ADVERTISEMENT

ಭಯೋತ್ಪಾದನೆ ನಂಟು: ಬಂಧಿತರ ವಿಚಾರಣೆ

ನಗರದಲ್ಲಿ ಪಾಕ್ ಪ್ರಜೆಗಳು ಸೆರೆ ಸಿಕ್ಕ ಪ್ರಕರಣ: ಕೇಂದ್ರ ಗುಪ್ತದಳ, ‘ರಾ’ ಅಧಿಕಾರಿಗಳಿಂದ ತನಿಖೆ

​ಪ್ರಜಾವಾಣಿ ವಾರ್ತೆ
Published 26 ಮೇ 2017, 20:16 IST
Last Updated 26 ಮೇ 2017, 20:16 IST

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದಡಿ ಬಂಧಿತ ರಾಗಿರುವ ಪಾಕಿಸ್ತಾನ ಪ್ರಜೆಗಳು ಯಾವು ದಾದರೂ ಭಯೋತ್ಪಾದನಾ ಸಂಘಟನೆ ಜತೆ ನಂಟು ಹೊಂದಿದ್ದರೇ ಎಂಬ ನಿಟ್ಟಿನಲ್ಲಿ ಕೇಂದ್ರದ ತನಿಖಾ ತಂಡಗಳು ವಿಚಾರಣೆ ತೀವ್ರಗೊಳಿಸಿವೆ.

ಕೇರಳದ ಮಹಮದ್ ಸಿಹಾಬ್ (30), ಅವರ ಪತ್ನಿ ಪಾಕಿಸ್ತಾನದ ಸಮೀರಾ ಅಲಿಯಾಸ್ ನಜ್ಮಾ (25), ಸಂಬಂಧಿ ಮಹಮದ್ ಖಾಸಿಫ್ (30) ಹಾಗೂ ಇವರ ಪತ್ನಿ ಝೈನಬ್ ಅಲಿಯಾಸ್ ಕಿರಣ (26) ಎಂಬುವರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಆರೋಪಿಗಳನ್ನು ಗುರುವಾರ ಸಂಜೆ 44ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆ ಗಾಗಿ ನ್ಯಾಯಾಧೀಶರು ಅವರನ್ನು 14 ದಿನ ಪೊಲೀಸ್ ಕಸ್ಟಡಿಗೆ ನೀಡಿದರು.

ಮಡಿವಾಳದ ವಿಶೇಷ ವಿಚಾರಣಾ ಕೊಠಡಿಯಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಕೇಂದ್ರ ಗುಪ್ತದಳ, ‘ರಾ’ ಹಾಗೂ  ಐಎಸ್‌ಡಿ ಅಧಿಕಾರಿಗಳು ಶುಕ್ರವಾರ ಇಡೀ ದಿನ ಅವರನ್ನು ಡ್ರಿಲ್ ಮಾಡಿದ್ದಾರೆ. ‘ಪ್ರೇಮ ವಿವಾಹಕ್ಕೆ ಕುಟುಂಬದ ವಿರೋಧವಿತ್ತು. ಹೀಗಾಗಿ, ಗಡಿ ದಾಟಿ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದೆವು’ ಎಂದು ಅವರು ಪುನರುಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ ಸ್ಥಳೀಯ ಪೊಲೀಸರೂ ಆರೋಪಿಗಳು ರಾಜ್ಯದಲ್ಲಿ ಯಾವುದಾದರೂ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ADVERTISEMENT

