ADVERTISEMENT

‘ಬೇಂದ್ರೆ ಕಾವ್ಯ ಮನುಕುಲಕ್ಕೆ ಮಾರ್ಗದರ್ಶಕ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 19:30 IST
Last Updated 31 ಜನವರಿ 2017, 19:30 IST

ಬೆಂಗಳೂರು: ‘ದ.ರಾ.ಬೇಂದ್ರೆ ಅವರ ಕಾವ್ಯ ಮನುಕುಲಕ್ಕೆ  ಮಾರ್ಗದರ್ಶಕವಾಗಿದೆ’ ಎಂದು ಸಾಹಿತಿ ಮಲ್ಲೇಪುರಂ ಜಿ.ವೆಂಕಟೇಶ್‌ ಹೇಳಿದರು.

ದ.ರಾ.ಬೇಂದ್ರೆ ಕಾವ್ಯಕೂಟವು ನಗರದ ಉದಯಭಾನು ಕಲಾ ಸಂಘದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಬೇಂದ್ರೆ ಜನ್ಮದಿನಾಚರಣೆ ಹಾಗೂ ಕಾವ್ಯಕೂಟದ ದಶಮಾನೋತ್ಸವ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಡತನದ ಬಾಳನ್ನು ಅಪ್ಪಿಕೊಂಡು ಆದರ್ಶದ ಬೆಳಕಿನತ್ತ ಸಾಗಿದವರು ಬೇಂದ್ರೆ. ಉಲ್ಲಾಸ, ಜೀವನ, ಚಿಂತನೆ, ನೋವು, ನಲಿವು ಅವರ ಕಾವ್ಯದಲ್ಲಿದೆ. ಹೀಗಾಗಿ ಅವರ ಕಾವ್ಯದ ಬಗ್ಗೆ ಯುವ ಪೀಳಿಗೆ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದರು.

ADVERTISEMENT

‘ಡಾ.ಜಿ.ಕೃಷ್ಣಪ್ಪ ಅವರು ಬೇಂದ್ರೆ ಕಾವ್ಯಕೂಟವನ್ನು ಸ್ಥಾಪಿಸಿ ಮಕ್ಕಳಲ್ಲಿ ಕಾವ್ಯದ ಅಭಿರುಚಿಯನ್ನು ಬೆಳೆಸುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತಿ ಎಚ್‌.ಜಿ.ಸಿದ್ದರಾಮಯ್ಯ ಮಾತನಾಡಿ, ‘ಕಾವ್ಯಕೂಟವು ಬೇಂದ್ರೆ ಅವರ ಕಾವ್ಯಕ್ಕೆ ಹೊಸ ಜೀವ ನೀಡಿದೆ. ಅವರ ಕಾವ್ಯದ ಅಧ್ಯಯನ ಮತ್ತು ವಿಮರ್ಶಾ ಶಿಸ್ತನ್ನು ಬೆಳೆಸುವ ಉದ್ದೇಶದಿಂದ ಕಳೆದ ಹತ್ತು ವರ್ಷಗಳಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ವಿಮರ್ಶಾ ಸ್ಪರ್ಧೆ ಆಯೋಜಿಸುತ್ತಿದೆ’ ಎಂದರು.

ಕಾವ್ಯಕೂಟದ ಅಧ್ಯಕ್ಷ ಡಾ.ಜಿ.ಕೃಷ್ಣಪ್ಪ ಮಾತನಾಡಿ, ‘1988ರಿಂದ ಶಾಲಾ ಕಾಲೇಜುಗಳಲ್ಲಿ ಬೇಂದ್ರೆ ಕವನ ಗಾಯನ ಸ್ಪರ್ಧೆಯನ್ನು ನಡೆಸುತ್ತಿದ್ದೇವೆ. 2007ರಲ್ಲಿ ಕಾವ್ಯಕೂಟವನ್ನು ಆರಂಭಿಸಲಾಯಿತು. ಅಂದಿನಿಂದ ವಿದ್ಯಾರ್ಥಿಗಳಲ್ಲಿ ಬೇಂದ್ರೆ ಅವರ ಕಾವ್ಯದ ಬಗ್ಗೆ ಪ್ರೀತಿ ಬೆಳೆಸುವ ಹಲವು ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. 2008ರಿಂದ ಬೇಂದ್ರೆ ಸ್ಮೃತಿ ಲೇಖನಸ್ಪರ್ಧೆ ಆಯೋಜಿಸಲಾಗುತ್ತಿದೆ’ ಎಂದರು.

ಬಹುಮಾನ ವಿತರಣೆ: ಬೇಂದ್ರೆ ಕವನ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಎಂ.ಎಸ್‌.ಅಂಜನಾ (ಪ್ರಥಮ), ಸಾಗರ ಶಂಕರ ಚೌಗಲೆ (ದ್ವಿತೀಯ), ಆಕಾಶ ನಂದಗಾಂವ್ಕರ್‌ (ತೃತೀಯ), ಎಚ್‌.ಎಸ್‌.ಕಲ್ಲೇಶ್‌, ಅಸ್ಮಾರಾ ಹಾಗೂ ಯಳ್ಳೂರ (ಸಮಾಧಾನಕರ) ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.