ADVERTISEMENT

ಬಿವಿಜಿ ಕಂಪೆನಿ ವಿರುದ್ಧ ಮೇಯರ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 19:30 IST
Last Updated 21 ಅಕ್ಟೋಬರ್ 2014, 19:30 IST

ಯಲಹಂಕ: ನಾಗರಿಕರ ಮನವಿಯ ಮೇರೆಗೆ ಕಸ ವಿಲೇವಾರಿ ಮತ್ತು ಪಾದಚಾರಿ ರಸ್ತೆಯ ಸಮಸ್ಯೆಯ ಬಗ್ಗೆ ಚರ್ಚಿಸಲು ಮೇಯರ್‌ ಎನ್‌.ಶಾಂತ­ಕುಮಾರಿ ಅವರು ವಿದ್ಯಾರಣ್ಯಪುರಕ್ಕೆ ಭೇಟಿ ನೀಡಿ ನಾಗರಿಕರ ಅಹವಾಲು ಆಲಿಸಿದರು.

‘ನಮ್ಮ ಬಡಾವಣೆಯಲ್ಲಿ ಶೇ.100ರಷ್ಟು ಕಸವಿಂಗಡಣೆ ಮಾಡಿದರೂ ಸಹ ಮುಂದಿನ ಹಂತದ ಕಾರ್ಯಗಳು ಸರಿಯಾಗಿ ನಡೆಯದೆ ನಾವು ಮಾಡಿದ ಕೆಲಸ ಉಪಯೋಗಕ್ಕೆ ಬಾರದಂತಾಗಿದೆ. ವಾರಕ್ಕೊಮ್ಮೆಯೂ ಕಸ ವಿಲೇವಾರಿಯಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ವಚ್ಚತೆಗಾಗಿ ಹೋರಾಡುತ್ತಿದ್ದರೂ ಅದಕ್ಕೆ ಸೂಕ್ತ ಪರಿಹಾರ ಸಿಕ್ಕಿಲ್ಲ’ ಎಂದು ಎನ್‌ಟಿಐ ಲೇಔಟ್‌ನ ನಿವಾಸಿ ಸುನಂದಾ ಸೊಲ್ಲಾಪುರ್‌ ದೂರಿದರು.

‘ಇತ್ತೀಚೆಗೆ ಭಾರೀ ಮಳೆ ಸುರಿಯುದರೂ ನರಸೀಪುರ ಕೆರೆಗೆ ಒಂದು ಅಡಿ ನೀರು ಬಂದಿಲ್ಲ. ಶುದ್ಧನೀರು ಬರುವ ಕೊಳವೆ ಕಟ್ಟಿಕೊಂಡಿದ್ದು, ಕೂ ಡಲೇ ಅದನ್ನು ತೆರವುಗೊಳಿಸಿ, ಮಳೆ ನೀರು ಕೆರೆಗೆ ಹರಿಯುವಂತೆ ಕ್ರಮ ಕೈಗೊಳ್ಳುವುದರ ಜೊತೆಗೆ ಒಳಚರಂಡಿ ನೀರನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ ರಾಜೇಶ್‌ ದೂರಿದರು.

‘ಮುಖ್ಯರಸ್ತೆಯ ಪಾದಚಾರಿ ಮಾ ರ್ಗದಲ್ಲಿ ಗುಂಡಿಗಳು ಬಿದ್ದಿದ್ದು,  ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಬಿಬಿಎಂಪಿ 2–3 ಬಾರಿ ಕಾಟಾಚಾರಕ್ಕೆ ಕಾಮಗಾರಿ ಮಾಡಿದೆ’ ಎಂದು ಸ್ಥಳೀಯ ನಿವಾಸಿ ಶರಣಪ್ಪ ಆರೋಪಿಸಿದರು.

ಸಮಸ್ಯೆಗಳನ್ನು ಆಲಿಸಿದ ಮೇಯರ್‌ ಶಾಂತಕುಮಾರಿ, ‘ಬಿವಿಜಿ ಕಂಪೆನಿ ಗುತ್ತಿಗೆ ಪಡೆದಿರುವ ಎಲ್ಲ ವಾರ್ಡ್‌ಗಳಲ್ಲಿಯೂ ಕಸ ವಿಲೇವಾರಿ ಸಮಸ್ಯೆ ಉಂಟಾಗಿದೆ.  ಅಧಿಕಾರಿಗಳು ಕಂಪೆನಿಯವರಿಗೆ ಹಲ ವು ಬಾರಿ  ನೋಟಿಸ್‌ ನೀಡಿ, ಕಾನೂನು ಹೋರಾಟ ಮಾಡುತ್ತಿದ್ದರೂ ನ್ಯಾಯಾ­ಲಯ­ದಿಂದ ತಡೆಯಾಜ್ಞೆ ತರುತ್ತಿ­ರು­ವುದರಿಂದ ಸಮಸ್ಯೆ ಉಂಟಾಗಿದ್ದು, ತಡೆಯಾಜ್ಞೆ ತೆರವುಗೊಂಡರೆ ಮರು­ಟೆಂಡರ್‌ ಕರೆಯಲು ಅನುಕೂಲ­ವಾಗುತ್ತದೆ’ ಎಂದು ಹೇಳಿದರು.

ಉಪಮೇಯರ್‌ ಕೆ.ರಂಗಣ್ಣ, ಆಡ­ಳಿತ ಪಕ್ಷದ ನಾಯಕ ಅಶ್ವತ್ಥ­ನಾರಾ­ಯಣಗೌಡ, ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ನಾರಾಯಣ್‌, ಯಲ­ಹಂಕ ವಲಯದ ಜಂಟಿ ಆಯುಕ್ತ ವಿರೂಪಾಕ್ಷ ಮೈಸೂರು, ಬಿಬಿ ಎಂಪಿ ಸದಸ್ಯರಾದ ನಂದಿನಿ ಕೆ.ಶ್ರೀನಿ­ವಾಸ್‌, ಎಂ.ಇ.ಪಿಳ್ಳಪ್ಪ, ಯಶೋಧಾ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.