ADVERTISEMENT

ಭೂ ಒತ್ತವರಿ ತಡೆ ಮಸೂದೆ ಅಂಕಿತಕ್ಕೆ ಆಗ್ರಹ

ರಾಜ್‌ನಾಥ್‌ ಸಿಂಗ್‌ ಭೇಟಿ ಮಾಡಲಿರುವ ಜಯಚಂದ್ರ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2014, 19:48 IST
Last Updated 15 ಸೆಪ್ಟೆಂಬರ್ 2014, 19:48 IST

ಬೆಂಗಳೂರು: ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ,  ದೀರ್ಘ ಸಮಯದಿಂದ ಬಾಕಿ ಉಳಿದಿ­ರುವ ಕರ್ನಾಟಕ ಭೂ ಒತ್ತುವರಿ ತಡೆ ಮಸೂದೆಗೆ ರಾಷ್ಟ್ರ­ಪತಿ ಅವರ ಅನುಮತಿ ದೊರಕುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ­ಯಲ್ಲಿ ಮಾತನಾಡಿದ ಅವರು ‘ 2007ರ  ಈ ಮಸೂದೆಯು ಭೂಗಳ್ಳರ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಮತ್ತು ಪ್ರಕರಣಗಳ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯ­ಗಳ ಸ್ಥಾಪನೆಗೆ ಅವಕಾಶ ಕಲ್ಪಿಸುತ್ತದೆ. ಮಸೂದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೇಳಿದ್ದ ಎಲ್ಲ ಸ್ಪಷ್ಟನೆಗಳನ್ನು ನೀಡಲಾಗಿದೆ. ಆದಷ್ಟು ಬೇಗ ರಾಷ್ಟ್ರಪತಿ ಅವರ ಅಂಕಿತ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡ­ಲಾಗು­ವುದು’ ಎಂದರು.

ಎ.ಟಿ. ರಾಮಸ್ವಾಮಿ ನೇತೃ­ತ್ವದ ಸದನ ಸಮಿತಿ ನೀಡಿರುವ ವರದಿಯಲ್ಲಿ ಉಲ್ಲೇಖಿಸಿರು­ವಂತೆ ಮತ್ತು ಮಾಡಿರುವ ಶಿಫಾ­ರಸುಗಳಂತೆ ಒತ್ತುವರಿ­ಯಾಗಿರುವ ಭೂಮಿಯನ್ನು ತೆರವುಗೊಳಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳು­ತ್ತಿದೆ. ಸಮಿತಿಯ ವರದಿಯ ಅನುಷ್ಠಾನ ಪ್ರಕ್ರಿಯೆ­ಯನ್ನು ರಾಜ್ಯ ಹೈಕೋರ್ಟ್‌ ಕೂಡ ಮೇಲ್ವಿ­ಚಾರಣೆ ನಡೆಸುತ್ತಿದೆ. ಭೂಗಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿ­ನಲ್ಲಿ ರಾಜ್ಯ ಆಡಳಿತ ಯಂತ್ರ­ವನ್ನು ಇನ್ನಷ್ಟು ಬಲ­ಪಡಿಸುವು­ದಕ್ಕಾಗಿ ಜಾಗೃತ ಘಟಕ ಸ್ಥಾಪಿಸಲು ಚಿಂತನೆ ನಡೆದಿದೆ ಎಂದರು.

ಅಕ್ಟೋಬರ್‌ 2ರಂದು ಸಜಾಬಂದಿ­ಗಳ ಬಿಡುಗಡೆ ಯತ್ನ: 14 ವರ್ಷಗಳ ಜೈಲುಶಿಕ್ಷೆ ಅವಧಿಯನ್ನು ಪೂರ್ಣ­ಗೊಳಿಸಿರುವ ಕೆಲವು ಕೈದಿಗಳನ್ನು ಗಾಂಧಿ­ಜಯಂತಿಯ ದಿನವಾದ ಅಕ್ಟೋಬರ್‌ 2ರಂದು ಬಿಡುಗಡೆ­ಮಾಡಲು ಸರ್ಕಾರ ಯೋಚಿಸುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

‘ಕೈದಿಗಳ ಬಿಡುಗಡೆಗಾಗಿ ಸರ್ಕಾರ ಇತ್ತೀಚೆಗೆ ಮಾರ್ಗ­ದರ್ಶಿ ಸೂತ್ರಗಳನ್ನು ಮಾರ್ಪಾಡು ಮಾಡಿದೆ. ಕೈದಿಗಳ ಬಿಡುಗಡೆಗೂ ಮುನ್ನ ಸರ್ಕಾರ ರಾಜ್ಯಪಾಲ ವಜುಭಾಯ್‌ ವಾಲಾ ಅವರ ಅನುಮತಿ ಪಡೆಯಲಿದೆ. ಈ ಸಂಬಂಧ ಕಾನೂನಿನ ಚೌಕಟ್ಟಿನಲ್ಲಿ ಎಲ್ಲ  ಸಹಕಾರ ನೀಡುವ ಭರವಸೆ­ಯನ್ನು ರಾಜ್ಯಪಾಲರು ನೀಡಿದ್ದಾರೆ’ ಎಂದರು.

ಆದರೆ, ಬಿಡುಗಡೆ ಮಾಡಲು ಉದ್ದೇಶಿಸಿರುವ ಕೈದಿಗಳ ಸಂಖ್ಯೆಯನ್ನು ಅವರು ಬಹಿರಂಗ ಪಡಿಸ­ಲಿಲ್ಲ. ಗೃಹ ಇಲಾಖೆಯೊಂದಿಗೆ ಚರ್ಚಿಸಿದ ಬಳಿಕ ಕೈದಿಗಳ ಪಟ್ಟಿ ಸಿದ್ಧಪಡಿಸಲಾಗುವುದು ಎಂದಷ್ಟೇ ಅವರು ಹೇಳಿದರು. ಸಜಾಬಂಧಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್‌ನ ಅನುಮತಿಯನ್ನೂ ಪಡೆಯ­ಬೇಕಿದೆ ಎಂದು ಸಚಿವರು ಮಾಹಿತಿ ನೀಡಿದರು.

2006ರಿಂದ ರಾಜ್ಯದಲ್ಲಿ ಪೂರ್ಣ ಜೈಲು ಶಿಕ್ಷೆ ಅನುಭವಿಸಿರುವ ಕೈದಿಗಳ ಬಿಡುಗಡೆ ಆಗಿಲ್ಲ. ಇಂತಹ ಕೈದಿಗಳನ್ನು ಬಿಡುಗಡೆ­ಗೊಳಿಸಲು ಸರ್ಕಾರಕ್ಕೆ ಅಧಿಕಾರ ಕಲ್ಪಿಸುವುದಕ್ಕಾಗಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 432ರ ಅಡಿಯ ಮಾರ್ಗದರ್ಶಿ ಸೂತ್ರ­ಗಳನ್ನು ರಾಜ್ಯ ಸಚಿವ ಸಂಪುಟವು ಇತ್ತೀಚೆಗೆ ಮಾರ್ಪಾಟು ಮಾಡಿತ್ತು.

ಯಾವ ಬಿಕ್ಕಟ್ಟು ಇಲ್ಲ: ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಯಾವುದೇ ರೀತಿಯ ಸಂವಿಧಾನ ಬಿಕ್ಕಟ್ಟು ಬರಲು ಸಾಧ್ಯವಿಲ್ಲ.  ಕೈದಿಗಳ ಬಿಡುಗಡೆಯ ಸಂಬಂಧ ಕಾನೂನಿನ ಚೌಕಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಪೂರ್ಣ ಸಹಕಾರ ನೀಡುವುದಾಗಿ ರಾಜ್ಯಪಾಲ ವಜುಭಾಯ್‌ ವಾಲಾ  ಹೇಳಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

‘ಕೈದಿಗಳ ಬಿಡುಗಡೆ ವಿಚಾರದಲ್ಲಿ ಸರ್ಕಾರ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲ್ಲ ಅಥವಾ ಅವರನ್ನು ಮೂಲೆಗುಂಪು ಮಾಡಿಲ್ಲ. 14 ವರ್ಷ ಜೈಲು ಶಿಕ್ಷೆ ಪೂರೈಸಿರುವ ಹಲವು ಹಿರಿಯ, ಮಹಿಳಾ ಕೈದಿಗಳು ಜೈಲಿನಲ್ಲಿ ಇದ್ದಾರೆ. ಮಾನ­ವೀಯ ನೆಲೆಯಲ್ಲಿ ಅವರನ್ನು ಬಿಡುಗಡೆಗೊಳಿಸಲು ಸರ್ಕಾರ ಬಯಸಿದೆ’ ಎಂದು  ಸ್ಪಷ್ಟ­ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.