ADVERTISEMENT

ಮಂಡಿ ಬದಲಿಸಲು ಕಂಪ್ಯೂಟರ್‌ ನೆರವು!

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:54 IST
Last Updated 27 ಮೇ 2015, 19:54 IST

ಬೆಂಗಳೂರು: ನಗರದ ಸಂಜಯ ಗಾಂಧಿ ತುರ್ತು ನಿಗಾ ಮತ್ತು ಅಸ್ಥಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಕಂಪ್ಯೂಟರ್‌ ಸಹಾಯದಿಂದ ಸಂಪೂರ್ಣ ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಸಾಮಾನ್ಯವಾಗಿ ಮಂಡಿ ಶಸ್ತ್ರಚಿಕಿತ್ಸೆ ನಡೆಯುತ್ತದೆ. ಆದರೆ, ಮೊದಲ ಬಾರಿ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕಂಪ್ಯೂಟರ್‌  ಆಧಾರಿತ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಹಾಸನದ ಗೃಹಿಣಿ ನಳಿನಿ (64 ವರ್ಷ) ಅವರಿಗೆ 2008ರಿಂದಲೂ ಒಂದು ಮಂಡಿ ನೋವು ಇತ್ತು. ನಡೆಯಲೂ ಸಾಧ್ಯವಾಗದಂತಹ ಅಸಹನೀಯ ನೋವಿನಿಂದ ಬಳಲುತ್ತಿದ್ದರು. ಹಾಸನ ಸೇರಿದಂತೆ ಹಲವು ಕಡೆಗಳಲ್ಲಿ ವೈದ್ಯರ ಸಲಹೆ ಪಡೆದರೂ ಪ್ರಯೋಜನ ಆಗಿರಲಿಲ್ಲ.

ಕಳೆದ ವರ್ಷ ನಳಿನಿ ಅವರ ಸಂಬಂಧಿಯೊಬ್ಬರಿಗೆ ಸಂಜಯ ಗಾಂಧಿ ಆಸ್ಪತ್ರೆಯಲ್ಲಿ ಮಂಡಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅವರು ಕೆಲವೇ ಸಮಯದಲ್ಲಿ ಗುಣಮುಖರಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇದರಿಂದ ನಳಿನಿ ಅವರು ಪ್ರಭಾವಿತರಾದರು.
ಕಳೆದ ತಿಂಗಳು ಸಂಜಯ ಗಾಂಧಿ ಆಸ್ಪತ್ರೆಯ ವೈದ್ಯರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡರು. ಮೇ 16ರಂದು ಆಸ್ಪತ್ರೆಗೆ ದಾಖಲಾದರು.

ಆಸ್ಪತ್ರೆಯ ಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಎಚ್.ಎಸ್. ಚಂದ್ರ­ಶೇಖರ್‌ ನೇತೃತ್ವದಲ್ಲಿ ಆರ್ಥೊಪೆಡಿಕ್ ಸರ್ಜನ್‌ ಡಾ. ರಾಮಾ ಸುಬ್ಬಾ­ರೆಡ್ಡಿ, ಅರಿವಳಿಕೆ ತಜ್ಞರಾದ ಆಶಾರಾಣಿ ಅವರನ್ನು ಒಳಗೊಂಡ ತಂಡ ಮೇ 20ರಂದು ಶಸ್ತ್ರಚಿಕಿತ್ಸೆ ನಡೆಸಿತು. ನಳಿನಿ ಅವರು ತ್ವರಿತಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು, 2–3 ದಿನಗಳಲ್ಲಿ ಮನೆಗೆ ಮರಳಲಿದ್ದಾರೆ.

‘ಕಳೆದ 8 ವರ್ಷಗಳಿಂದ ನರಕಯಾತನೆ ಅನುಭವಿಸಿದ್ದೆ. ಮೊಣಕಾಲು ಸ್ವಲ್ಪ ಬೆಂಡಾಗಿ ತುಸು ದೂರ ನಡೆಯಲೂ ಕಷ್ಟ ಪಡಬೇಕಿತ್ತು. ನಡೆಯುವಾಗ ಬೇರೆಯವರ ಸಹಾಯ ಬೇಕಿತ್ತು. ಈಗ ನಡೆಯಲು ಒದ್ದಾಡಬೇಕಿಲ್ಲ’ ಎಂದು ನಳಿನಿ ಸಂತಸ ಹಂಚಿಕೊಂಡರು.
‘ಮಂಡಿ ಶಸ್ತ್ರಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಶೇ 10ರಷ್ಟು  ವ್ಯತ್ಯಾಸ ಉಂಟಾಗುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ತಜ್ಞರ ಸಾಮರ್ಥ್ಯದ ಮೇಲೆ ಏರುಪೇರಾಗುತ್ತದೆ. ಆದರೆ, ಕಂಪ್ಯೂಟರ್‌ ನೆರವಿನ ಶಸ್ತ್ರಚಿಕಿತ್ಸೆ ಶೇ 100 ನಿಖರವಾದುದು. ಇದರಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ಕಾಲಿನ ಉದ್ದ ಹಾಗೂ ಸಾಮಾನ್ಯ ಕಾಲಿನ ಉದ್ದ ಒಂದೇ ರೀತಿಯಲ್ಲಿ ಇರುತ್ತದೆ. ಶಸ್ತ್ರಚಿಕಿತ್ಸೆಯ ನಂತರವೂ ಕಾಲಿನ ಉದ್ದ ಏರುಪೇರಾಗಿ ದೇಹ ಬಾಗುವುದು ತಪ್ಪುತ್ತದೆ’ ಎಂದು ಡಾ.ಚಂದ್ರ­ಶೇಖರ್‌ ಮಾಹಿತಿ ನೀಡುತ್ತಾರೆ.

‘ಕಂಪ್ಯೂಟರ್‌ ತಂತ್ರಜ್ಞಾನದ ನೆರವಿನಿಂದ ಕಾರ್ಪೊರೇಟ್‌ ಆಸ್ಪತ್ರೆಗಳಲ್ಲಿ  ಮಂಡಿ ಶಸ್ತ್ರಚಿಕಿತ್ಸೆ ನಡೆಸುವುದು ಸಾಮಾನ್ಯ. ಈ ಸೌಲಭ್ಯ ಬಡವರು ಹಾಗೂ ಮಧ್ಯಮವರ್ಗದವರಿಗೆ ದುಬಾರಿ. ಇಂತಹ ವರ್ಗದವರಿಗೆ ನೆರವಾಗುವ ಉದ್ದೇಶದಿಂದ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ನಡೆಸಲಾಗಿದೆ. ಈಗ ಉಪಕರಣಗಳನ್ನು ಬಾಡಿಗೆ ಪಡೆದು ಚಿಕಿತ್ಸೆ ನಡೆಸಲಾಗಿದೆ.  ಕಂಪ್ಯೂಟರ್‌ ಉಪಕರಣಗಳನ್ನು ಖರೀದಿಸಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ನಡೆಸಲು ಯೋಜಿಸಲಾಗಿದೆ’ ಎಂದು ಅವರು ವಿವರ ನೀಡುತ್ತಾರೆ.
ಸಂಪರ್ಕಕ್ಕೆ: ಡಾ.ಎಚ್‌.ಎಸ್‌. ಚಂದ್ರಶೇಖರ್‌ ಅವರ ಸಂಖ್ಯೆ 9845506627,

ಆಸ್ಪತ್ರೆಯ ದೂರವಾಣಿ ಸಂಖ್ಯೆ: 080–26562822.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.