ADVERTISEMENT

ಬೆಳ್ಳಂದೂರು ಕೆರೆಗೆ ತ್ಯಾಜ್ಯ: ಮೂರು ಕೈಗಾರಿಕಾ ಘಟಕ ಮುಚ್ಚಲು ಆದೇಶ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 20:40 IST
Last Updated 24 ಏಪ್ರಿಲ್ 2017, 20:40 IST
ಕೆರೆಯಂಗಳದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿರುವುದು
ಕೆರೆಯಂಗಳದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿರುವುದು   

ಬೆಂಗಳೂರು: ಬೆಳ್ಳಂದೂರು ಕೆರೆಯ ಜಲಾನಯನ ಪ್ರದೇಶದಲ್ಲಿ ಬರುವ ಮೂರು  ಕೈಗಾರಿಕಾ ಘಟಕಗಳನ್ನು ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಆದೇಶ ಹೊರಡಿಸಿದೆ.

ಈ ಕೆರೆಯ ಪುನರುಜ್ಜೀವನ ಕಾರ್ಯದ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸಿರುವ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ, ಈ ಕೆರೆಗೆ ತ್ಯಾಜ್ಯ ನೀರು ಬಿಡುವ ಕೈಗಾರಿಕೆಗಳಿಗೆ  ಮಂಡಳಿಯ ಅಧಿಕಾರಿಗಳ ತಂಡ ದಿಢೀರ್‌ ದಾಳಿ ಆರಂಭಿಸಿದೆ.

‘ಶಾಂತಿನಗರ ವಿಧಾನಸಭಾ ಕ್ಷೇತ್ರದ ವಿನಾಯಕ ನಗರದಲ್ಲಿದ್ದ ರೇಷ್ಮೆ ಬಟ್ಟೆಗಳಿಗೆ ಬಣ್ಣ ಹಾಕುವ ಮೂರು ಕೈಗಾರಿಕಾ ಘಟಕಗಳಿಗೆ  ಭೇಟಿ ನೀಡಿ ಪರಿಶೀಲಿಸಿದ್ದೇವೆ. ಈ ಘಟಕಗಳು ಮುರುಗನ್‌, ರಾಮಕೃಷ್ಣ ಹಾಗೂ ಮಲಯರಾಜು ಎಂಬುವರಿಗೆ ಸೇರಿವೆ. ಅವರು ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡದೇ ಕಾಲುವೆಗೆ ಬಿಡುತ್ತಿದ್ದರು.  ಈ ನೀರು ಕೆರೆಯನ್ನು ಸೇರುತ್ತದೆ.  ಈ ಘಟಕಗಳಿಗೆ ಎನ್‌ಜಿಟಿ ಆದೇಶ ಬಂದ ಮರುದಿನವೇ  ನೋಟಿಸ್‌ ನೀಡಿದ್ದೆವು. ಹಾಗಾಗಿ  ಈ ಘಟಕಗಳನ್ನು  ಮುಚ್ಚುವಂತೆ ಆದೇಶ ಹೊರಡಿಸಿದ್ದೇನೆ’ ಎಂದು ಮಂಡಳಿ  ಅಧ್ಯಕ್ಷ ಲಕ್ಷ್ಮಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಅಪಾಯಕಾರಿ ತ್ಯಾಜ್ಯ ನೀರನ್ನು  ಹೊರಗೆ ಬಿಡುತ್ತಿರುವ ಇನ್ನೂ 10 ಕೈಗಾರಿಕಾ ಘಟಕಗಳನ್ನು ಗುರುತಿಸಿ ನೋಟಿಸ್‌ ನೀಡಿದ್ದೇವೆ.  ಈ ಘಟಕಗಳಿಗೂ ದಿಢೀರ್‌ ದಾಳಿ ನಡೆಸುತ್ತೇವೆ. ತ್ಯಾಜ್ಯ ನೀರನ್ನು ಸಂಸ್ಕರಿಸದೇ ಹೊರಗೆ ಬಿಡುವುದು ಕಂಡುಬಂದರೆ, ಅವುಗಳನ್ನೂ ತಕ್ಷಣವೇ ಮುಚ್ಚಿಸುತ್ತೇವೆ’ ಎಂದು ಅವರು ತಿಳಿಸಿದರು.

‘ಕೆರೆ ಕಲುಷಿತಗೊಳ್ಳದಂತೆ ನಿಗಾ ವಹಿಸಲು  ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ  ರಚಿಸುವಂತೆ ಎನ್‌ಜಿಟಿ ಸೂಚಿಸಿದೆ.  ನಾವು  ಮುಚ್ಚಿಸುವ ಕೈಗಾರಿಕಾ ಘಟಕಗಳು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳುವುದಕ್ಕೆ ಎರಡು ತಿಂಗಳು ಕಾಲಾವಕಾಶ ಕೊಡುತ್ತೇವೆ.   ಅವು ಮತ್ತೆ ಕಾರ್ಯಾರಂಭ ಮಾಡಬೇಕಾದರೆ ಈ ಉನ್ನತ ಮಟ್ಟದ ಸಮಿತಿ ಪರಿಶೀಲನೆ ನಡೆಸಿ ಶಿಫಾರಸು ಮಾಡಬೇಕು’ ಎಂದು ಅವರು ವಿವರಿಸಿದರು.

