ADVERTISEMENT

ಬೀದಿ ವ್ಯಾಪಾರಿಗಳ ಸಮೀಕ್ಷೆಯಲ್ಲಿ ಲೋಪ

ನಗರ ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಆರೋಪ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ದೀನದಯಾಳ್‌ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್) ಯೋಜನೆಯಡಿ ನಡೆಸುತ್ತಿರುವ ಬೀದಿ ವ್ಯಾಪಾರಿಗಳ ಸಮೀಕ್ಷೆಯು ಲೋಪಗಳಿಂದ ಕೂಡಿದೆ ಎಂದು ನಗರ ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಆರೋಪಿಸಿದೆ.

ಸಮೀಕ್ಷೆ ಹೇಗೆ ನಡೆಯಬೇಕು ಎಂಬ ಮಾರ್ಗಸೂಚಿಯನ್ನು ಪಾಲಿಕೆಯ ಹೆಚ್ಚುವರಿ ಆಯುಕ್ತರು ಸೆ. 1ರಂದು ಪ್ರಕಟಿಸಿದ್ದಾರೆ. ಆದರೆ, ದಾಸರಹಳ್ಳಿ, ಬೊಮ್ಮನಹಳ್ಳಿ ಹಾಗೂ ರಾಜರಾಜೇಶ್ವರಿ ನಗರ ವಲಯಗಳಲ್ಲಿ  ಮಾರ್ಗಸೂಚಿ ಪ್ರಕಾರ ಸಮೀಕ್ಷೆ ನಡೆದಿಲ್ಲ ಎಂದು ಒಕ್ಕೂಟ ಹೇಳಿದೆ.

ಸಮೀಕ್ಷೆ ಕುರಿತು ಬೀದಿ ಸಮೀಕ್ಷೆ ಆರಂಭಿಸುವ ಮುನ್ನವೇ ಒಕ್ಕೂಟಕ್ಕೆ ಮಾಹಿತಿ ನೀಡಬೇಕಿತ್ತು. ಆದರೆ ಕೆಲವು ಸಂಘಟನೆಗಳಿಗೆ ಮಾತ್ರ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಮಾಹಿತಿ ಕೊರತೆಯಿಂದಾಗಿ ಅನೇಕ ವ್ಯಾಪಾರಿಗಳು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ ಎಂದು ಒಕ್ಕೂಟವು ಪಾಲಿಕೆಗೆ ಆಕ್ಷೇಪ ಸಲ್ಲಿಸಿದೆ.

ADVERTISEMENT

ಗಣತಿದಾರರಿಗೆ ಸರಿಯಾದ ತರಬೇತಿ ನೀಡಿಲ್ಲ. ಅವರು ಬೆಳಿಗ್ಗೆ ಹಾಗೂ ಮಧ್ಯಾಹ್ನ ಮಾತ್ರ ಸಮೀಕ್ಷೆ ನಡೆಸಿದ್ದಾರೆ.ಹಾಗಾಗಿ ಸಂಜೆ ವ್ಯಾಪಾರ ನಡೆಸುವವರಿಗೆ  ಮಾಹಿತಿ ಒದಗಿಸಲು ಅವಕಾಶ ಸಿಕ್ಕಿಲ್ಲ. ಮಾಹಿತಿ ಕಲೆ ಹಾಕಿದ ದಿನ ಮಳೆ ಬಂದ ಕಾರಣ ಹೆಚ್ಚಿನವರು ವ್ಯಾಪಾರದಲ್ಲಿ ತೊಡಗಿರಲಿಲ್ಲ ಎಂದು ಒಕ್ಕೂಟವು ತಿಳಿಸಿದೆ.

ಸಮೀಕ್ಷೆಯಲ್ಲಿ ಎಲ್ಲ ಬೀದಿ ವ್ಯಾಪಾರಿಗಳು ಪಾಲ್ಗೊಳ್ಳುವುದಕ್ಕೆ ಅವಕಾಶ ನೀಡಬೇಕು. ಹೊರರಾಜ್ಯಗಳ ದಾಖಲಾತಿ ಹೊಂದಿರುವವರು ಇಲ್ಲಿ ವ್ಯಾಪಾರ ಮಾಡುತ್ತಿದ್ದರೆ, ಅವರಿಗೂ ಗುರುತಿನ ಚೀಟಿ ನೀಡಬೇಕು. ಸಮೀಕ್ಷೆಯಿಂದ ಯಾವುದೇ ವ್ಯಾಪಾರಿ ಹೊರಗುಳಿದಲ್ಲಿ ಸಂಬಂಧಪಟ್ಟ ವಾರ್ಡ್‌ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಒಕ್ಕೂಟವು ಒತ್ತಾಯಿಸಿದೆ.

ಇನ್ನುಳಿದ ವಲಯಗಳಲ್ಲಿ ಸಮೀಕ್ಷೆ ನಡೆಸುವ ಮೂರು ದಿನಗಳ ಮುನ್ನವೇ ಈ ಬಗ್ಗೆ ಪ್ರಚಾರ ಮಾಡಬೇಕು. ಗಣತಿದಾರರಿಗೆ ಸರಿಯಾದ ತರಬೇತಿ ನೀಡಬೇಕು ಹಾಗೂ ಸಾಕಷ್ಟು ಪ್ರಮಾಣದಲ್ಲಿ ಗಣತಿದಾರರನ್ನು ನಿಯೋಜಿಸಬೇಕು ಎಂದು ಒಕ್ಕೂಟವು ಪಾಲಿಕೆಯನ್ನು ಒತ್ತಾಯಿಸಿದೆ.

***

ಇಂದಿನಿಂದ ಸಮೀಕ್ಷೆ 
ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಜಯನಗರ, ಪದ್ಮನಾಭನಗರ, ಬಿ.ಟಿ.ಎಂ. ಲೇಔಟ್ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇದೇ 25 ರಿಂದ 28ರವರೆಗೆ, ಮಹದೇವಪುರ ವಲಯದಲ್ಲಿ 25ರಿಂದ 27ರವರೆಗೆ ಹಾಗೂ ಯಲಹಂಕ ವಲಯದಲ್ಲಿ 25 ಮತ್ತು 26ರಂದು ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಯಲಿದೆ. 

ಈ ವ್ಯಾಪ್ತಿಯ ವ್ಯಾಪಾರಿಗಳು ಅವರ ಭಾವಚಿತ್ರಗಳು, ಕುಟುಂಬದ ಸದಸ್ಯರನ್ನು ಒಳಗೊಂಡ ಛಾಯಾಚಿತ್ರ, ಆಧಾರ್‌ ಕಾರ್ಡ್ ಅಥವಾ ಯಾವುದಾದರೂ ಗುರುತಿನ ಚೀಟಿ, ಬ್ಯಾಂಕ್ ಖಾತೆ ವಿವರ ಹಾಗೂ ಪಡಿತರ ಚೀಟಿಯನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.