ಅಲ್ಲಗಳೆಯುವಂತಿಲ್ಲ: ‘ಬಂಧಿತರು ಉಗ್ರ ಸಂಘಟನೆಗಳ ಜತೆ ನಂಟು ಹೊಂದಿ ರುವುದು ಈವರೆಗಿನ ತನಿಖೆಯಿಂದ ಕಂಡುಬಂದಿಲ್ಲ. ಆದರೆ,  ಉಗ್ರರು ತಮ್ಮ ತಂಡದಲ್ಲಿ ಗರ್ಭಿಣಿಯೊಬ್ಬಳನ್ನು ಇಟ್ಟು ಕೊಂಡು ಹಲವೆಡೆ ದಾಳಿ ನಡೆಸಿರುವ ಹಾಗೂ ದಾಳಿಕೋರರಿಗೆ ಸಹಕರಿಸಿರುವ ಹಲವು ನಿದರ್ಶನಗಳು ಪಾಕಿಸ್ತಾನ ದಲ್ಲಿವೆ. ಹೀಗಾಗಿ, ವಿಚಾರಣೆ ಪೂರ್ಣ ಗೊಳ್ಳದೆ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ’ ಎಂದು ಐಎಸ್‌ಡಿ ಅಧಿಕಾರಿ ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಆಧಾರ್ ಕಾರ್ಡ್ ಪರಿಶೀಲನೆ:  ‘ಪಾಕ್ ಪ್ರಜೆಗಳು ಆಧಾರ್ ಕಾರ್ಡ್‌ ಮಾಡಿಸಿ ಕೊಂಡಿರುವುದು ದೇಶದ ಆಂತರಿಕ ಭದ್ರತೆ ಸಂಬಂಧಿಸಿದ ವಿಷಯವಾಗಿದೆ. ಹೀಗಾಗಿ, ಈ ವಿಚಾರವನ್ನು ಗಂಭೀರ ವಾಗಿ ಪರಿಗಣಿಸಲಾಗಿದೆ. ಸಿಸಿಬಿ ಇನ್‌ ಸ್ಪೆಕ್ಟರ್ ಸುಧಾಕರ್ ನೇತೃತ್ವದ ತಂಡ ಈ ಬಗ್ಗೆ ಪ್ರತ್ಯೇಕ ತನಿಖೆ ನಡೆಸುತ್ತಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು. 

ಗರ್ಭಿಣಿ ಆರೈಕೆ:  ಆರು ತಿಂಗಳ ಗರ್ಭಿಣಿ ಆಗಿರುವ ಸಮೀರಾ ಆರೋಗ್ಯದ ಬಗ್ಗೆಯೂ ಸಿಸಿಬಿ ಅಧಿಕಾರಿಗಳು ಕಾಳಜಿ ವಹಿಸಿದ್ದಾರೆ. ಅವರ ಯೋಗಕ್ಷೇಮ ನೋಡಿಕೊಳ್ಳಲು ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಜತೆಗೆ ಅವ ರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸದೆ, ಸೀಮಿತ ಪ್ರಶ್ನೆಗಳನ್ನು ಮಾತ್ರ ಕೇಳುತ್ತಿ ದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.

