿದ್ದರೆ ನಿಮಗೆ ಯಾವ ಪುಟದ ಅಥವಾ ಯಾವ ಭಾಗದ ದಾಖಲೆ  ಬೇಕು ಎಂದು ಕೇಳುತ್ತೀರೊ ಅದನ್ನು ಕೋರ್ಟ್‌ ಕಲಾಪದ ಸಮಯದಲ್ಲಿಯೇ ಪಡೆಯಬಹುದು’ ಎಂದು ನ್ಯಾಯಮೂರ್ತಿಗಳು ಸೂಚಿಸಿದರು. ರಾಜ್ಯ ಸರ್ಕಾರದ ಪರ  ಹಾಜರಾಗಿದ್ದ  ವಕೀಲ ವಿಜಯಕುಮಾರ್‌ ಎ. ಪಾಟೀಲ್‌ ಅವರು, “ಗೂಗಲ್‌ ಮ್ಯಾಪ್‌ ನೀಡಬೇಕೆಂಬ ದೊರೆರಾಜು ಅವರ ಮನವಿ ಸಮರ್ಪಕವಾಗಿಲ್ಲ ಮತ್ತು ನಿಖರತೆ ಇಲ್ಲ. ಆದರೂ ಅವುಗಳನ್ನು ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಲಾಗಿದೆ.

ಮುಖ್ಯಾಂಶಗಳು
*  ಮಾರ್ಗಸೂಚಿ ನಿಯಮ 2ನ್ನು ಪ್ರಶ್ನಿಸಿ ಸಲ್ಲಿಸಿದ್ದ  ಅರ್ಜಿ ಹಿಂಪಡೆದ ಬಿಡಿಎ

* ₨ 50 ಸಾವಿರ ದಂಡ ವಿಧಿಸುವಂತೆ ಕೋರಿದ ವಕೀಲ ಎಸ್‌. ದೊರೆರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT