ADVERTISEMENT

ಭಾರತದಲ್ಲಿ ಪ್ರಯೋಗ ನಡೆಸಿದ್ದ ಅಮೆರಿಕ

ಸಂವಾದದಲ್ಲಿ ಲೇಖಕ ಅರುಣ್ ರಾಮನ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 20:03 IST
Last Updated 20 ಜನವರಿ 2017, 20:03 IST
ಸಂವಾದದಲ್ಲಿ ಅರುಣ್‌ ರಾಮನ್‌ ಮಾತನಾಡಿದರು. ಸಿದ್ಧಾರ್ಥ ರಾಜ ಹಾಜರಿದ್ದರು –ಪ್ರಜಾವಾಣಿ ಚಿತ್ರ
ಸಂವಾದದಲ್ಲಿ ಅರುಣ್‌ ರಾಮನ್‌ ಮಾತನಾಡಿದರು. ಸಿದ್ಧಾರ್ಥ ರಾಜ ಹಾಜರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೃತಕ ಮಳೆಯನ್ನು ಸುರಿಸಲು ಅಮೆರಿಕದಲ್ಲಿ ಆವಿಷ್ಕರಿಸಿದ್ದ ತಂತ್ರಜ್ಞಾನದ ಪ್ರಯೋಗಕ್ಕಾಗಿ ಅಲ್ಲಿನ ಮಿಲಿಟರಿ ವಿಮಾನಗಳು ಐವತ್ತು ವರ್ಷಗಳ ಹಿಂದೆಯೇ ಮೋಡ ಬಿತ್ತನೆಗಾಗಿ ಭಾರತಕ್ಕೆ ಬಂದಿದ್ದವು’ ಎಂದು ಲೇಖಕ ಅರುಣ್‌ ರಾಮನ್‌ ಹೇಳಿದರು. ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ಶುಕ್ರವಾರ ಏರ್ಪಡಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಅದು 1967ರ ಜನವರಿ ತಿಂಗಳ ಮುಂಜಾವು. ಮೋಡಗಳಿಲ್ಲದ ಶುಭ್ರ ಆಕಾಶದಲ್ಲಿ ಸೂರ್ಯ ಅದೇತಾನೆ ಉದಯಿಸುತ್ತಿದ್ದ. ಆಗ ರೆಕ್ಕೆಗಳ ಅಡಿಯಲ್ಲಿ ಟ್ಯಾಂಕರ್‌ ಕಟ್ಟಿಕೊಂಡಿದ್ದ ಅಮೆರಿಕದ ಮಿಲಿಟರಿ ವಿಮಾನಗಳು ನವದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಇಳಿದಿದ್ದವು’ ಎಂದು ಹೇಳಿದರು.

‘ಎರಡು ವರ್ಷಗಳ ಸತತ ಬರಗಾಲದಿಂದ ಕಂಗೆಟ್ಟಿದ್ದ ಭಾರತ, ಅಮೆರಿಕದ ಪ್ರಸ್ತಾವಕ್ಕೆ ಗುಪ್ತವಾಗಿ ಒಪ್ಪಿಗೆ ಸೂಚಿಸಿತ್ತು. ಮೋಡಗಳ ಬರುವಿಕೆಗಾಗಿ ಅಲ್ಲಿನ ಮಿಲಿಟರಿ ವಿಮಾನಗಳು ಜನವರಿಯಿಂದ ಮೇ ತಿಂಗಳವರೆಗೆ ಕಾದಿದ್ದವು. ಆದರೆ, ಮೋಡಗಳು ತೇಲಿಬರಲು ಆರಂಭಿಸಿದಾಗ ಅವುಗಳು ಮಳೆ ಸುರಿಸುವಂತೆ ಮಾಡದೆ ವಿಯಟ್ನಾಂನತ್ತ ಹಾರಿದವು’ ಎಂದು ವಿವರಿಸಿದರು.

‘ಮಳೆ ಮಾರುತಗಳು ಭಾರತದ ಮೂಲಕವೇ ಪಾಕಿಸ್ತಾನದತ್ತ ಹೋಗುವ ಕಾರಣ ಎಲ್ಲ ಮೋಡಗಳು ಇಲ್ಲಿಯೇ ಮಳೆ ಸುರಿಸಿದರೆ ಉಪಖಂಡದಲ್ಲಿ ಯುದ್ಧವೇ ಸಂಭವಿಸುತ್ತದೆ ಎಂಬ ಭೀತಿಯಿಂದ ಅಮೆರಿಕ ಯೋಜನೆಯಿಂದ ಹಿಂದೆ ಸರಿಯಿತು’ ಎಂದು ವಿಶ್ಲೇಷಿಸಿದರು.
‘ಹವಾಮಾನ ಬದಲಾವಣೆ ಪರಿಣಾಮ ತಗ್ಗಿಸಲು ಒಪ್ಪಂದಗಳ ಮೇಲೆ ಒಪ್ಪಂದಗಳು ಆಗುತ್ತಿವೆಯೇ ಹೊರತು ಯಾವ ದೇಶವೂ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ’ ಎಂದು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.