ಕೈಗಾರಿಕೆಗಳ ವಿವರ ವೆಬ್‌ಸೈಟ್‌ನಲ್ಲಿ:  ಬೆಳ್ಳಂದೂರು ಕೆರೆಯ ಜಲಾನಯನ ಪ್ರದೇಶದಲ್ಲಿರುವ 488 ಕೈಗಾರಿಕೆಗಳ ಪಟ್ಟಿಯನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ  (http://kspcb.kar.nic.in) ಪ್ರಕಟಿಸಲಾಗಿದೆ. ಈ ಪೈಕಿ 97 ಕೈಗಾರಿಕೆಗಳು ಕೆಂಪುಪಟ್ಟಿಯಲ್ಲಿವೆ. ಈ ಪಟ್ಟಿಯಲ್ಲಿರುವ ಕೈಗಾರಿಕೆಗಳು ಯಾವುವು ಎಂಬ  ವಿವರ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ.

ದಿಢೀರ್‌ ಭೇಟಿ: ‘ಈ ಕೆರೆಯ ಆಸುಪಾಸಿನಲ್ಲಿ ಒಟ್ಟು 159 ಅಪಾರ್ಟ್‌ಮೆಂಟ್‌ ಸಮುಚ್ಚಯಗಳನ್ನು ಗುರುತಿಸಿದ್ದೇವೆ. ಇವುಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಅಳವಡಿಸಿಕೊಳ್ಳುವಂತೆ ಈ ಹಿಂದೆಯೇ ಸೂಚನೆ ನೀಡಿದ್ದೆವು. ಈ ಪೈಕಿ  ಅನೇಕರು  ಎಸ್‌ಟಿಪಿ ಅಳವಡಿಸಿಕೊಂಡಿದ್ದಾರೆ. ಆದರೆ, ಕೆಲವೆಡೆ ಎಸ್‌ಟಿಪಿಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳಿವೆ. ನಾವು ಇಂತಹ ವಸತಿ ಸಮುಚ್ಚಯಗಳಿಗೆ ದಿಢೀರ್‌ ಭೇಟಿ ನೀಡಿ ತಪಾಸಣೆ ನಡೆಸುತ್ತೇವೆ’ ಎಂದು ಲಕ್ಷ್ಮಣ್‌ ತಿಳಿಸಿದರು.

‘ಯಾವುದಾದರೂ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಎಸ್‌ಟಿಪಿ ಇಲ್ಲದಿರುವುದು ಅಥವಾ  ಅದು ಕಾರ್ಯನಿರ್ವಹಿಸದಿರುವುದು ತಪಾಸಣೆ ವೇಳೆ ಕಂಡುಬಂದರೆ,  ತ್ಯಾಜ್ಯ ನೀರನ್ನು ಹೊರಬಿಡದಂತೆ ನಿರ್ಬಂಧ ವಿಧಿಸುತ್ತೇವೆ’ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದರು.

ಕಳೆ ತೆಗೆಯುವ ಕೆಲಸ ಆರಂಭ
ಈ ಕೆರೆಯಲ್ಲಿ ಬೆಳೆದಿರುವ ಕಳೆಯನ್ನು ತೆಗೆಯುವ ಕೆಲಸ ಸೋಮವಾರದಿಂದ ಆರಂಭಗೊಂಡಿದೆ. ಹೈದರಾಬಾದ್‌ನ ಹಾರ್ವಿನ್ಸ್‌ ಕನ್‌ಸ್ಟ್ರಕ್ಷನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಗೆ  ಇದರ ಗುತ್ತಿಗೆ ವಹಿಸಲಾಗಿದೆ.

‘ ಸದ್ಯ ಒಂದು ಜೆಸಿಬಿ   ಬಳಸಿ ಕೆರೆಯ ಅಂಚಿನಲ್ಲಿರುವ ಕಳೆಯನ್ನು ತೆಗೆಯುವ ಕಾರ್ಯ ಆರಂಭಿಸಿದ್ದೇವೆ. ಅದನ್ನು ಕೆರೆಯ ದಂಡೆಯಲ್ಲೇ ರಾಶಿ ಹಾಕಿದ್ದೇವೆ. ಮಂಗಳವಾರದಿಂದ ಇನ್ನೊಂದು ಹಿಟಾಚಿ ಯಂತ್ರವನ್ನು ಬಳಸಿ ಕಳೆ ತೆಗೆಯುತ್ತೇವೆ’ ಎಂದು  ಬಿಡಿಎ ಪೂರ್ವ ವಿಭಾಗದ ಕಾರ್ಯಪಾಲಕ
ಎಂಜಿನಿಯರ್‌ ವೀರಸಿಂಗ್‌ ನಾಯಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಮಗಾರಿಯ ಗುತ್ತಿಗೆ ಪಡೆದ     ಕಂಪೆನಿ ಕಟ್ಟರ್‌ ಅಳವಡಿಸಿದ ಬೋಟ್‌ಗಳನ್ನು ಬಳಸಿ ಕೆರೆಯ ನಡುವೆ ಇರುವ ಕಳೆಯನ್ನು ಹೊರ ತೆಗೆಯಲಿದೆ. ಈ ಯಂತ್ರ ಇನ್ನು ನಾಲ್ಕೈದು ದಿನಗಳ ಒಳಗೆ ಇಲ್ಲಿಗೆ ತಲುಪಲಿದೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಪಿ.ಎನ್‌.ನಾಯಕ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.