ADVERTISEMENT

ಮಗಳಿಗೆ ಬೆಂಕಿ ಹಚ್ಚಿ ತಾಯಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 19:40 IST
Last Updated 4 ಡಿಸೆಂಬರ್ 2017, 19:40 IST

ಬೆಂಗಳೂರು: ಮಾನಸಿಕ ಅಸ್ವಸ್ಥರಾಗಿದ್ದ ಮಗಳನ್ನು ಸಾಕಲಾರದೆ, ಅವರ ಸಮೇತ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.

ಮಾಗಡಿರಸ್ತೆಯ ನಿವಾಸಿ ರಂಗಮ್ಮ (64) ಹಾಗೂ ಅವರ ಮಗಳು ತಿಮ್ಮಮ್ಮ (34) ಮೃತರು. ಭಾನುವಾರ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ರಂಗಮ್ಮ, ಮಗಳ ಮೇಲೆ ಸೀಮೆಎಣ್ಣೆ ಸುರಿದಿದ್ದರು. ಬಳಿಕ ತಮ್ಮ ಮೇಲೂ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು.

ಕ್ಷಣಮಾತ್ರದಲ್ಲಿ ಬೆಂಕಿ ಹೊತ್ತಿ
ಕೊಂಡು ಇಬ್ಬರೂ ಚೀರಾಡಲು ಆರಂಭಿಸಿದ್ದರು. ಸಹಾಯಕ್ಕೆ ಹೋಗಿದ್ದ ಸ್ಥಳೀಯರು, ಬೆಂಕಿ ನಂದಿಸಿ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರಿಬ್ಬರು ರಾತ್ರಿಯೇ ಮೃತಪಟ್ಟಿದ್ದಾರೆ.

ADVERTISEMENT

‘ತಾಯಿ, ಮಗಳ ದೇಹವು ಶೇ 90ರಷ್ಟು ಸುಟ್ಟಿತ್ತು. ರಾತ್ರಿ 8.30ಕ್ಕೆ ಮಗಳು ಮೃತಪಟ್ಟರೆ, 9 ಗಂಟೆ ಸುಮಾರಿಗೆ ತಾಯಿ ಕೊನೆಯುಸಿರೆಳೆದರು. ಅವರಿಬ್ಬರ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಊಟಕ್ಕಾಗಿ ಅಲೆಯುತ್ತಿದ್ದ ತಾಯಿ:‘ಸಣ್ಣ ವಯಸ್ಸಿನಲ್ಲೇ ರಂಗಮ್ಮ ಅವರನ್ನು ಹುಚ್ಚಯ್ಯ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. ಬಳಿಕ ರಂಗಮ್ಮ, ತಿಮ್ಮಮ್ಮ ಅವರಿಗೆ ಜನ್ಮ ನೀಡಿದ್ದರು. ಮಗು ಬೆಳೆಯುತ್ತ ಹೋದಂತೆ, ಮಾನಸಿಕ ಅಸ್ವಸ್ಥೆ ಎಂಬುದು ತಿಳಿಯಿತು. ಆತಂಕಕ್ಕೆ ಒಳಗಾದ ದಂಪತಿ, ಹಲವು ವೈದ್ಯರ ಬಳಿ ತೋರಿಸಿದರೂ ಪ್ರಯೋಜನವಾಗಿರಲಿಲ್ಲ’ ಎಂದು ಕೆ.ಬಿ.ಅಗ್ರಹಾರ ಪೊಲೀಸರು ತಿಳಿಸಿದರು.

‘ಬಡತವಿದ್ದರೂ ದಂಪತಿಯು ಮಗಳನ್ನು ಚೆನ್ನಾಗಿ ನೋಡಿ
ಕೊಂಡಿದ್ದರು. ಮಗಳ ದಿನನಿತ್ಯದ ಎಲ್ಲ ಕೆಲಸಗಳನ್ನು ಅವರೇ ಮಾಡುತ್ತಿದ್ದರು. ಕೆಲ ವರ್ಷಗಳ ಹಿಂದಷ್ಟೇ ಹುಚ್ಚಯ್ಯ ತೀರಿಕೊಂಡಿದ್ದರಿಂದ ಮಗಳನ್ನು ಸಾಕುವುದು ರಂಗಮ್ಮ ಅವರಿಗೆ ಕಷ್ಟವಾಗುತ್ತ ಹೋಯಿತು’.

‘ಸಂಬಂಧಿಕರ ಆಶ್ರಯ ಬಯಸಿದ್ದ ರಂಗಮ್ಮ, ಅಣ್ಣ ರಂಗಸ್ವಾಮಿ ಅವರಿಗೆ ಸೇರಿದ್ದ ಮಾಗಡಿ ರಸ್ತೆಯಲ್ಲಿದ್ದ ಕೊಠಡಿಯೊಂದರಲ್ಲಿ ಉಳಿದುಕೊಂಡಿದ್ದರು. ಕೆಲಸ ಮಾಡುವ ಶಕ್ತಿ ಇಲ್ಲದಿದ್ದರೆ ರಂಗಮ್ಮ, ಊಟಕ್ಕಾಗಿ ನಿತ್ಯವೂ ಅವರಿವರ ಮನೆ ಸುತ್ತಾಡುತ್ತಿದ್ದರು. ಅವರು ಕೊಟ್ಟ ಊಟವನ್ನೇ ಮನೆಗೆ ತಂದು ಮಗಳೊಂದಿಗೆ ತಿನ್ನುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಮಗಳಿಗೆ ವಯಸ್ಸಾಗುತ್ತಿದ್ದಂತೆ, ಅವರ ಆರೋಗ್ಯ ಮತ್ತಷ್ಟು ಹದಗೆಡುತ್ತ ಹೋಯಿತು. ಆಸ್ಪತ್ರೆಗೆ ತೋರಿಸಲು ಸಹ ತಾಯಿ ಬಳಿ ಹಣವಿಲ್ಲದಂತಾಯಿತು. ಅದರಿಂದ ನೊಂದ ತಾಯಿ ಈಗ ಮಗಳ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.