ಪಾಕ್ ರಾಯಭಾರ ಕಚೇರಿಗೆ ವರದಿ 
ಬೆಂಗಳೂರು: ನಗರದಲ್ಲಿ ಪಾಕ್‌ ಪ್ರಜೆಗಳನ್ನು ಬಂಧಿಸಿರುವ ಕುರಿತು ಗೃಹ ಇಲಾಖೆಯು ದೆಹಲಿಯಲ್ಲಿರುವ ಪಾಕ್‌ ರಾಯಭಾರ ಕಚೇರಿಗೆ ಶುಕ್ರವಾರ ನಾಲ್ಕು ಪುಟಗಳ ವರದಿ ಸಲ್ಲಿಸಿದೆ. ‘ಪಾಕ್‌ ಪ್ರಜೆಗಳನ್ನು ಬಂಧಿಸಿ 2 ದಿನ ಕಳೆದರೂ ಆ ದೇಶದ ರಾಯಭಾರ ಕಚೇರಿ ಅಧಿಕಾರಿಗಳಾಗಲೀ, ಬಂಧಿತರ ಸಂಬಂಧಿಗಳಾಗಲೀ ನಮ್ಮನ್ನು ಸಂಪರ್ಕಿಸಿರಲಿಲ್ಲ. ‘ಕರಾಚಿಯ ಮೂವರು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದರು. ಅವರ ಬಳಿ ದೇಶದ ಆಧಾರ್ ಕಾರ್ಡ್‌ಗಳೂ ಸಿಕ್ಕವು. ಹೀಗಾಗಿ, ಬಂಧಿಸಿದ್ದೇವೆ’ ಎಂದು ರಾಯಭಾರ ಕಚೇರಿಗೆ ಶುಕ್ರವಾರ ಬೆಳಿಗ್ಗೆ ನಾವೇ ಪತ್ರ ರವಾನಿಸಿದ್ದೇವೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಹಾಬ್ ಅಣ್ಣ ಭೇಟಿ: ಕೇರಳದಿಂದ ಶುಕ್ರವಾರ ಸಂಜೆ ನಗರಕ್ಕೆ ಬಂದ ಸಿಹಾಬ್ ಅಣ್ಣ, ಸಿಸಿಬಿ ಅಧಿಕಾರಿಗಳನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ‘ಐದು ವರ್ಷಗಳ ಹಿಂದೆ ನಮ್ಮೊಂದಿಗೆ ಜಗಳ ಮಾಡಿಕೊಂಡು ಕತ್ತಾರ್‌ಗೆ ಹೋದ ಸಿಹಾಬ್, ಮತ್ತೆಂದೂ ನಮ್ಮನ್ನು ಸಂಪರ್ಕಿಸಲಿಲ್ಲ. ಅಲ್ಲಿ ತಂದೆಯ ಜತೆಗಿದ್ದನೆಂಬ ಕಾರಣಕ್ಕೆ ನಾವೂ ತಲೆಕೆಡಿಸಿಕೊಳ್ಳಲಿಲ್ಲ. ಸೋದರ ಪಾಕ್ ಯುವತಿಯನ್ನು ಮದುವೆಯಾಗಿರುವ ಹಾಗೂ ಅವರನ್ನು ನಿಯಮ ಬಾಹಿರವಾಗಿ ಬೆಂಗಳೂರಿಗೆ ಕರೆದುಕೊಂಡು ಬಂದಿರುವ ವಿಚಾರ ಗುರುವಾರ ಸಂಜೆ ಸುದ್ದಿ ವಾಹಿನಿಗಳಿಂದ ಗೊತ್ತಾಯಿತು’ ಎಂದು ಅವರು ಹೇಳಿಕೆ ನೀಡಿದ್ದಾಗಿ ಸಿಸಿಬಿ ಡಿಸಿಪಿ ಎಚ್‌.ಡಿ. ಆನಂದ್‌ಕುಮಾರ್ ತಿಳಿಸಿದರು.

ಸ್ಥಳೀಯ ನಿವಾಸಿಗಳಿಗೆ ಆಘಾತ
ಪಕ್ಕದ ಮನೆಯ ಕುಟುಂಬವನ್ನು ಪೊಲೀಸರು ಬಂಧಿಸಿ 2 ದಿನಗಳಾದರೂ, ಕುಮಾರಸ್ವಾಮಿ ಲೇಔಟ್‌ನ 91ನೇ ಅಡ್ಡರಸ್ತೆಯ ನಿವಾಸಿಗಳು ಆಘಾತದಿಂದ ಹೊರಬಂದಿಲ್ಲ. ‘ಸಮೀರಾ ಹಾಗೂ ಝೈನಬ್ ನಮ್ಮ ಜತೆ ಆಗಾಗ ಮಾತನಾಡುತ್ತಿದ್ದರು. ಆದರೆ, ಆ ಮನೆಯಲ್ಲಿದ್ದ ಪುರುಷರ ಜತೆ ಎಂದೂ ಮಾತನಾಡಿಲ್ಲ. ಅವರು ಇಲ್ಲಿಗೆ ಬಾಡಿಗೆ ಬಂದಾಗಿನಿಂದ ಕುಟಂಬ ಸಮೇತರಾಗಿ ಒಮ್ಮೆಯೂ ಹೊರಗೆ ಹೋಗಿಲ್ಲ.  ಅವರ ಮನೆಗೂ ಯಾರೂ ಸಂಬಂಧಿಗಳು ಬಂದಿಲ್ಲ. ಈ ಕುಟುಂಬ ಪಾಕ್‌ನಿಂದ ಬಂದಿತ್ತು, ಅಕ್ರಮವಾಗಿ ನಗರದಲ್ಲಿ ನೆಲೆಸಿತ್ತು ಎಂಬ ವಿಚಾರ ಕೇಳಿ  ಆಘಾತವಾಯಿತು’ ಎಂದು ನೆರೆಮನೆಯ ಶಿಕ್ಷಕಿ ಫಾತಿಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.