ADVERTISEMENT

ಬೆಂಗಳೂರಿಗೆ ಅನ್ವಯವಿಲ್ಲ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST
ಬೆಂಗಳೂರಿಗೆ ಅನ್ವಯವಿಲ್ಲ
ಬೆಂಗಳೂರಿಗೆ ಅನ್ವಯವಿಲ್ಲ   

ಬೆಂಗಳೂರು: ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಉದ್ಯಾನ ಮತ್ತು ಆಟದ ಮೈದಾನಗಳಿಗೆ ಮೀಸಲಿಡಬೇಕಾದ ಜಾಗದ ಪ್ರಮಾಣವನ್ನು ಕಡಿಮೆ ಮಾಡುವ  ಮಸೂದೆ ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ನಗರಗಳಿಗೆ ಅನ್ವಯವಾಗಲಿದೆ.

ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ನಿರ್ಮಿಸುವ ಹೊಸ ಬಡಾವಣೆಗಳಲ್ಲಿ ಉದ್ಯಾನ, ಆಟದ ಮೈದಾನ ಮತ್ತು ನಾಗರಿಕ ಸೌಲಭ್ಯಗಳಿಗೆ  ಮೀಸಲಿಡುವ ಜಾಗದ ಪ್ರಮಾಣ ಕಡಿಮೆ ಮಾಡುವ ಮಸೂದೆಗೆ ವಿಧಾನಮಂಡಲದ ಉಭಯ ಸದನಗಳಲ್ಲಿ  ಅಂಗೀಕಾರ ದೊರೆತಿದೆ.

‘ಮಸೂದೆ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ಅನ್ವಯಿಸುವುದಿಲ್ಲ. ರಾಜಧಾನಿಯ ಹೊರಗಿನ ನಗರಗಳ  ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಮಾತ್ರ ಅನ್ವಯವಾಗಲಿದೆ’ ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಾಧಿಕಾರಗಳಿಗೆ ಮಾತ್ರ ಅನ್ವಯ: ‘ನಗರಪಾಲಿಕೆ, ನಗರಸಭೆ ವ್ಯಾಪ್ತಿಯ  ಖಾಸಗಿ ಬಡಾವಣೆಗಳಿಗೆ ಅನ್ವಯವಾಗುವ   ನಿಯಮವನ್ನು ಪ್ರಾಧಿಕಾರಗಳು ನಿರ್ಮಿಸುವ ಬಡಾವಣೆಗಳಿಗೂ ಅನ್ವಯಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ವಿ.ಪೊನ್ನುರಾಜ್‌ ಸ್ಪಷ್ಟಪಡಿಸಿದರು.
‘ಪ್ರಾಧಿಕಾರಗಳು ಮತ್ತು ಭೂಮಾಲೀಕರ ಜಂಟಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳುತ್ತಿರುವ ಹೊಸ ಯೋಜನೆಗಳಿಗೆ ಅನುಕೂಲ ಮಾಡಿಕೊಡಲು ಈ ತಿದ್ದುಪಡಿ ತರಲಾಗಿದೆ’ ಎಂದು ಪೊನ್ನುರಾಜ್‌ ವಿವರಿಸಿದರು.

‘ನಗರಪಾಲಿಕೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಖಾಸಗಿ ಬಡಾವಣೆಯ  ಒಟ್ಟು ಪ್ರದೇಶದ ಶೇ 10ರಷ್ಟನ್ನು ಉದ್ಯಾನ ಮತ್ತು ಆಟದ ಮೈದಾನಗಳಿಗೆ, ಶೇ 5ರಷ್ಟನ್ನು ನಾಗರಿಕ ಸೌಲಭ್ಯಗಳಿಗೆ ಮೀಸಲಿಡಬೇಕು ಎಂಬ ನಿಯಮವಿದೆ’.

ಇದುವರೆಗೂ ನಗರಾಭಿವೃದ್ಧಿ ಪ್ರಾಧಿಕಾರಗಳು ನಿರ್ಮಿಸುವ ಬಡಾವಣೆಗಳಲ್ಲಿ ಉದ್ಯಾನ ಮತ್ತು ಆಟದ ಮೈದಾನಕ್ಕೆ ಶೇ 15, ನಾಗರಿಕ ಸೌಲಭ್ಯಕ್ಕೆ ಶೇ 10ರಷ್ಟು ಪ್ರದೇಶ ಮೀಸಲಿಡಬೇಕೆಂಬ ನಿಯಮವಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.